ನವದೆಹಲಿ: ಹೊಸ ಪೀಳಿಗೆಗೆ ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ ಎಂಬ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಅವರ ಕಚೇರಿ ಸ್ಪಷ್ಟನೆ ನೀಡಿದೆ.
ಮೊದಲಿನಂತೆ ಇನ್ನು ಹೆಚ್ಚು ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ, ಹೀಗಾಗಿ ಹೊಸ ಪೀಳಿಗೆಗೆ ಜವಾಬ್ದಾರಿ ವಹಿಸಬೇಕು ಎಂದು ನಿತಿನ್ ಗಡ್ಕರಿ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ಅವರ ಕಚೇರಿಯು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದೆ.
ಈ ಹೇಳಿಕೆಗೂ ರಾಜಕೀಯಕ್ಕೂ (Politics) ಯಾವುದೇ ಸಂಬಂಧವಿಲ್ಲ ಮತ್ತು ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕಚೇರಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹೊಸ ಪೀಳಿಗೆಗೆ ಜವಾಬ್ದಾರಿ ಹಸ್ತಾಂತರಿಸುವ ಸಮಯ ಬಂದಿದೆ: ನಿತಿನ್ ಗಡ್ಕರಿ
ಹೇಳಿಕೆಯಲ್ಲಿ ಏನಿದೆ?
ನಿತಿನ್ ಗಡ್ಕರಿ ಅವರ ಹೇಳಿಕೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಅವರು ತಾವು ಸ್ಥಾಪಿಸಿರುವ, ಬುಡಕಟ್ಟು ಪ್ರದೇಶಗಳಲ್ಲಿ ‘ಏಕಲ್ ವಿದ್ಯಾಲಯ’ಗಳನ್ನು ನಡೆಸುತ್ತಿರುವ ‘ಲಕ್ಷ್ಮಣರಾವ್ ಮಾಂಕರ್ ಟ್ರಸ್ಟ್’ ಬಗ್ಗೆ ನಿರ್ದಿಷ್ಟವಾಗಿ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ, ತಮಗೆ ಮೊದಲಿನಷ್ಟು ಕೆಲಸದ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ, ಟ್ರಸ್ಟ್‌ನ ಹೆಚ್ಚಿನ ಜವಾಬ್ದಾರಿಯನ್ನು ಹೊರಲು ಯುವ ಪೀಳಿಗೆಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಗಡ್ಕರಿ ಅವರ ಮಾತುಗಳು ಸಂಪೂರ್ಣವಾಗಿ ಟ್ರಸ್ಟ್‌ನ ಕಾರ್ಯನಿರ್ವಹಣೆ ಮತ್ತು ಅದರ ಮುಂದಿನ ನಾಯಕತ್ವಕ್ಕೆ ಸಂಬಂಧಿಸಿದ್ದಾಗಿದ್ದವು. ಆದರೆ ಕೆಲವು ಟಿವಿ ವಾಹಿನಿಗಳು ಈ ಹೇಳಿಕೆಯ ನಿಜವಾದ ಸಂದರ್ಭವನ್ನು ಮರೆಮಾಚಿ, ರಾಜಕೀಯ ಹೇಳಿಕೆಯಂತೆ ಬಿಂಬಿಸುತ್ತಿವೆ ಎಂದು ಸಚಿವರ ಕಚೇರಿ ಸ್ಪಷ್ಟಪಡಿಸಿದೆ.

