Sunday, 25th August 2019

ಷೇರು ಮಾರಾಟ ಮಾಡಿ ಕೇರಳ ಫುಟ್‍ಬಾಲ್ ತಂಡಕ್ಕೆ ಸಚಿನ್ ಗುಡ್‍ಬೈ

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಇಂಡಿಯನ್ ಸೂಪರ್ ಲೀಗ್‍ನಲ್ಲಿ ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ನಲ್ಲಿ ಹೊಂದಿದ್ದ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ತಂಡದ ಸಹ ಮಾಲೀಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.

ಕಳೆದ ನಾಲ್ಕು ಆವೃತ್ತಿಗಳಿಂದ ಸಚಿನ್ ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲೀಕರಾಗಿದ್ದರು. ಈ ವರ್ಷದ ಆವೃತ್ತಿ ಆರಂಭವಾಗುವ ಮುನ್ನವೇ ಸಚಿನ್ ತಮ್ಮ ಷೇರು ಮಾರಾಟ ಮಾಡಿದ್ದಾರೆ.

ಸದ್ಯ ಸಚಿನ್‍ರ ಈ ನಿರ್ಧಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಶಾಕ್ ನೀಡಿದೆ. ಏಕೆಂದರೆ ಕೇರಳ ತಂಡಕ್ಕೆ ಸಚಿನ್ ಬೆಂಬಲವಾಗಿ ನಿಂತಿದ್ದರು. ಅವರ ಅಪಾರ ಅಭಿಮಾನಿಗಳು ಕೂಡ ತಂಡವನ್ನು ಬೆಂಬಲಿಸುತ್ತಿದ್ದರು. ಇದು ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬುತ್ತಿತ್ತು.

ತಂಡದ ಮಾಲೀಕತ್ವ ತೊರೆದ ಬಳಿಕ ಮಾತನಾಡಿದ ಸಚಿನ್, ತಂಡ ಸದ್ಯ ಉತ್ತಮ ರೂಪವನ್ನು ಪಡೆದಿದ್ದು, ಸಾಧನೆಯ ದಾರಿಯಲ್ಲಿದೆ. ಈ ವೇಳೆ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ. ಎಂದಿಗೂ ನಾನು ತಂಡದ ಪರ ಇರಲಿದ್ದೇನೆ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.

ಆರಂಭದಲ್ಲಿ ಹೆಚ್ಚಿನ ಷೇರು ಹೊಂದಿದ್ದ ಸಚಿನ್ ನಂತರ ತನ್ನಲ್ಲಿದ್ದ ಷೇರುಗಳನ್ನು ಮಾರಾಟ ಮಾಡುತ್ತಾ ಬಂದಿದ್ದರು. ಕೊನೆಗೆ ಸಚಿನ್ ಬಳಿ 20% ಷೇರು ಇದ್ದರೆ, ಹೈದರಾಬಾದಿನ ಮೀಡಿಯಾ ಆಂಡ್ ಎಂಟರ್‍ಟೈನ್‍ಮೆಂಟಿನ ಪ್ರಸಾದ್ ಗ್ರೂಪ್ 80% ಷೇರು ಹೊಂದಿತ್ತು. ಸಚಿನ್ ಅವರ ಬಳಿಯಿದ್ದ ಷೇರನ್ನು ಅಂತಾರಾಷ್ಟ್ರೀಯ ಉದ್ಯಮಿ ಎಂ.ಎ. ಯೂಸುಫ್ ಆಲಿ ಅವರ ಲುಲು ಗ್ರೂಪ್ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ. ಆದರೆ ಈ ಬಗ್ಗೆ ಲುಲು ಗ್ರೂಪ್ ಆಗಲಿ ಕೇರಳ ಬ್ಲಾಸ್ಟರ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *