ಚಿಕ್ಕಮಗಳೂರು: ಜೂಜು ಅಡ್ಡೆ ಮೇಲೆ ಪೊಲೀಸರು (Police) ದಾಳಿ ನಡೆಸಿದ ವೇಳೆ ಪರಾರಿಯಾಗಲು ಯತ್ನಿಸಿದ ವ್ಯಕ್ತಿ ಜಾರಿಬಿದ್ದು ಸಾವನ್ನಪ್ಪಿದ ಘಟನೆ ಎನ್.ಆರ್.ಪುರ (NR Pura) ತಾಲೂಕಿನ ಕಡಬಗೆರೆ ಸಮೀಪದ ಕಾಫಿತೋಟದಲ್ಲಿ ನಡೆದಿದೆ.
ಗುಡ್ಡೆಕೊಪ್ಪ ಗ್ರಾಮದ ರಮೇಶ್ (35) ಮೃತ ದುರ್ದೈವಿ. ಬಾಸಾಪುರ ಅರಣ್ಯ ಪ್ರದೇಶದಲ್ಲಿ ಕಳೆದ ರಾತ್ರಿ ಗುಂಪೊಂದು ಅಂದರ್-ಬಾಹರ್ ಆಡುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಪೊಲೀಸರು ದಾಳಿ ನಡೆಸಿದ್ದರು. ಅಲ್ಲಿದ್ದ 9 ಜನ ಪರಾರಿಯಾಗಲು ಯತ್ನಿಸಿದ್ದು, ಅದರಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ರಮೇಶ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಜಾರಿಬಿದ್ದು, ತಲೆಗೆ ಬಂಡೆ ಬಡಿದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಸಾಗರ | ಕೆರೆ ತಡೆಗೋಡೆಗೆ ಖಾಸಗಿ ಬಸ್ ಡಿಕ್ಕಿ – 10 ಮಂದಿ ವಿದ್ಯಾರ್ಥಿಗಳಿಗೆ ಗಾಯ
ರಮೇಶ್ ಕಳೆದ ರಾತ್ರಿ ಮನೆಗೆ ಹೋಗದ ಕಾರಣ ಮನೆಯವರು ಕೂಡ ಆತಂಕಕ್ಕೀಡಾಗಿದ್ದರು. ಇಂದು (ಆ.29) ಹುಡುಕಾಡುವಾಗ ಗ್ರಾಮದಂಚಿನ ಅರಣ್ಯ ಪ್ರದೇಶದಲ್ಲಿ ತಲೆಯಿಂದ ರಕ್ತಸ್ರಾವವಾಗಿ ರಮೇಶ್ ಮೃತದೇಹ ಪತ್ತೆಯಾಗಿತ್ತು. ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯದಿಂದ ಓಡಿಹೋದ ಏಳು ಜನರಲ್ಲಿ ಮೃತ ರಮೇಶ್ ಇದ್ದನೋ,ಇಲ್ಲವೋ ಎಂಬ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಶಕ್ಕೆ ಪಡೆದ ಇಬ್ಬರು ಆತ ಇದ್ದನೆಂದು ಹೇಳಿದ್ದಾರಂತೆ. ಇದನ್ನೂ ಓದಿ: ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ – ಅನಾಥವಾದ ಕಂದಮ್ಮ
