– ನಟ ರಂಗಾಯಣ ರಘು ಸೇರಿ ಗಣ್ಯರಿಂದ ಶುಭಹಾರೈಕೆ
ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ (Chikkanna) ಮದುವೆ ಸಂಭ್ರಮದಲ್ಲಿದ್ದಾರೆ. ನಟ ಚಿಕ್ಕಣ್ಣ ಮತ್ತು ಪಾವನಾ (Chikkanna-Pavana Reception) ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಮೈಸೂರಿನ ಕಲ್ಯಾಣ ಮಂಟಪದಲ್ಲಿ ಇಂದು ಅದ್ಧೂರಿ ಆರತಕ್ಷತೆ ನಡೆಯುತ್ತಿದ್ದು, ಗಣ್ಯರು-ಸಿನಿತಾರೆಯರು ನವಜೋಡಿಗೆ ಶುಭಕೋರಿದ್ದಾರೆ.
ಭಾನುವಾರ (ಆ.30) ನಟ ಚಿಕ್ಕಣ್ಣ ಶ್ರೀರಂಗಪಟ್ಟಣದ ಮಹದೇವಪುರದ ಹುಡುಗಿ ಪಾವನಾ ಅವರನ್ನು ವರಿಸಲಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರೋ ಅದ್ಧೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ನವ ವಧು-ವರರು ಮಿಂಚಿದ್ದಾರೆ. ಜೋಡಿಯ ಕುಟುಂಬಸ್ಥರು ಹಾಗೂ ಸಿನಿರಂಗದ ಗಣ್ಯರು ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: Photo Gallery | ಮದುವೆ ಸಂಭ್ರಮ – ಅರಿಶಿಣದ ಕಳೆಯಲ್ಲಿ ಮಿನುಗಿದ ಚಿಕ್ಕಣ್ಣ ಜೋಡಿ

ಚಿಕ್ಕಣ್ಣ-ಪಾವನಾ ಅರತಕ್ಷತೆಗೆ ಹಿರಿಯ ನಟ ರಂಗಾಯಣ ರಘು ಆಗಮಿಸಿ ಶುಭಹಾರೈಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಣ್ಣ ಕಷ್ಟದಿಂದ ಬೆಳೆದ ನಟ. ಚಿಕ್ಕಣ್ಣ ಹಾಗೂ ಪತ್ನಿ ಇಬ್ಬರಿಗೂ ಒಳಿತಾಗಲಿ. ಇಡೀ ರಾಜ್ಯಕ್ಕೆ ಗೊತ್ತಾಗುವ ಹಾಗೆ ಮದ್ವೆ ಆಗ್ತಿದ್ದಾನೆ. ಇಬ್ಬರಿಗೂ ಶುಭವಾಗಲಿ ಎಂದಿದ್ದಾರೆ.
ನವಜೋಡಿಗೆ ಶುಭಕೋರಿದ ನಿರ್ಮಾಪಕ ಸಂದೇಶ್, ನಮ್ಮ ಒಡೆಯ ಚಿತ್ರದಲ್ಲಿ ಚಿಕ್ಕಣ್ಣ ನಟಿಸಿದ್ರು. ತುಂಬಾ ಒಳ್ಳೆಯ ವ್ಯಕ್ತಿ. ಅವರು ಕೂಡ ನಮ್ಮ ಮೈಸೂರಿನವರೇ. ಮದ್ವೆ ಆಗ್ತಿರೋದಕ್ಕೆ ಒಳ್ಳೆದಾಗಲಿ. ಅವರ ಮುಂದಿನ ಸಿನಿಮಾಗಳಿಗೂ ಶುಭವಾಗಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟ ಚಿಕ್ಕಣ್ಣ ಮದುವೆ ಸಂಭ್ರಮ – ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ
