Friday, 20th September 2019

ಮೋದಿಗೆ ಪುರಸ್ಕಾರ, ಇಮ್ರಾನ್ ಖಾನ್‍ಗೆ ಬೆಸ್ಟ್ ಡ್ರೈವರ್ ಪಟ್ಟ: ಪಾಕ್​​​ ನೆಟ್ಟಿಗರಿಂದಲೇ ಅಪಹಾಸ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಅತ್ಯುನ್ನತ ನಾಗರಿಕ ಪುರಸ್ಕಾರ ‘ಆರ್ಡರ್ ಆಫ್ ಝಾಯೆದ್’ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ ಪ್ರತಿಯಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ  ಪಾಕ್ ನೆಟ್ಟಿಗರೇ ‘ಬೆಸ್ಟ್ ಡ್ರೈವರ್’ ಪಟ್ಟ ಕೊಟ್ಟು ಅಪಹಾಸ್ಯ ಮಾಡಿದ್ದಾರೆ.

ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಕಾರಿನಲ್ಲಿ ಕೂರಿಸಿ ಸ್ವತಃ ಕಾರು ಚಾಲನೆ ಮಾಡಿದ್ದರು. ಇದೇ ವಿಚಾರವನ್ನು ಬಳಸಿಕೊಂಡು ನೆಟ್ಟಿಗರು ಇಮ್ರಾನ್ ಖಾನ್ ಅವರು ಅತ್ಯುತ್ತಮ ಚಾಲಕ ಎಂದು ಕಿಚಾಯಿಸುತ್ತಿದ್ದಾರೆ.

ಇಮ್ರಾನ್ ಖಾನ್ ಅವರ ಸೌದಿ ಅರೇಬಿಯಾದ ರಾಜಕುಮಾರ ಅವರನ್ನು ಕಾರಿನಲ್ಲಿ ಕೂರಿಸಿ ಡ್ರೈವ್ ಮಾಡಿದ್ದನ್ನು ಖಂಡಿಸಿ, ಪಾಕ್ ಸಂಸದರು ಅಸಮಾಧಾನ ಹೊರ ಹಾಕಿದ್ದರು. ಅಷ್ಟೇ ಅಲ್ಲದೆ ಸಂಸತ್‍ನಲ್ಲಿ ಸಂಸದೆಯೊಬ್ಬರು ಈ ವಿಚಾರವಾಗಿ ಪ್ರಶ್ನಿಸಿದ್ದರು.

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ. ಗವರ್ನರ್ ಹೌಸ್ ಅನ್ನು ಮ್ಯೂಸಿಂ ಮಾಡುತ್ತೇನೆ ಎಂದು ಹೇಳುವ ಇಮ್ರಾನ್ ಖಾನ್ ಅವರು ಉಬರ್ ಕಂಪನಿಯ ಕಾರು ಚಾಲಕರಾಗಿದ್ದಾರೆ. ಪ್ರತಿ ಸವಾರಿಯ ಬಳಿಕ ಫೈವ್ ಸ್ಟಾರ್ ನೀಡುವಂತೆ ಕೇಳುತ್ತಿದ್ದಾರೆ ಎಂದು ಪಾಕ್ ಸಂಸದೆ ಕಿಡಿಕಾರಿದ್ದರು. ಈ ವಿಡಿಯೋವನ್ನು ಹಾಕಿ ನೆಟ್ಟಿಗರು ಇಮ್ರಾನ್ ಖಾನ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಯುಎಇಯ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಆಲ್ ನಹ್ಯಾನ್ ಅವರು ಪ್ರಧಾನಿ ಮೋದಿ ಅವರಿಗೆ ಆರ್ಡರ್ ಆಫ್ ಝಾಯೆದ್ ನೀಡಿ ಗೌರವಿಸಿದ್ದಾರೆ. ಯುಎಇ ಸಂಸ್ಥಾಪಕರಾದ ನಹ್ಯಾನ್ ತಂದೆ ಶೇಜಕ್ ಜಾಯೆದ್ ಜನ್ಮದಿನ ಸ್ಮರಣಾರ್ಥವಾಗಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

ಝಾಯೆದ್ ಮೆಡಲ್ ಯಾರಿಗೆ ನೀಡುತ್ತಾರೆ?:
ಸಂಯುಕ್ತ ಅರಬ್ ಸಂಸ್ಥಾನವು ಪ್ರತಿ ವರ್ಷವೂ ಝಾಯೆದ್ ಮೆಡಲ್ ಅನ್ನು ರಾಜರು, ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಸ್ಥರಿಗೆ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು 1995ರಲ್ಲಿ ಮೊದಲ ಬಾರಿ ಜಪಾನ್ ಯುವರಾಜ ನರುಹಿಟೊ ಅವರಿಗೆ ನೀಡಲಾಗಿತ್ತು. 2007ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, 2018ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರಿಗೆ ಈ ಗೌರವ ಸಿಕ್ಕಿತ್ತು. ಝಾಯೆದ್ ಮೆಡಲ್ ಪುರಸ್ಕಾರ ಪಡೆದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *