ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯು(PM SVANidhi) ದೇಶದ ಲಕ್ಷಾಂತರ ಮಹಿಳೆಯರಿಗೆ ಹೊಸ ಶಕ್ತಿ ಹಾಗೂ ಆರ್ಥಿಕ ಸ್ವಾವಲಂಬನೆ ತಂದುಕೊಟ್ಟಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಶ್ಲಾಘಿಸಿದ್ದಾರೆ.
ತಮ್ಮ 137ನೇ ಮನ್ ಕಿ ಬಾತ್(Mann Ki Baat) ರೇಡಿಯೋ ಸಂವಾದದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಬೀದಿಬದಿ ಹೋಟೆಲ್ ನಡೆಸುತ್ತಿರುವ ಟಿ.ಎಸ್. ನಿಂಗಮ್ಮ (TS Ningamma) ಅವರ ಸ್ಪೂರ್ತಿದಾಯಕ ಯಶೋಗಾಥೆಯನ್ನು ವಿಶೇಷವಾಗಿ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಎಂ ಸ್ವಾನಿಧಿ ಯೋಜನೆಯ ಫಲಾನುಭವಿಗಳಲ್ಲಿ ಶೇ. 46 ರಷ್ಟು ಮಹಿಳೆಯರಿದ್ದಾರೆ. ದೇಶಾದ್ಯಂತ ಸುಮಾರು 35 ಲಕ್ಷ ಮಹಿಳೆಯರು ಈ ಯೋಜನೆಯೊಂದಿಗೆ ಜೋಡಿಸಿಕೊಂಡು ತಮ್ಮ ಸಣ್ಣ ವ್ಯಾಪಾರ-ವ್ಯವಹಾರಗಳನ್ನು ವಿಸ್ತರಿಸಿಕೊಂಡಿದ್ದಾರೆ. ಮಹಿಳೆಯೊಬ್ಬರ ವ್ಯಾಪಾರ ಬೆಳೆದಾಗ ಇಡೀ ಕುಟುಂಬದ ಭವಿಷ್ಯವೇ ಪ್ರಗತಿ ಕಾಣುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಮನೆಯ ಅಗತ್ಯಗಳು ಪೂರೈಕೆಯಾಗುತ್ತವೆ ಮತ್ತು ಅವರ ಆತ್ಮಸ್ಥೈರ್ಯ ಹೆಚ್ಚುತ್ತದೆ. ಇದಕ್ಕೆ ಬೆಂಗಳೂರಿನ ಟಿ.ಎಸ್. ನಿಂಗಮ್ಮ ಹಾಗೂ ಗಾಜಿಯಾಬಾದ್‌ನ ಬಬಿತಾ ಶರ್ಮಾ ಅವರ ಶ್ರಮ ಮಹಿಳಾ ಸಬಲೀಕರಣಕ್ಕೆ ಜೀವಂತ ಸಾಕ್ಷಿ ಎಂದು ಬಣ್ಣಿಸಿದರು.
ಮೂಲತಃ ಹಾಸನ ಜಿಲ್ಲೆಯವರಾದ ಟಿ.ಎಸ್. ನಿಂಗಮ್ಮ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಮ್ಮ ಪತಿಯೊಂದಿಗೆ ಸೇರಿ ಬೆಂಗಳೂರಿನ ಮಾಗಡಿ ರಸ್ತೆಯ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡುವ ಸಣ್ಣ ಬೀದಿಬದಿ ಹೋಟೆಲ್ ಆರಂಭಿಸಿದ್ದರು.
#MannKiBaat | PM SVANidhi is creating new opportunities for women’s empowerment, with Bengaluru’s T.S. Ningamma being an inspiring example. With support from the scheme, she expanded her idli, dosa and sambar business, increased her income and is now able to provide better… pic.twitter.com/gs0KvpFYGb
— DD News (@DDNewslive) August 30, 2026
ಗ್ರಾಹಕರ ಮೆಚ್ಚುಗೆಯಿಂದ ವ್ಯಾಪಾರ ಬೆಳೆದರೂ, ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಂಡವಾಳದ ಕೊರತೆ ಎದುರಾಗಿತ್ತು. ಆ ಸಮಯದಲ್ಲಿ ‘ಪಿಎಂ ಸ್ವಾನಿಧಿ ಯೋಜನೆ’ ಇವರಿಗೆ ಆಸರೆಯಾಯಿತು. ಯೋಜನೆಯಿಂದ ಸಿಕ್ಕ ಆರ್ಥಿಕ ನೆರವಿನಿಂದ ಅವರು ತಮ್ಮ ಆಹಾರದ ಬಂಡಿಯನ್ನು ನವೀಕರಿಸಿಕೊಂಡು, ಸಗಟು ದರದಲ್ಲಿ ಆಹಾರ ಸಾಮಗ್ರಿ ಖರೀದಿಸಿ, ಮೆನುವಿನಲ್ಲಿ ಹೊಸ ತಿನಿಸುಗಳನ್ನು ಸೇರ್ಪಡೆಗೊಳಿಸಿದರು. ಈ ವ್ಯಾಪಾರದಿಂದ ಬಂದ ಆದಾಯದಲ್ಲಿ ಇಂದು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿವರಿಸಿದರು. ಇದನ್ನೂ ಓದಿ: ದೀರ್ಘಾವಧಿಯ ಯುರೇನಿಯಂ ಒಪ್ಪಂದಕ್ಕೆ ಭಾರತ-ಉಜ್ಬೇಕಿಸ್ತಾನ್ ಸಹಿ
ಏನಿದು ಪಿಎಂ ಸ್ವನಿಧಿ?
ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಜೂನ್ 1, 2020 ರಂದು ಆರಂಭಿಸಿದ ವಿಶೇಷ ಮೈಕ್ರೋ-ಕ್ರೆಡಿಟ್ ಯೋಜನೆ ಇದಾಗಿದೆ.
ಯಾವುದೇ ಅಡಮಾನ ಇಲ್ಲದೇ ಆರಂಭಿಕ ಹಂತದಲ್ಲಿ 10 – 15 ಸಾವಿರ ರೂ. ಸಾಲ ಸಿಗುತ್ತದೆ. ಮೊದಲ ಸಾಲವನ್ನು ಸರಿಯಾಗಿ ಮರುಪಾವತಿಸಿದರೆ, ನಂತರ ಕ್ರಮವಾಗಿ 20 ಸಾವಿರ ಹಾಗೂ 50 ಸಾವಿರದವರೆಗೆ ಹೆಚ್ಚಿನ ಸಾಲ ಪಡೆಯಬಹುದು. ಸಾಲವನ್ನು ಕಾಲಕಾಲಕ್ಕೆ ಮರುಪಾವತಿಸುವವರಿಗೆ ವಾರ್ಷಿಕ ಶೇ.7 ರಷ್ಟು ಬಡ್ಡಿ ಸಹಾಯಧನ ನೇರವಾಗಿ ಖಾತೆಗೆ ಜಮೆ ಆಗುತ್ತದೆ.
