– ನನ್ನನ್ನು ಅಣ್ಣ ಅಂತ ಕರೆಯೋ ಯೋಗ್ಯತೆ ನಿನಗಿಲ್ಲ ಅಂತ ನಾಗೇಂದ್ರಗೆ ಟಾಂಗ್
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣಾ ಅಖಾಡಕ್ಕೆ ಬನ್ನಿ ಎಂಬ ನಾಗೇಂದ್ರ (B.Nagendra) ಸವಾಲನ್ನು ಮಾಜಿ ಸಚಿವ ಶ್ರೀರಾಮುಲು (Sriramulu) ಸ್ವೀಕರಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಶ್ರೀರಾಮುಲು, ನಾಗೇಂದ್ರ ಜನತಾ ನ್ಯಾಯಾಲಯಕ್ಕೆ ಬನ್ನಿ ಅಂದಿದ್ದಾರೆ. ಜನತಾ ನ್ಯಾಯಾಲಯಕ್ಕೆ ಹೋಗಲು ಈಗಲೇ ಯಾಕೆ ಅಷ್ಟೊಂದು ಅವಸರ ಅವರಿಗೆ? ಈಗ ಅವರೇ ರಾಜೀನಾಮೆ ಕೊಟ್ಟು ಅವರೇ ಸ್ಪರ್ಧಿಸಲಿ. ಆದರೆ, 2028 ಕ್ಕೆ ನಾಗೇಂದ್ರ ಎಲ್ಲಿ ಸ್ಪರ್ಧೆ ಮಾಡ್ತಾರೋ, ನಾನೂ ಅಲ್ಲೇ ನಿಲ್ತೇನೆ ಅಂತ ಶ್ರೀರಾಮುಲು ಜವಾಬು ಕೊಟ್ಟರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡ್ತೀನಿ.. ಜನತಾ ನ್ಯಾಯಾಲಯಕ್ಕೆ ಹೋಗೋಣ ಬನ್ನಿ: ರಾಮುಲು, ರೆಡ್ಡಿಗೆ ಬಿ.ನಾಗೇಂದ್ರ ಸವಾಲ್
ಈಗಲೇ ಜನತಾ ನ್ಯಾಯಾಲಯಕ್ಕೆ ಬನ್ನಿ ಅಂದ್ರೆ ಅವರು ಸರ್ಕಾರ ವಿಸರ್ಜಿಸಿ ಬರಲಿ. ನಾವೂ ಈಗಲೇ ಜನತಾ ನ್ಯಾಯಾಲಯಕ್ಕೆ ಬರಲು ರೆಡಿ ಎಂದು ನಾಗೇಂದ್ರಗೆ ಶ್ರೀರಾಮುಲು ಮರು ಸವಾಲು ಹಾಕಿದರು.
ಸೆಪ್ಟೆಂಬರ್ 1 ರಿಂದ ಬಳ್ಳಾರಿ ಚಲೋ ಮಾಡೋದಾಗಿ ತಿಳಿಸಿದ, ನಾಗೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಾಗೇಂದ್ರ ಕಣ್ಣೀರಿಗೆ ನಾವು ಕಾರಣರಲ್ಲ, ಬಿಜೆಪಿ ಕಾರಣ ಅಲ್ಲ. ನಾಗೇಂದ್ರ ಕಣ್ಣೀರಿಗೆ ಕಾಂಗ್ರೆಸ್ ಕಾರಣ. ನಾಗೇಂದ್ರಗೆ ಚಂದ್ರಶೇಖರ್ ಆತ್ಮಹತ್ಯೆಯ ಕರ್ಮ ಕಾಡ್ತಿದೆ. ಕರ್ಮ ಹಿಂಬಾಲಿಸ್ತಿದೆ. ಚಂದ್ರಶೇಖರ್ ಕುಟುಂಬದ ಕಣ್ಣೀರು, ನೋವು ಕರ್ಮವಾಗಿ ಕಾಡ್ತಿದೆ. ಚಂದ್ರಶೇಖರ್ ಕುಟುಂಬಕ್ಕೆ ನೆರವಾದ್ಯಾ? ಹೋಗಿ ಅವರ ಪರಿಸ್ಥಿತಿ ನೋಡಿದ್ಯಾ ಅಂತ ಕಿಡಿಕಾರಿದರು. ಇದನ್ನೂ ಓದಿ: ಕಣ್ಣೀರಿಟ್ಟು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ
ನಾಗೇಂದ್ರ ನನ್ನನ್ನು ಅಣ್ಣ ಅಂದಿದ್ದಾನೆ. ಅಣ್ಣ ಅಂತ ಕರೆಯೋ ಯೋಗ್ಯತೆ ನಿನಗೆ ಇಲ್ಲ. ನನ್ನನ್ನು ಅಣ್ಣ ಅಂತ ಕರೀಬೇಡ. ನಿನ್ನಂಥವನಿಗೆ ಅಣ್ಣ ಆಗಲು ಬಯಸಲ್ಲ ಅಂತ ಶ್ರೀರಾಮುಲು ವಾಗ್ದಾಳಿ ನಡೆಸಿದರು. ಇದೇ ವೇಳೆ ಪಾದಯಾತ್ರೆಯ ಲೋಗೋ ಬಿಡುಗಡೆ ಮಾಡಲಾಯ್ತು.
