ಅಡುಗೆ ಮನೆಯ ಒಗ್ಗರಣೆಯಿಂದ ಹಿಡಿದು ಬಡವ-ಬಲ್ಲಿದವರ ತಟ್ಟೆಯವರೆಗೂ ಸದಾ ಮುಂಚೂಣಿಯಲ್ಲಿರುವ ಅತಿಥಿಯೆಂದರೆ ಅದು ಈರುಳ್ಳಿ. ಸಾಮಾನ್ಯವಾಗಿ ಈ ತರಕಾರಿಯನ್ನು ಹೆಚ್ಚುವಾಗಷ್ಟೇ ಜನರ ಕಣ್ಣಿನಲ್ಲಿ ನೀರು ಬರುವುದು ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ, ಅದನ್ನು ಕತ್ತರಿಸುವ ಮೊದಲೇ, ಕೇವಲ ಮಾರುಕಟ್ಟೆಯ ಬೆಲೆ ಪಟ್ಟಿಯನ್ನು ನೋಡಿದಾಕ್ಷಣವೇ ಗ್ರಾಹಕರ ಕಣ್ಣಾಲಿಗಳು ಒದ್ದೆಯಾಗುವ ಕಾಲ ಬಂದಿದೆ. ಅಡುಗೆಗೆ ರುಚಿ ನೀಡುವ ಈರುಳ್ಳಿ ಈಗ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ದರ ಏರಿಕೆಯ ಬಿಸಿ ಜೋರಾಗಿದೆ.
ಸದ್ಯ ದೇಶದ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿಯ ಬೆಲೆಯು ಗಗನಕ್ಕೇರಿದ್ದು, ಗ್ರಾಹಕರು ಖರೀದಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರರಾಜ್ಯಗಳಿಂದ ಆಮದು ಕಡಿಮೆಯಾಗಿರುವುದು, ಅನಿರೀಕ್ಷಿತ ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾಗಿರುವುದು ಹಾಗೂ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಈ ತೀವ್ರ ದರ ಏರಿಕೆಗೆ ಪ್ರಮುಖ ಕಾರಣ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ತನ್ನ ಬಫರ್ ಸ್ಟಾಕ್ ಅನ್ನು ಪ್ರಮುಖ ಬಳಕೆ ಕೇಂದ್ರಗಳಿಗೆ ರವಾನಿಸಲು ಮುಂದಾಗಿದೆ. ಹೀಗೆಲ್ಲ ಇರುವಾಗ ಏಕಾಏಕಿ ಈರುಳ್ಳಿ ದರ ಏರಿಕೆಗೆ ಕಾರಣವೇನು? ಮತ್ತೆ ದರ ಯಾವಾಗ ಇಳಿಕೆಯಾಗುತ್ತದೆ? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸದ್ಯ ಈರುಳ್ಳಿ ಬೆಲೆ:
ಗ್ರಾಹಕ ವ್ಯವಹಾರಗಳ ಇಲಾಖೆಯ ದತ್ತಾಂಶದ ಪ್ರಕಾರ, ಆ.27ರಂದು ಈರುಳ್ಳಿಯ ಬೆಲೆಯು ಕೆ.ಜಿಗೆ ಸುಮಾರು 43.53 ರೂ. ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.59% ರಿಂದ 60%ರಷ್ಟಿದೆ. ಹಿಂದಿನ ತಿಂಗಳಿಗಿಂತ ಶೇ.19ರಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಚಿಲ್ಲರೆ ಬೆಲೆಯು ಪ್ರತಿ ಕೆಜಿಗೆ 65 ರೂ.ಗೆ ತಲುಪಿದ್ದರೆ (ಹಿಂದಿನ ವರ್ಷ 35 ರೂ.), ಬೆಂಗಳೂರಿನಲ್ಲಿ ಸದ್ಯ ಕೆಜಿಗೆ 30-40 ರೂ.ಯಿದ್ದು, ಕಳೆದ ವರ್ಷ 25 ರೂ. ಇತ್ತು. ಚೆನ್ನೈನಲ್ಲಿ ಕಳೆದ ವರ್ಷದ 33 ರೂ.ಗೆ ಹೋಲಿಸಿದರೆ ಈ ಬಾರಿ 58 ರೂ.ಗೆ ಏರಿಕೆಯಾಗಿದೆ.
ವರದಿಗಳ ಪ್ರಕಾರ, ಆಗಸ್ಟ್ 18ರಂದು ಈರುಳ್ಳಿ ಬೆಲೆಯು ಪ್ರತಿ ಕ್ವಿಂಟಾಲ್‌ಗೆ 2,897.64 ರೂ. ಇತ್ತು. ಇದು ಹಿಂದಿನ ವಾರಕ್ಕಿಂತ ಶೇ.31.93ರಷ್ಟು, ಹಿಂದಿನ ತಿಂಗಳಿಗಿಂತ ಶೇ.43ರಷ್ಟು ಮತ್ತು ಹಿಂದಿನ ವರ್ಷಕ್ಕಿಂತ ಶೇ.118.37ರಷ್ಟು ಅಧಿಕವಾಗಿದೆ.

ಏಕಾಏಕಿ ಬೆಲೆ ಏರಿದ್ದು ಯಾಕೆ?
ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್‌ನಲ್ಲಿ ಕಟಾವಾಗುವ ಈರುಳ್ಳಿ ಬೆಳೆಯು ದೇಶದ ಮುಖ್ಯ ಶೇಖರಣಾ ಬೆಳೆಯಾಗಿದ್ದು, ಅಕ್ಟೋಬರ್‌ವರೆಗೆ ಮಾರುಕಟ್ಟೆಗೆ ಸರಬರಾಜಾಗುತ್ತದೆ, ಈ ಶೇಖರಿಸಿಟ್ಟ ಬೆಳೆ ಮುಗಿಯುತ್ತ ಬಂದಂತೆ ಮಾರುಕಟ್ಟೆಯು ಮುಂದಿನ ಹೊಸ ಬೆಳೆಯ ಆಗಮನವನ್ನು ಅವಲಂಬಿಸಬೇಕಾಗುತ್ತದೆ. ಆದರೆ ಈ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ ಸಂಭವಿಸಿದ ಅತಿವೃಷ್ಟಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ದಾಸ್ತಾನುಗಳಲ್ಲಿ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಹಾಳಾಗಿದೆ. .
ಮಳೆಯಿಂದಾಗಿ ಮುಂದಿನ ಬೆಳೆಯ ಬಿತ್ತನೆಯೂ ತಡವಾಗಿದ್ದು, ಕಟಾವು ಸಮಯವು ಕೂಡ ವಿಳಂಬವಾಗಲಿದೆ. ಇದರಿಂದ ಇರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಪರಿಣಾಮ ಬೆಲೆ ಹೆಚ್ಚಳವಾಗಿದೆ.
ಇನ್ನೂ ಆಂಧ್ರಪ್ರದೇಶದಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದ್ದು, ಜೂನ್ ಆರಂಭದಲ್ಲಿ ಪ್ರತಿ ಕೆ.ಜಿಗೆ 25 ರೂ. ಇದ್ದ ಈರುಳ್ಳಿ ಬೆಲೆಯು ಆಗಸ್ಟ್ ವೇಳೆಗೆ 50-60 ರೂ.ಗೆ ಜಿಗಿದಿದೆ. ಆಂಧ್ರಪ್ರದೇಶವು ಜೂನ್ ಮತ್ತು ಆಗಸ್ಟ್ ನಡುವೆ ಕರ್ನೂಲ್‌ನಿಂದ, ಮಹಾರಾಷ್ಟ್ರದ ನಾಸಿಕ್ ಮತ್ತು ಸೊಲ್ಲಾಪುರದಿಂದ ಈರುಳ್ಳಿಯನ್ನು ಪಡೆಯುತ್ತದೆ. ಪೂರೈಕೆ ವಿಳಂಬವಾದ ಕಾರಣ ಬೆಲೆಯು 10 ಕೆ.ಜಿಯ ಚೀಲಕ್ಕೆ ಸುಮಾರು 500 ರೂ.ಗೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರವು ಅಗತ್ಯಬಿದ್ದಾಗ ಮಾರುಕಟ್ಟೆಗೆ ಬಿಡುಗಡೆ ಮಾಡಲು ಈರುಳ್ಳಿಯನ್ನು ಸಂಗ್ರಹಿಸಿಡಲು ಪ್ರಯತ್ನಿಸುತ್ತಿದೆ. ಆದರೆ, ಸರ್ಕಾರವೇ ರೈತರಿಂದ ಈರುಳ್ಳಿ ಖರೀದಿಸುವುದು ಈಗ ಬಹಳ ದುಬಾರಿಯಾಗಿದೆ. ಸರ್ಕಾರವು ಈ ಸೀಸನ್‌ನಲ್ಲಿ ತನ್ನ ಕನಿಷ್ಠ ಖರೀದಿ ಬೆಲೆಯನ್ನು ಏಳು ಬಾರಿ ಏರಿಕೆ ಮಾಡಿದೆ. ವರದಿ ಪ್ರಕಾರ, ಆಗಸ್ಟ್ ಮಧ್ಯದ ವೇಳೆಗೆ ಈ ಖರೀದಿ ಬೆಲೆಯು ಪ್ರತಿ ಕೆಜಿಗೆ ಸುಮಾರು 12.70 ರೂ.ನಿಂದ 26.45 ರೂ.ಗೆ ಏರಿಕೆಯಾಗಿದೆ
ಇದಕ್ಕೆ ಮುಖ್ಯ ಕಾರಣವೆಂದರೆ, ಈರುಳ್ಳಿಯ ಪ್ರಮುಖ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಾರುಕಟ್ಟೆ ಬೆಲೆಯು ಬಹಳ ವೇಗವಾಗಿ ಹೆಚ್ಚಾಗುತ್ತಿರುವುದು. ಮೇ ತಿಂಗಳಲ್ಲಿ ಪ್ರತಿ ಕೆಜಿಗೆ ಸುಮಾರು 11.50 ರೂ. ಇದ್ದ ನಾಸಿಕ್ ಈರುಳ್ಳಿ ಬೆಲೆ, ಆಗಸ್ಟ್ ವೇಳೆಗೆ 24.14 ರೂ.ಗೆ ದ್ವಿಗುಣಗೊಂಡಿದೆ.
ಬೆಲೆ ಹೆಚ್ಚಾದಾಗ ಮಾರುಕಟ್ಟೆಗೆ ಬಿಡಲು, ಬೆಲೆ ಕಡಿಮೆ ಇರುವಾಗಲೇ ಸರ್ಕಾರ ಈರುಳ್ಳಿಯನ್ನು ಖರೀದಿಸಿ ದಾಸ್ತಾನು ಮಾಡಿಕೊಳ್ಳಬೇಕು. ಆದರೆ ಈ ವರ್ಷ ಸರ್ಕಾರಕ್ಕೆ ಈರುಳ್ಳಿ ಸಿಗುವುದೇ ಕಷ್ಟವಾಗಿದೆ. ಬೆಲೆ ಏರಿಕೆಯ ನಡುವೆಯೂ ಸರ್ಕಾರವು 2 ಲಕ್ಷ ಟನ್ ಈರುಳ್ಳಿ ಸಂಗ್ರಹಿಸುವ ಗುರಿಯನ್ನು ಹೊಂದಿತ್ತು. ಆದರೆ ನಿರಂತರವಾಗಿ ಖರೀದಿ ಬೆಲೆಯನ್ನು ಹೆಚ್ಚಿಸಿದರೂ ಸಹ, ಸರ್ಕಾರದ ಒಟ್ಟು ಈರುಳ್ಳಿಯ ಖರೀದಿಯು ಗುರಿಗಿಂತ ಶೇ.25ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಈರುಳ್ಳಿ ಸಾಗಾಣೆಗೆ ʻಕಾಂದಾ ಎಕ್ಸ್‌ಪ್ರೆಸ್ʼ
ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ತನ್ನ ಬಫರ್ ಸ್ಟಾಕ್‌ಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ದೆಹಲಿ, ಚೆನ್ನೈ, ಕೊಚ್ಚಿ ಮತ್ತು ಗುವಾಹಟಿ ಸೇರಿದಂತೆ ಪ್ರಮುಖ ಬಳಕೆ ಕೇಂದ್ರಗಳಿಗೆ ನಾಸಿಕ್‌ನಿಂದ ಈರುಳ್ಳಿಯನ್ನು ಸಾಗಿಸಲು ‘ಕಾಂದಾ ಎಕ್ಸ್‌ಪ್ರೆಸ್’ ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ಬೆಲೆಯು ರಾಷ್ಟ್ರೀಯ ಸರಾಸರಿಗಿಂತ ಅಧಿಕವಿರುವ ಪ್ರದೇಶಗಳಿಗೆ ಬಫರ್-ಸ್ಟಾಕ್ ಈರುಳ್ಳಿಯನ್ನು ತಲುಪಿಸುವುದು ಇದರ ಗುರಿಯಾಗಿದೆ. ಅಲ್ಲದೆ, ಬೆಲೆ ಏರಿಕೆಯ ತೀವ್ರತೆಯನ್ನು ತಗ್ಗಿಸಲು ಮುಕ್ತ ಮಾರುಕಟ್ಟೆಗೂ ಈರುಳ್ಳಿ ದಾಸ್ತಾನು ಬಿಡುಗಡೆ ಮಾಡಲು ಸರ್ಕಾರ ಯೋಜಿಸಿದೆ.
ಈರುಳ್ಳಿ ಬೆಲೆ ಮಾತ್ರ ಏರಿಕೆನಾ?
ಮೂಲಗಳ ಪ್ರಕಾರ, ಆಗಸ್ಟ್ 18ರಂದು ಈರುಳ್ಳಿ ಬೆಲೆ ಶೇ. 118.37 ರಷ್ಟು ಹೆಚ್ಚಾಗಿದ್ದರೆ, ಟೊಮ್ಯಾಟೊ ಬೆಲೆ ಶೇ. 58.07 ರಷ್ಟು ಮತ್ತು ಆಲೂಗಡ್ಡೆ ಬೆಲೆ ಶೇ. 30.84 ರಷ್ಟು ಇಳಿಕೆಯಾಗಿದೆ. ಪ್ರಸ್ತುತ ತರಕಾರಿ ಬೆಲೆ ಏರಿಕೆಯು ಕೇವಲ ವ್ಯಾಪಕ ಕೊರತೆಯಲ್ಲ, ಬದಲಾಗಿ ಈರುಳ್ಳಿಯ ಶೇಖರಣಾ ಸಾಮರ್ಥ್ಯ, ಹವಾಮಾನ ಮತ್ತು ಹೊಸ ಬೆಳೆ ಬರುವ ಸಮಯದಿಂದ ಉಂಟಾದ ನಿರ್ದಿಷ್ಟ ಸಮಸ್ಯೆಯಾಗಿದೆ.

ಬೆಲೆ ಏರಿಕೆಯ ಪರಿಣಾಮ:
ಭಾರತೀಯರ ಅಡುಗೆಯಲ್ಲಿ ಈರುಳ್ಳಿ ಪ್ರಮುಖವಾಗಿರುವುದರಿಂದ ಇದರ ಸಣ್ಣ ಬೆಲೆ ಏರಿಕೆಯೂ ಗೃಹ ಬಳಕೆಯ ಆಹಾರ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಜುಲೈ ತಿಂಗಳಲ್ಲಿ ಸಸ್ಯಾಹಾರಿ ಊಟದ (ಥಾಲಿ) ತಯಾರಿಕಾ ವೆಚ್ಚವು ವರ್ಷದಿಂದ ವರ್ಷಕ್ಕೆ ಶೇ.4ರಷ್ಟು ಹೆಚ್ಚಾಗಿದೆ. ಇದರಲ್ಲಿ ಈರುಳ್ಳಿ ಬೆಲೆಯು ಶೇ.20ರಷ್ಟು ಹೆಚ್ಚಾಗಿದ್ದು ಪ್ರಮುಖ ಕಾರಣವಾಗಿದೆ. ಜುಲೈನಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿದ್ದ ಶೇ.4.38ರಿಂದ ಶೇ.4.45ಕ್ಕೆ ಏರಿದೆ ಹಾಗೂ ಆಹಾರ ಹಣದುಬ್ಬರವು ಶೇ. 5.32 ರಿಂದ ಶೇ. 5.52ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ದತ್ತಾಂಶ ತಿಳಿಸಿದೆ.
ಈರುಳ್ಳಿ ಬೆಲೆ ಇಳಿಕೆಯಾಗುತ್ತಾ?
ಮುಂದಿನ ಬೆಳೆ ಮಾರುಕಟ್ಟೆಗೆ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ತಲುಪುತ್ತದೆ ಎಂಬುದನ್ನು ಇದು ಅವಲಂಬಿಸಿರುತ್ತದೆ. ತಜ್ಞರ ಪ್ರಕಾರ, ಶೇಖರಿಸಿಟ್ಟ ದಾಸ್ತಾನು ಖಾಲಿಯಾಗುವ ಮತ್ತು ಹೊಸ ಬೆಳೆ ಆಗಮನವು ವಿಳಂಬವಾಗುವ ಸಾಧ್ಯತೆಯಿರುವುದರಿಂದ ಸೆಪ್ಟೆಂಬರ್-ಅಕ್ಟೋಬರ್‌ವರೆಗೆ ಈರುಳ್ಳಿ ಬೆಲೆಯು ಗರಿಷ್ಠ ಮಟ್ಟದಲ್ಲಿಯೇ ಮುಂದುವರಿಯುವ ನಿರೀಕ್ಷೆಯಿದೆ. ಮುಂದಿನ ಕೆಲವು ವಾರಗಳ ಹವಾಮಾನ ಪರಿಸ್ಥಿತಿಯು ಇದರಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

