ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆ (KPSC Exam) ಅಕ್ರಮದ ಆರೋಪಗಳ ಹಿನ್ನೆಲೆಯಲ್ಲಿ ಪರೀಕ್ಷಾ ವ್ಯವಸ್ಥೆಯ ಮೇಲೆ ಅಭ್ಯರ್ಥಿಗಳಿಗೆ ನಂಬಿಕೆ ಇಲ್ಲದಂತಾಗಿದೆ. ಹೀಗಾಗಿ ಅಕ್ರಮದ ತನಿಖೆ ಪೂರ್ಣಗೊಂಡು, ಕೆಪಿಎಸ್ಸಿ ವ್ಯವಸ್ಥೆಯಲ್ಲಿ ಸುಧಾರಣೆ ಆಗುವವರೆಗೆ ನವೆಂಬರ್ 15ರಂದು ನಡೆಯಲಿರುವ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಕೆಪಿಎಸ್ಸಿ ಅಕ್ರಮದ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈಗಾಗಲೇ ಕೆಪಿಎಸ್ಸಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಇಡಿ, ಎಸ್ಐಟಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಕಳೆದ ಮೂರು-ನಾಲ್ಕು ವರ್ಷಗಳ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ತೆರಿಗೆಯ ಹಣದಿಂದಲೇ, ಎಲ್ಲವೂ ಜನರಿಗೇ ಸೇರಬೇಕು: ಯತೀಂದ್ರ ಸಿದ್ದರಾಮಯ್ಯ
ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕೆಪಿಎಸ್ಸಿ ಸಂಸ್ಥೆಯ ಮೇಲೆಯೇ ನಂಬಿಕೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಬೇಕು ಎಂದು ಆಗ್ರಹಿಸಿ ಅಭ್ಯರ್ಥಿಗಳು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಮೊದಲು ಗೊಂದಲಗಳನ್ನು ಸರಿಪಡಿಸಿ, ಕೆಪಿಎಸ್ಸಿ ವ್ಯವಸ್ಥೆ ಪ್ರಾಮಾಣಿಕವಾಗಿದೆ ಎಂಬ ವಿಶ್ವಾಸ ಮೂಡಿಸಬೇಕು. ಅಲ್ಲಿಯವರೆಗೆ ಪರೀಕ್ಷೆ ನಡೆಸಬಾರದು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆಯಾಗದ ವಿಚಾರವಾಗಿ ಮಾತನಾಡಿದ ಅವರು, ವಿಮಾ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ. ರಾಜ್ಯ ಸರ್ಕಾರವೂ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು. ಸರ್ಕಾರ ತನ್ನ ಪಾಲಿನ ಮ್ಯಾಚಿಂಗ್ ಗ್ರಾಂಟ್ ಬಿಡುಗಡೆ ಮಾಡಿಲ್ಲ. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಬೈರತಿ ಬಸವರಾಜ್ – ನಾರಾಯಣಸ್ವಾಮಿ ನಡ್ವೆ ಫೈಟ್; ಸಚಿವ ಕೃಷ್ಣಭೈರೇಗೌಡ ಎದುರು ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆ
ಬಸ್ ಪ್ರಯಾಣ ದರ ಏರಿಕೆ ವಿಚಾರವಾಗಿ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಸಿಎಂ ಪತ್ರಿಕಾಗೋಷ್ಠಿ ನಡೆಸಿ ರೈತರಿಗೆ 2,500 ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಎರಡನೇ ಕಂತನ್ನೂ ನೀಡುವುದಾಗಿ ಹೇಳಿದ್ದಾರೆ. ಬಸ್ ದರ ಏರಿಕೆ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಗುತ್ತಿಗೆದಾರರಿಗೆ ಹಣ ನೀಡದೆ ಹೊಸ ಯೋಜನೆ ಘೋಷಣೆ ಏಕೆ?
ರಾಜ್ಯ ಸರ್ಕಾರ 26 ಸಾವಿರ ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಆದರೆ, ಇದಕ್ಕೆ ಹಣ ಎಲ್ಲಿದೆ? ಈಗಾಗಲೇ ಗುತ್ತಿಗೆದಾರರಿಗೆ 39 ಸಾವಿರ ಕೋಟಿ ರೂಪಾಯಿ ಬಾಕಿ ನೀಡಬೇಕಿದೆ. ಮೊದಲು ಆ ಹಣವನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಟ್ರಂಪ್ ಹತ್ಯೆಗೆ ಸಂಚು ಆರೋಪ – ವೈಟ್ಹೌಸ್ ಬಳಿ ಶಸ್ತ್ರಾಸ್ತ್ರಗಳೊಂದಿಗೆ ವೆನೆಜುವೆಲಾ ಪ್ರಜೆ ಅರೆಸ್ಟ್
ಹಣವಿಲ್ಲದಿದ್ದರೂ ಹೊಸ ಯೋಜನೆಗಳನ್ನು ಘೋಷಿಸುತ್ತಿರುವುದು ಕಮಿಷನ್ ಪಡೆಯುವುದಕ್ಕಾಗಿಯೇ ಎಂದು ಆರೋಪಿಸಿದ ಅವರು, ಖಜಾನೆ ಲೂಟಿಯಾಗಿದೆ. ಗುತ್ತಿಗೆದಾರರನ್ನು ಬೀದಿಗೆ ತಂದು ನಿಲ್ಲಿಸಲಾಗುತ್ತಿದೆ. ಪ್ಯಾಕೇಜ್ ರೂಪದಲ್ಲಿ ಟೆಂಡರ್ ಕರೆಯುವ ಮೂಲಕ ಬೇರೆ ರಾಜ್ಯದವರಿಗೆ ಕಾಮಗಾರಿಗಳನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ನಮ್ಮ ರಾಜ್ಯದ ಗುತ್ತಿಗೆದಾರರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ರಾಮನಗರದ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಅವರು, ನಾಲ್ಕು ಮೆಡಿಕಲ್ ಕಾಲೇಜುಗಳನ್ನು ಮಾಡಿದ್ದೇನೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ 2006ರಲ್ಲೇ ತೀರ್ಮಾನವಾಗಿತ್ತು. ಮೆಡಿಕಲ್ ಕಾಲೇಜುಗಳಿಗೆ ಅನುಮತಿ ನೀಡಿದ್ದು ನಾನು. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೂ ಅನುಮತಿ ನೀಡಿದ್ದೆ. ಹೀಗಿರುವಾಗ ಅವರ ಕೊಡುಗೆ ಏನು? ಬರೀ ಭಾಷಣ ಮಾಡುವುದನ್ನು ಬಿಟ್ಟು ಕೆಲಸ ಮಾಡಲಿ ಎಂದು ಟೀಕಿಸಿದರು. ಇದನ್ನೂ ಓದಿ: Bengaluru Horror | 15 ದಿನಗಳ ಅಂತರದಲ್ಲಿ 7 ಮಂದಿ ಮರ್ಡರ್ – ಹಂತಕನ ಕಂಪ್ಲೀಟ್ ಟೈಮ್ಲೈನ್ ರಿವಿಲ್!
ಸಿಎಂಗೆ ಬೆಂಬಲ ಕೊಡಿ ಅಂತ ಶಾಸಕ ಸಲಹೆ ಕೊಡುತ್ತಾರೆ. ಹೈದರಾಬಾದ್ನಿಂದ ಯಾರು ಯಾರನ್ನ ಕರೆದುಕೊಂಡು ಬಂದಿದ್ದೀರಿ, ಅವರ ಜೊತೆ ನಿಮ್ಮ ಸಂಬಂಧ ಏನು ಅಂತ ಗೊತ್ತಿದೆ. ರಾಜ್ಯದ ಅಭಿವೃದ್ಧಿಗೆ ಬೇಕಾದ್ರೆ ಸಿಎಂಗೆ ಬೆಂಬಲ ಕೊಡುತ್ತೇನೆ. ನಿಮ್ಮ ಅಕ್ರಮಗಳಿಗೆ ನಾನು ಬೆಂಬಲ ಕೊಡಲ್ಲ. ಜಾತಿ ವ್ಯಾಮೋಹ ನಮಗೆ ಇಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ನಾನೇ ಸನ್ಮಾನ ಮಾಡುತ್ತೇನೆ. ನಿಮ್ಮ ಕಸುಬು ಬಿಟ್ಟು ಜನರ ಪರ ಕೆಲಸ ಮಾಡಿದ್ರೆ ನಾನೇ ಸನ್ಮಾನ ಮಾಡುತ್ತೇನೆ. ಒಕ್ಕಲಿಗ ಅಂತ ದುಡ್ಡು ಹೊಡೆದುಕೊಂಡು ಹೋದರೆ ನಾನು ಬೆಂಬಲ ಕೊಡಲ್ಲ. ಹೈದರಾಬಾದ್ಗೆ ವಿಮಾನ ಮಾಡಿ ಕರೆದುಕೊಂಡು ಹೋಗಿಲ್ಲವಾ? ನೀವು ನಮಗೆ ಸಲಹೆ ಕೊಡುತ್ತೀರಾ? ಸಿಎಂ ಅವರೇ ನಿಮ್ಮ ಅಕ್ರಮದ ಚಾಳಿ ಬಿಡಿ ಎಂದು ಕಿಡಿಕಾರಿದರು.
ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿಯೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಶೇ.35ರಿಂದ 40ರಷ್ಟು ದರ ಏರಿಕೆ ಮಾಡಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈ ಯೋಜನೆ ಜಾರಿಗೊಳಿಸುವಾಗ ಅದಕ್ಕೆ ಬೇಕಾದ ಹಣವನ್ನು ಹೇಗೆ ಹೊಂದಿಸಬೇಕು ಎಂಬುದನ್ನು ಸರ್ಕಾರ ಮೊದಲೇ ನಿರ್ಧರಿಸಬೇಕಿತ್ತು. ಈಗ ಡೀಸೆಲ್ ಬೆಲೆ ಏರಿಕೆಯ ನೆಪ ಹೇಳಲಾಗುತ್ತಿದೆ. ಸಾರಿಗೆ ಇಲಾಖೆಯಲ್ಲಿನ ಸೋರಿಕೆ ಮತ್ತು ಅಕ್ರಮಗಳನ್ನು ಮೊದಲು ನಿಲ್ಲಿಸಲಿ. ದರ ಏರಿಕೆಗೆ ನಿಜವಾದ ಕಾರಣವನ್ನು ಜನರ ಮುಂದೆ ಇಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಷ್ಣೋಯ್ ಗ್ಯಾಂಗ್ನ ಕಿಂಗ್ ಪಿನ್ ಹ್ಯಾರಿ ಬಾಕ್ಸರ್ ಯುಎಸ್ನಲ್ಲಿ ಲಾಕ್ – ಭಾರತಕ್ಕೆ ಕರೆತರಲು ಸಿದ್ಧತೆ
ಪ್ರಿಯಾಂಕ್ ಖರ್ಗೆಗೆ ತಿರುಗೇಟು:
ಕೆಪಿಎಸ್ಸಿ ಅಕ್ರಮದ ಪಿತಾಮಹ ಕುಮಾರಸ್ವಾಮಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ನನ್ನಿಂದ ಯಾವ ಕೆಪಿಎಸ್ಸಿ ಅಕ್ರಮ ನಡೆದಿದೆ ಎಂಬುದನ್ನು ದಾಖಲೆ ಸಮೇತ ಹೇಳಲಿ ಎಂದು ಸವಾಲು ಹಾಕಿದರು. ಹೆಂಡದ ಅಂಗಡಿ ಮುಂದೆ ಕುಳಿತವರು ಸಂಜೆ ಮಾತನಾಡುವ ರೀತಿ ಗೃಹ ಸಚಿವ ಮಾತನಾಡುತ್ತಾರೆ. ನಾನು ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದ ಇಲಾಖೆಯಲ್ಲಿನ ನೇಮಕಾತಿ ಅಕ್ರಮಗಳ ದಾಖಲೆಗಳನ್ನು ನೀಡಿದ್ದೇನೆ. ಆದರೆ, ಅದಕ್ಕೆ ಉತ್ತರಿಸುವ ಯೋಗ್ಯತೆ ಅವರಿಗಿಲ್ಲ. ನಾನು 54 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದೆ. ಆಗ ಯಾವ ಅಕ್ರಮ ನಡೆದಿತ್ತು ಎಂದು ಪ್ರಶ್ನಿಸಿದರು.
ಕೆಪಿಎಸ್ಸಿಯಲ್ಲಿ ಹಲವಾರು ಅಕ್ರಮಗಳು ನಡೆದಿವೆ. ಪಶು ವೈದ್ಯಕೀಯ ಪರೀಕ್ಷೆ ನಡೆದಿದ್ದು ನಿಮ್ಮ ಸರ್ಕಾರದ ಅವಧಿಯಲ್ಲೇ ಅಲ್ಲವೇ? ಆಗ ಅಕ್ರಮ ನಡೆದಿದ್ದು ಹೇಗೆ? ಜ್ಞಾನೇಂದ್ರ ನೇಮಕಾತಿ ಮಾಡಿದ್ದು ನಾನೇ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: 2029ರವರೆಗೆ ಕಾಯಿರಿ, ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ: ಅಮಿತ್ ಶಾಗೆ ಕೆ.ಸಿ.ವೇಣುಗೋಪಾಲ್ ತಿರುಗೇಟು
ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಧ್ಯಪ್ರವೇಶಿಸದಿದ್ದರೆ ಕೆಪಿಎಸ್ಸಿ ಅಕ್ರಮ ಪ್ರಕರಣವನ್ನು ಮುಚ್ಚಿಹಾಕುತ್ತಿದ್ದರು. ಸಿಐಡಿ ತನಿಖೆ ಪ್ರಕರಣವನ್ನು ಮುಚ್ಚಿಹಾಕಲು ನಡೆಯುತ್ತಿದೆ. ಜ್ಞಾನೇಂದ್ರ ದೆಹಲಿಗೆ ಹೋಗಿದ್ದಾರೆ ಎಂದು ಹೇಳಿದ್ದು ನೀವೇ ಅಲ್ಲವೇ? ಅವರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿದ್ದು ಯಾರು? ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಂದೆಯ ತಿಥಿ ಕಾರ್ಯಕ್ಕೆ ಸಾಕ್ಷಿ ಪ್ರದೋಷ್ಗೆ ಕೋರ್ಟ್ 5 ದಿನ ಷರತ್ತುಬದ್ಧ ಅನುಮತಿ
ಕ್ಲೌಡ್ ನೈನ್ ಆಸ್ಪತ್ರೆ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆರೋಗ್ಯ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಮಗುವಿನ ಚಿಕಿತ್ಸೆಗೆ ಆಸ್ಪತ್ರೆ ಹೆಚ್ಚಿನ ಹಣ ಕೇಳುತ್ತಿದೆ. ಮಗುವಿಗೆ ಆಸ್ಪತ್ರೆಯೇ ಉಚಿತವಾಗಿ ಚಿಕಿತ್ಸೆ ನೀಡಬೇಕು. ಇಲ್ಲವಾದರೆ ಸರ್ಕಾರವೇ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾನೇ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ. ನನ್ನನ್ನು ಆಸ್ಪತ್ರೆಗೆ ಬರುವಂತೆ ಮಾಡಿಕೊಳ್ಳಬೇಡಿ. ಮಗುವಿನ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಂಡು ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಇದೇ ವೇಳೆ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಮುಖಂಡರ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಕುಣಿಗಲ್ ಕ್ಷೇತ್ರದ ಪ್ರಮುಖರು ನಾಗರಾಜಯ್ಯ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇವರೆಲ್ಲರೂ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಜೆಡಿಎಸ್ ಅಭಿಮಾನಿಗಳು. ಕೆಲವು ಕಾರಣಗಳಿಂದ ಕಾಂಗ್ರೆಸ್ಗೆ ಹೋಗಿದ್ದವರು, ಕಾಂಗ್ರೆಸ್ನ ವರ್ತನೆ ನೋಡಿ ಮರಳಿ ಮನೆಗೆ ಬಂದಿದ್ದಾರೆ. ಎಲ್ಲರನ್ನೂ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷವನ್ನು ಮುಗಿಸುತ್ತೇವೆ ಎಂದು ಕೆಲವರು ಹೇಳಿದ್ದರು. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷದ ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ. ಅನೇಕರು ಜೆಡಿಎಸ್ ಸೇರಲು ಆಸಕ್ತಿ ತೋರುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ನಡೆಯಲಿವೆ. ಸಚಿವರೊಬ್ಬರು ಜೆಡಿಎಸ್ 100 ಸ್ಥಾನ ಗೆಲ್ಲುತ್ತದೆಯೇ ಎಂದು ಪ್ರಶ್ನಿಸುತ್ತಾರೆ. ಜೆಡಿಎಸ್ ಬಗ್ಗೆ ಮಾತನಾಡುವವರು ಮೊದಲು ಕಾಂಗ್ರೆಸ್ ಬಿಟ್ಟು ಏಕಾಂಗಿಯಾಗಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಒಂದೇ ಕುಟುಂಬದ ಏಳು ಜನರ ನರಮೇಧ – ಶವದ ವಾಸನೆ ಬರದಂತೆ 10 ಲೇಯರ್ ಟೇಪ್ ಸುತ್ತಿದ್ದ ಪಾಪಿ
