-ಅರ್ಧ ಗಂಟೆಯ ಟೀ ಬ್ರೇಕ್‌ನಿಂದ ಉಳಿಯಿತು ಜೀವ
ಬೆಂಗಳೂರು: ನೇಪಾಳದಲ್ಲಿ (Nepal) ಸಂಭವಿಸಿದ ಭೀಕರ ಜಲಪ್ರಳಯದ ನಡುವೆ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರಿಗೆ (Kannadigas) ಕೊನೆಗೂ ನೆಮ್ಮದಿ ಸಿಕ್ಕಿದೆ. ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ 54 ಮಂದಿ ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕನ್ನಡಿಗರು, ನೇಪಾಳದಲ್ಲಿ ಎದುರಾದ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾವೇರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 54 ಮಂದಿ ಪ್ರವಾಸಿಗರು ಆಗಸ್ಟ್ 23ರಂದು ನೇಪಾಳ ಪ್ರವಾಸ ಕೈಗೊಂಡಿದ್ದರು. ಆದರೆ ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಭೀಕರ ಫ್ಲ್ಯಾಶ್ ಫ್ಲಡ್ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿತ್ತು. ಭೋಟೆ ಕೋಶಿ ನದಿ ಪ್ರದೇಶದಲ್ಲಿ ಪ್ರವಾಹದ ರಭಸಕ್ಕೆ ರಸ್ತೆಗಳು, ಸೇತುವೆಗಳು ಹಾಗೂ ಹಲವು ಮೂಲಸೌಕರ್ಯಗಳು ಕೊಚ್ಚಿಹೋಗಿದ್ದವು. ಪ್ರವಾಹದಿಂದ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರು. ಇದನ್ನೂ ಓದಿ: ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದ ಕಂತೆ ಕಂತೆ ನೋಟು ತುಂಬಿದ್ದ ಬ್ಯಾಂಕ್ ಲಾಕರ್; ಹಣ ದೋಚಿದ್ದ 29 ಮಂದಿ ಅರೆಸ್ಟ್
ಕರ್ನಾಟಕ ಸರ್ಕಾರವೂ ನೇಪಾಳದಲ್ಲಿ ಸಿಲುಕಿದ್ದ ರಾಜ್ಯದವರ ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಂಡಿತ್ತು. ಇದೀಗ ಉತ್ತರ ಪ್ರದೇಶದ ಗೋರಖ್‌ಪುರದಿಂದ ಬೆಂಗಳೂರಿಗೆ ಆಗಮಿಸಿದ 54 ಮಂದಿ ಕನ್ನಡಿಗರು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತಾಯ್ನಾಡಿಗೆ ಮರಳಿದ್ದಾರೆ. ಪ್ರವಾಹದ ಭೀಕರತೆಯಿಂದ ಪಾರಾಗಿ ಸುರಕ್ಷಿತವಾಗಿ ಮನೆ ಸೇರಿರುವುದರಿಂದ ಪ್ರವಾಸಿಗರು ಹಾಗೂ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ದೇವರ ದಯೆಯಿಂದ ನಾವು ಮತ್ತೆ ಬದುಕಿ ಬಂದೆವು. ಇದು ನಮ್ಮ ಪುನರ್ಜನ್ಮ ಅಂತ ಕನ್ನಡಿಗರು ಅಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಅರ್ಧ ಗಂಟೆಯ ಟೀ ಬ್ರೇಕ್ ಜೀವ ಉಳಿಸಿತು:
ಪ್ರವಾಹದ ದಾರಿಯಲ್ಲಿ ಸಾಗುತ್ತಿದ್ದ ಕನ್ನಡಿಗರು ಮಾರ್ಗ ಮಧ್ಯೆ ಟೀ ಕುಡಿಯಲು ತೆರಳಿ ಸುಮಾರು ಅರ್ಧ ಗಂಟೆ ತಡವಾಗಿದ್ದರು. ಇದೇ ಸಮಯದಲ್ಲಿ ಮುಂದೆ ಪ್ರವಾಹ ಸಂಭವಿಸಿರುವ ಮಾಹಿತಿ ಬಂದಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಮುಂದೆ ಹೋಗಿದ್ದರೆ ಪ್ರವಾಹಕ್ಕೆ ಸಿಲುಕುವ ಸಾಧ್ಯತೆ ಇತ್ತು ಎಂದು ಪ್ರವಾಸಿಗರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಈ ಬಾರಿ ದಸರಾ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇವೆ: ಸಿಎಂ
