ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ (Mysuru) ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಭೇಟಿ ನೀಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರ(Swami Vivekananda) ಐತಿಹಾಸಿಕ ಭೇಟಿಯ ನೆನಪಿನಲ್ಲಿ ನಿರ್ಮಿಸಲಾಗಿರುವ ‘ವಿವೇಕ ಸ್ಮಾರಕ’ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ಆಗಮಿಸುತ್ತಿದ್ದು, ಇಡೀ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಪ್ರವಾಸದ ವೇಳಾಪಟ್ಟಿ
ಮಧ್ಯಾಹ್ನ 2:55 – ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
ಮಧ್ಯಾಹ್ನ 3:15 – ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ನಗರದ ಓವಲ್ ಮೈದಾನಕ್ಕೆ ಆಗಮನ
ಮಧ್ಯಾಹ್ನ 3:25 – ಓವಲ್ ಮೈದಾನದಿಂದ ರಸ್ತೆ ಮಾರ್ಗವಾಗಿ ವಿವೇಕ ಸ್ಮಾರಕಕ್ಕೆ ತೆರಳಲಿರುವ ಮೋದಿ, ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ 5 ನಿಮಿಷಗಳ ಕಾಲ ಧ್ಯಾನ ಮಾಡಲಿದ್ದಾರೆ.
ಮಧ್ಯಾಹ್ನ 3:30 – ಸಂಜೆ 5:15: ರಾಮಕೃಷ್ಣ ಆಶ್ರಮದ ಶಾಲಾ ಆವರಣದಲ್ಲಿ ನಡೆಯುವ ಪ್ರಮುಖ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ
ಸಂಜೆ 5:55 – ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ನಿರ್ಗಮನ
ಮೈಸೂರಿನಲ್ಲಿ ನಾಳೆ, ಆಗಸ್ಟ್ 1 ರಂದು, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ—’ವಿವೇಕ ಸ್ಮಾರಕ’ ಉದ್ಘಾಟನೆಗೊಳ್ಳಲಿದೆ. ಇದು 1892 ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ನೀಡಿದ್ದ ಐತಿಹಾಸಿಕ ಭೇಟಿಯ ನೆನಪಿನಲ್ಲಿ ನಿರ್ಮಾಣಗೊಂಡಿದೆ. ಈ ವಿವೇಕ ಸ್ಮಾರಕವು ತರಗತಿ ಕೊಠಡಿಗಳು, ಗ್ರಂಥಾಲಯ, ಧ್ಯಾನ ಮತ್ತು ಯೋಗ ಮಂದಿರ ಸೇರಿದಂತೆ ಹಲವು…
— Narendra Modi (@narendramodi) July 31, 2026
ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್(Arun Yogiraj) ಅವರು ಕೆತ್ತಿರುವ ಸ್ವಾಮಿ ವಿವೇಕಾನಂದರ ಅತ್ಯಾಕರ್ಷಕ ಏಕಶಿಲಾ ಮೂರ್ತಿಯನ್ನು ಪ್ರಧಾನಿ ಮೋದಿಯವರಿಗೆ ನೆನಪಿನ ಕಾಣಿಕೆಯಾಗಿ ನೀಡಲಾಗುತ್ತದೆ. ಇದನ್ನೂ ಓದಿ: ಕೊಡಗು ಜಿಲ್ಲೆಯಾದ್ಯಂತ ಮಳೆ ಅರ್ಭಟ; ಹಾರಂಗಿ ಜಲಾಶಯದಿಂದ 13,000 ಕ್ಯೂಸೆಕ್ ನೀರು ರಿಲೀಸ್
ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಎಸ್‌ಪಿಜಿ (SPG) ಪಡೆ ಹಾಗೂ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದ ಹೊತ್ತಿನಲ್ಲೇ, ಶುಕ್ರವಾರ ಯುವಕನೊಬ್ಬ ಕೈಯಲ್ಲಿ ಲಾಂಗ್ (ಕತ್ತಿ) ಹಿಡಿದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಆತಂಕಕಾರಿ ಘಟನೆ ನಡೆದಿತ್ತು.
ಘಟನೆ ಬೆನ್ನಲ್ಲೇ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ಪ್ರಧಾನಿ ಸಂಚರಿಸುವ ಮಾರ್ಗ ಹಾಗೂ ಕಾರ್ಯಕ್ರಮದ ಸ್ಥಳಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
