ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು (Birth & Death Registrations) ವಿಳಂಬವಾಗಿ ಮಾಡಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸುವ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ-2026ರ ನೂತನ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ. ಈ ಕುರಿತು ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಜನನ ಅಥವಾ ಮರಣ ಸಂಭವಿಸಿದ ದಿನಾಂಕದಿಂದ ಒಂದು ವರ್ಷ ಕಳೆದ ಬಳಿಕ, ಎರಡು ವರ್ಷ ಪೂರ್ಣಗೊಳ್ಳುವ ಮುನ್ನ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಸಂಬಂಧಪಟ್ಟ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಅಧಿಕಾರ ಪಡೆದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಆದೇಶ ಬೇಕಾಗಲಿದೆ. ಘಟನೆಗೆ ಸಂಬಂಧಿಸಿದ ವಿವರಗಳ ನಿಖರತೆಯನ್ನು ಪರಿಶೀಲಿಸಿದ ಬಳಿಕ, ನಿಗದಿತ ಶುಲ್ಕ ಪಾವತಿಗೆ ಒಳಪಟ್ಟು ನೋಂದಣಿಗೆ ಅನುಮತಿ ನೀಡಲಾಗುತ್ತದೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಭಾರತವನ್ನು 4ನೇ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿದ್ದಾರೆ: ಬೊಮ್ಮಾಯಿ
ಜನನ ಅಥವಾ ಮರಣ ಸಂಭವಿಸಿ ಎರಡು ವರ್ಷಕ್ಕಿಂತ ಹೆಚ್ಚು ಸಮಯದ ಬಳಿಕ ನೋಂದಣಿಗೆ ಅರ್ಜಿ ಸಲ್ಲಿಸಿದರೆ, ಇನ್ನು ಮುಂದೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಆದೇಶ ಪಡೆಯಬೇಕಾಗುತ್ತದೆ. ಇದರಿಂದ ಇಂತಹ ತಡವಾದ ನೋಂದಣಿಗಳ ಪರಿಶೀಲನೆಗೆ ಹೆಚ್ಚಿನ ಮಟ್ಟದ ನ್ಯಾಯಾಂಗ ಪರಿಶೀಲನೆ ಬರಲಿದೆ.
1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಸೆಕ್ಷನ್ 13(3)ಕ್ಕೆ ತಿದ್ದುಪಡಿ ತಂದು ಈ ಬದಲಾವಣೆ ಮಾಡಲಾಗಿದೆ. ಜನನ ಮತ್ತು ಮರಣ ಘಟನೆಗಳನ್ನು ಸಮಯಕ್ಕೆ ಸರಿಯಾಗಿ ನೋಂದಾಯಿಸುವಂತೆ ಜನರನ್ನು ಉತ್ತೇಜಿಸುವುದು ತಿದ್ದುಪಡಿಯ ಉದ್ದೇಶ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜನನ ಮತ್ತು ಮರಣ ನೋಂದಣಿ ಕಾನೂನುಬದ್ಧವಾಗಿ ಕಡ್ಡಾಯವಾಗಿದ್ದು, ಈ ಕಾಯ್ದೆಯಡಿ ನೀಡಲಾಗುವ ಪ್ರಮಾಣಪತ್ರಗಳು ವ್ಯಕ್ತಿಯ ಜನನ ಅಥವಾ ಮರಣವನ್ನು ದೃಢೀಕರಿಸುವ ಪ್ರಮುಖ ಕಾನೂನು ದಾಖಲೆಗಳಾಗಿವೆ. ಇದನ್ನೂ ಓದಿ: ನಮ್ಮ ಆರ್ಥಿಕ ಹಿತಾಸಕ್ತಿ ರಕ್ಷಣೆಗಾಗಿ ರಷ್ಯಾದಿಂದ ತೈಲ ಖರೀದಿ – ಅಮೆರಿಕಕ್ಕೆ ಭಾರತ ತಿರುಗೇಟು

