– ಮದ್ಯ ಕುಡಿಸಿ ಹೆಂಡತಿಗೆ ಮುಹೂರ್ತ ಇಟ್ಟ; ಬಾಡೂಟಕ್ಕೆ ಕರೆದು ಬಾವನನ್ನ ಕೊಂದ
– ಅ.14 ರಿಂದ ಒಬ್ಬೊಬ್ಬರೇ ಕರೆಸಿ ಹತ್ಯೆ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಬೆಂಗಳೂರು: ರಾಜಾಜಿನಗರ ಪೊಲೀಸ್ ಠಾಣಾ (Rajajinagar Police Station) ವ್ಯಾಪ್ತಿಯಲ್ಲಿ ವಿಕೃತ ಮನಸ್ಥಿತಿಯ ಇಂದುಶೇಖರ್ ತನ್ನ ಅಪ್ರಾಪ್ತ ಮಗಳೊಂದಿಗೆ ಸೇರಿ 15 ದಿನಗಳಲ್ಲಿ ನಡೆದ 7 ಭೀಕರ ಕೊಲೆಗಳ (Murder) ಘಟನೆ ಬೆಚ್ಚಿಬೀಳಿಸಿದೆ.
ರಕ್ತಪಾತಕ್ಕೆ ಸಂಚು
ಅಕ್ಟೋಬರ್ 14ರಂದು ರಕ್ತಪಾತಕ್ಕೆ ಸಂಚು ರೂಪಿಸಿದ ಈತ, ಮಾಂಸದ ಊಟ ಹಾಗೂ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಹತ್ಯಾಕಾಂಡ ನಡೆಸಿದ್ದ. ರುಬ್ಬುವ ಕಲ್ಲಿನಿಂದ ಹೊಡೆದು ಪತ್ನಿ ಸುನೀತಾ (ಅ16 ರಂದು), ಅತ್ತೆ ರೂಪವತಿ (ಅ.18) ಯನ್ನ ಕೊಲೆ ಮಾಡಿ ಮೃತದೇಹಗಳನ್ನು ಸೇಲಂ ಘಾಟ್ನಲ್ಲಿ ಎಸೆದಿದ್ದ. ನಂತರ ಬಾಮೈದ ಶಿವಕುಮಾರ್, ದಿವ್ಯಾ, ಮಗ ಪುನೀತ್ನನ್ನು ಅಕ್ಟೋಬರ್ 24-25 ರಂದು ಹತ್ಯೆಗೈದು, ಶವಗಳನ್ನು ಮೈಸೂರು ಮತ್ತು ನಂದಿ ಬೆಟ್ಟದಲ್ಲಿ ವಿಲೇವಾರಿ ಮಾಡಿದ್ದ. ಬಳಿಕ ನವೆಂಬರ್ 1ರಂದು ಮತ್ತೊಬ್ಬ ಬಾಮೈದ ಶಂಕರ್ ಹಾಗೂ ಆತನ ಪತ್ನಿ ನಳಿನಿಯನ್ನ ಕೊಂದು ಶಿರಾಡಿ ಘಾಟ್ನಲ್ಲಿ ಬಿಸಾಡಲಾಗಿತ್ತು.
ಇಡೀ ಕುಟುಂಬ ನಾಪತ್ತೆಯಾದ ಬಗ್ಗೆ ನವೆಂಬರ್ 3ರಂದು ಶ್ರೀರಾಮಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಟವರ್ ಡಂಪ್ ಪರಿಶೀಲಿಸಿದ ಪೊಲೀಸರು ನವೆಂಬರ್ 4ರಂದು ಇಂದುಶೇಖರ್ ಹಾಗೂ ಆತನ ಮಗಳನ್ನ ಬಂಧಿಸಿ, ಬಾಲಕ ಯತೀನ್ನನ್ನ ಪಾರುಮಾಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಭೀಕರ ಕೊಲೆಗಳ ರಹಸ್ಯ ಬಯಲಾಗಿದೆ.
7 ಕೊಲೆ ಯಾವ್ಯಾವ ದಿನ ನಡೀತು ಗೊತ್ತಾ..?
ಅ.14 ಮದ್ಯ ಕುಡಿಸಿ ಹೆಂಡತಿಗೆ ಮುಹೂರ್ತ ಇಟ್ಟ
ಅ.14ರ ಬುಧವಾರ ಹೆಂಡತಿ ಜೊತೆ ಇಂದು ಶೇಖರ್ ಜಗಳವಾಡಿಕೊಂಡಿದ್ದಾನೆ. ಅದೇ ದಿನ ಕೊಲೆಗೆ ಪ್ಲ್ಯಾನ್ ಮಾಡಿದ್ದಾನೆ. ಅಂದೇ ನಿದ್ರೆ ಮಾತ್ರೆ ಮತ್ತು ಹೆಣಗಳನ್ನ ತುಂಬಿಹಾಕಲು ಪ್ಲಾಸ್ಟಿಕ್ ಚೀಲ ಹಾಗೂ ಹಗ್ಗವನ್ನೂ ಖರೀದಿ ಮಾಡಿದ್ದಾನೆ. ಅ.16ರ ಶುಕ್ರವಾರ ರಾತ್ರಿ ಸುನೀತಾಳನ್ನ ಕೊಲೆ ಮಾಡಲೆಂದೇ ಬಾಡೂಟ ತಿಂದು ಮದ್ಯವನ್ನೂ ಕೂಡ ಸೇವಿಸಿದ್ದಾನೆ. ಸುನೀತಾಳಿಗೂ ಮದ್ಯ ಕುಡಿಸಿದ್ದಾನೆ. ಮದ್ಯದಲ್ಲಿ ಮತ್ತುಬರುವ ಮಾತ್ರೆ ಬೆರಸಿ ಸುನೀತಾ ಮೂರ್ಛೆ ಹೋಗುವವರೆಗೆ ಕಾದಿದ್ದಾನೆ. ನಂತರ ರುಬ್ಬುವ ಗುಂಡುಕಲ್ಲಿನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ, ಬಳಿಕ ಮೃತದೇಹವನ್ನ ಬೆಡ್ ರೂಮಲ್ಲಿ ತಂದಿಟ್ಟಿದ್ದಾನೆ. ಈ ಹತ್ಯೆ ಕಣ್ಣಾರೆ ಕಂಡು ಅಪ್ರಾಪ್ತ ಮಗಳು ಶಾಕ್ಗೆ ಒಳಗಾಗಿದ್ದಾಳೆ. ಮಗಳಿಗೆ ಮನವೊಲಿಸಿ ಹೆಂಡತಿ ಹೆಣ ಚೀಲದಲ್ಲಿ ಪ್ಯಾಕ್ ಮಾಡಿದ್ದಾನೆ. ಇತ್ತ ತಂದೆ ಮಾತು ಕೇಳಿ ತಾಯಿ ಬಗ್ಗೆ ದ್ವೇಷ ಬೆಳೆಸಿಕೊಳ್ಳುತ್ತಿದ್ದ ಅಪ್ರಾಪ್ತ ಮಗಳು ಕೊಲೆಗೆ ಸಾಥ್ ಕೊಟ್ಟಿದ್ದಾಳೆ.
ಅ.18: ಬಾಡೂಟ ಬಡಿಸಿ ಅತ್ತೆ ರೂಪವತಿ ಹತ್ಯೆ
ಇನ್ನೂ ಅಕ್ಟೋಬರ್ 17ರ ಶನಿವಾರ ಮಗಳು ಸುನೀತಾಗೆ ರೂಪವತಿ ನಿರಂತರವಾಗಿ ಕರೆ ಮಾಡಿದ್ದರು. ಆದರೆ ಸುನೀತಾ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅಂದು ಸಂಜೆ ಅಳಿಯ ಇಂದುಶೇಖರ್ಗೆ ಕರೆ ಮಾಡಿದ್ದರು. ಈ ವೇಳೆ ಸುನೀತಾ ಮನೆಯಲ್ಲೇ ಇದ್ದಾಳೆ, ಮನೆಗೆ ಬನ್ನಿ ಎಂದು ಅತ್ತೆ ರೂಪವತಿಯನ್ನು ಶೇಖರ್ ಆಹ್ವಾನಿಸಿದ್ದ. ಅದರಂತೆ ಅಕ್ಟೋಬರ್ 18ರ ಬೆಳಗ್ಗೆ ರೂಪವತಿ ಭಾಷ್ಯಂ ಸರ್ಕಲ್ ಬಳಿಯ ಅಳಿಯನ ಮನೆಗೆ ಬಂದಿದ್ದರು. ಈ ವೇಳೆ ಮಗಳು ಸುನೀತಾ ಎಲ್ಲಿ? ಎಂದು ರೂಪವತಿ ಪ್ರಶ್ನಿಸಿದಾಗ ಅಳಿಯ ಇಂದುಶೇಖರ್ ದ್ವಂದ್ವ ಉತ್ತರ ನೀಡಿದ್ದ. ಇದೇ ಸಂದರ್ಭದಲ್ಲಿ ಅಪ್ರಾಪ್ತ ಮಗಳು ತಂದೆಗೆ ಸಾಥ್ ನೀಡಿದ್ದಾಳೆ. ಅಜ್ಜಿ ನೀವು ಊಟ ಮಾಡಿ ಎಂದು ಹೇಳಿ ಅಪ್ರಾಪ್ತೆ, ರೂಪವತಿಗೆ ಮಾಂಸಾಹಾರದ ಊಟ ಬಡಿಸಿ ಮದ್ಯವನ್ನೂ ನೀಡಿದ್ದಳು. ಈ ವೇಳೆ ಟಿವಿಯ ಸೌಂಡ್ ಜಾಸ್ತಿ ಮಾಡಿ ಊಟ ಮಾಡುತ್ತಿದ್ದ ರೂಪವತಿಯ ತಲೆಗೆ ಹಿಂದಿನಿಂದ ಹೊಡೆದು ಇಂದುಶೇಖರ್ ಕೊಲೆ ಮಾಡಿದ್ದಾನೆ. ಬಳಿಕ ತಂದೆ-ಮಗಳು ಸೇರಿ ರೂಪವತಿಯ ಮೃತದೇಹವನ್ನ ಚೀಲದಲ್ಲಿ ಪ್ಯಾಕ್ ಮಾಡಿದ್ದಾರೆ.
ಅಕ್ಟೋಬರ್ 19ರ ರಾತ್ರಿ ಮಗಳ ಸಹಾಯದಿಂದ ಪತ್ನಿ ಹಾಗೂ ಅತ್ತೆಯ ಮೃತದೇಹವನ್ನ ಕಾರಿನಲ್ಲಿ ಸಾಗಿಸಿದ್ದ ಇಂದುಶೇಖರ್, ತಮಿಳುನಾಡಿನ ಸೇಲಂ ಮತ್ತು ಧರ್ಮಪುರಿ ನಡುವಿನ ಘಾಟ್ ಪ್ರದೇಶದಲ್ಲಿ ಎಸೆದುಬಂದಿದ್ದಾನೆ. ಇನ್ನು ಕೊಲೆ ಬಳಿಕ ಪತ್ನಿ ಹಾಗೂ ಅತ್ತೆಯ ಮೊಬೈಲ್ಗಳನ್ನ ಆರೋಪಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.
ಅ.23, ಅ.24: ಬಾವ, ನಾದಿನಿ ಗುಂಡುಕಲ್ಲಿನ ಗುದ್ದು
ಇನ್ನೂ ಅಕ್ಟೋಬರ್ 23ರ ಶುಕ್ರವಾರ ಬೆಳಗ್ಗೆ ಶಿವಕುಮಾರ್ ತನ್ನ ಅಕ್ಕ ಹಾಗೂ ತಾಯಿಯ ಮೊಬೈಲ್ ನಂಬರ್ಗೆ ಕರೆ ಮಾಡಿದ್ದ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆ ತನ್ನ ಬಾವ ಇಂದುಶೇಖರ್ಗೆ ಕರೆ ಮಾಡಿದ್ದ. ಈ ವೇಳೆ ಇಂದುಶೇಖರ್, ಸುನೀತಾ ಹಾಗೂ ಅತ್ತೆ ರೂಪವತಿ ಟ್ರಿಪ್ಗೆ ಹೋಗಿದ್ದಾರೆ. ನೀವು ಮನೆಗೆ ಬಂದು ಊಟ ಮಾಡಿಕೊಂಡು ಹೋಗಿ ಎಂದು ಶಿವಕುಮಾರ್ನನ್ನ ಆಹ್ವಾನಿಸಿದ್ದ. ಬಾವನ ಮಾತನ್ನ ನಂಬಿದ ಶಿವಕುಮಾರ್, ಅಕ್ಟೋಬರ್ 24ರ ಶನಿವಾರ ಪತ್ನಿ ದಿವ್ಯಾ ಹಾಗೂ ಮಗ ಪುನೀತ್ ಜೊತೆ ಅಕ್ಕನ ಮನೆಗೆ ಬಂದಿದ್ದ. ಅಂದು ರಾತ್ರಿ ದಂಪತಿಗೆ ಮಾಂಸಾಹಾರ ಹಾಗೂ ಮದ್ಯದ ಜೊತೆಗೆ ನಿದ್ರೆ ಮಾತ್ರೆ ನೀಡಲಾಗಿತ್ತು. ಬಳಿಕ ದಿವ್ಯಾ ಹಾಗೂ ಮಗ ಪುನೀತ್ ಬೆಡ್ರೂಮ್ನಲ್ಲಿ ಮಲಗಿದ್ದರೆ, ಶಿವಕುಮಾರ್ ಹಾಲ್ನಲ್ಲಿ ಮಲಗಿದ್ದ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಇಂದುಶೇಖರ್, ರುಬ್ಬುವ ಕಲ್ಲಿನಿಂದ ಶಿವಕುಮಾರ್ನ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಬಳಿಕ ಅಪ್ರಾಪ್ತ ಮಗಳ ಸಹಾಯದೊಂದಿಗೆ ಶಿವಕುಮಾರ್ನ ಮೃತದೇಹವನ್ನ ಪ್ಯಾಕ್ ಮಾಡಿ ಅಡುಗೆ ಮನೆಯಲ್ಲಿಟ್ಟಿದ್ದ.
ಅಕ್ಟೋಬರ್ 25ರ ಭಾನುವಾರ ಬೆಳಗಿನ ಜಾವ ವಾಶ್ರೂಮ್ಗೆ ಹೋಗಲು ಎದ್ದು ಬಂದ ದಿವ್ಯಾ, ಪತಿ ಶಿವಕುಮಾರ್ ಎಲ್ಲಿ ಎಂದು ವಿಚಾರಿಸಿದ್ದಾಳೆ. ಈ ವೇಳೆ ಆಕೆಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ತಾಯಿಯ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಬಾಲಕ ಪುನೀತ್ನನ್ನೂ ಹತ್ಯೆ ಮಾಡಿದ್ದಾರೆ. ಬಳಿಕ ತಂದೆ-ಮಗಳು ಸೇರಿ ದಿವ್ಯಾ ಹಾಗೂ ಪುನೀತ್ನ ಮೃತದೇಹಗಳನ್ನೂ ಪ್ಯಾಕ್ ಮಾಡಿದ್ದರು. ಅಕ್ಟೋಬರ್ 27ರ ಮಂಗಳವಾರ ಬೆಳಗಿನ ಜಾವ ಮೂರು ಮೃತದೇಹಗಳನ್ನ ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಹಂತಕರು ಮನೆಯಿಂದ ಹೊರಟಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶಿವಕುಮಾರ್ ಹಾಗೂ ದಿವ್ಯಾ ಅವರ ಮೃತದೇಹಗಳನ್ನ ಎಸೆದಿದ್ದ ತಂದೆ-ಮಗಳು, ಬಾಲಕ ಪುನೀತ್ನ ಮೃತದೇಹವನ್ನ ಮಾತ್ರ ಬೆಂಗಳೂರಿಗೆ ವಾಪಸ್ ತಂದಿದ್ದರು. ಇನ್ನು ದಿವ್ಯಾಳ ಮೊಬೈಲ್ನಿಂದ ಆಕೆಯ ತಾಯಿಗೆ ಸಂದೇಶ ಕಳುಹಿಸಿದ್ದ ಶೇಖರ್, ನಾವು ಟ್ರಿಪ್ಗೆ ಬಂದಿದ್ದೇವೆ ಎಂದು ತಿಳಿಸಿದ್ದ.
ಅ.30: ಶಂಕರ್, ನಳಿನಿ ಹತ್ಯೆ
ಅಕ್ಟೋಬರ್ 31ರ ಶನಿವಾರ ಶಂಕರ್ ತನ್ನ ಅಕ್ಕ, ತಾಯಿ ಹಾಗೂ ಶಿವಕುಮಾರ್ಗೆ ಕರೆ ಮಾಡಿದ್ದ. ಆದರೆ ಯಾರೂ ಕರೆ ಸ್ವೀಕರಿಸದ ಹಿನ್ನೆಲೆ ಬಾವ ಶೇಖರ್ಗೆ ಕರೆ ಮಾಡಿದ್ದ. ಈ ವೇಳೆ ನಿಮ್ಮ ಅಕ್ಕ, ತಾಯಿ, ಶಿವು, ದಿವ್ಯಾ ಹಾಗೂ ಮಗ ಎಲ್ಲರೂ ಟ್ರಿಪ್ಗೆ ಹೋಗಿದ್ದಾರೆ ಎಂದು ಹಂತಕ ತಿಳಿಸಿದ್ದ. ಬಳಿಕ ಮನೆಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ದಂಪತಿಯನ್ನ ಆಹ್ವಾನಿಸಿದ್ದ. ನವೆಂಬರ್ 1ರ ಭಾನುವಾರ ಶಂಕರ್ ತನ್ನ ಪತ್ನಿ ನಳಿನಿ ಹಾಗೂ ಮಗ ಯತೀನ್ ಜೊತೆ ಅಕ್ಕನ ಮನೆಗೆ ಬಂದಿದ್ದ. ರಾತ್ರಿ ದಂಪತಿಗೆ ಮಾಂಸಾಹಾರದ ಊಟದ ಜೊತೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಲಾಗಿತ್ತು. ದಂಪತಿ ನಿದ್ರೆಯ ಮಂಪರಿಗೆ ಜಾರುತ್ತಿದ್ದಂತೆ ಶಂಕರ್ ಮತ್ತು ನಳಿನಿಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿತ್ತು.
ನಂತರ ತಂದೆ-ಮಗಳು ಸೇರಿಕೊಂಡು ದಂಪತಿಯ ಮೃತದೇಹಗಳನ್ನ ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಿದ್ದರು. ಬಾಲಕ ಯತೀನ್ನ ಹತ್ಯೆಗೆ ಹಂತಕರು ಪ್ರತ್ಯೇಕ ದಿನವನ್ನ ನಿಗದಿಪಡಿಸಿದ್ದರು. ಅಲ್ಲಿಯವರೆಗೆ ಪುನೀತ್ನ ಮೃತದೇಹ ಕಾರಿನ ಡಿಕ್ಕಿಯಲ್ಲೇ ಇತ್ತು. ಅದೇ ರಾತ್ರಿ ಮೂರು ಮೃತದೇಹಗಳನ್ನು ವಿಲೇವಾರಿ ಮಾಡಲು ಆರೋಪಿಗಳು ಹೊರಟಿದ್ದರು. ನವೆಂಬರ್ 2ರ ಸೋಮವಾರ ಬೆಳಗಿನ ಜಾವ ಶಿರಾಡಿ ಘಾಟ್ ಬಳಿ ಶಂಕರ್ ಮತ್ತು ನಳಿನಿಯ ಮೃತದೇಹಗಳನ್ನ ಎಸೆದಿದ್ದರು. ಯಾರಿಗೂ ಯಾವುದೇ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಅಂದೇ ನಂದಿ ಬೆಟ್ಟದ ಬಳಿ ಬಾಲಕ ಪುನೀತ್ನ ಮೃತದೇಹವನ್ನೂ ಎಸೆದಿದ್ದರು. ಈ ವೇಳೆ ಮೂರು ಮೃತದೇಹಗಳನ್ನು ವಿಲೇವಾರಿ ಮಾಡುವಾಗ ಬಾಲಕ ಯತೀನ್ ಕೂಡ ಹಂತಕರ ಜೊತೆಯಲ್ಲೇ ಇದ್ದ ಎಂದು ತಿಳಿದುಬಂದಿದೆ.
ನವೆಂಬರ್ 3 ರಂದು; ತನಿಖೆ ಶುರು
ನವೆಂಬರ್ 2ರ ಸೋಮವಾರದಂದು 7 ಮಂದಿಯೂ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಆತಂಕಗೊಂಡ ಕುಟುಂಬಸ್ಥರು ದೂರು ನೀಡಲು ಮುಂದಾಗಿದ್ದರು. ಅದರಂತೆ, ಸೋಮವಾರ ಸಂಜೆ ಶ್ರೀರಾಮಪುರ ಪೊಲೀಸ್ ಠಾಣೆಗೆ ತೆರಳಿದ್ದರು. ಆದ್ರೆ ರಾತ್ರಿ ತಡವಾದ ಕಾರಣ ಅಂದು ದೂರು ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ನವೆಂಬರ್ 3ರ ಮಂಗಳವಾರ ನಳಿನಿ ಅವರ ತಾಯಿ ತುಂಗಮ್ಮ ಅವರು ಏಳು ಮಂದಿ ಕಾಣೆಯಾಗಿರುವ ಬಗ್ಗೆ ಶ್ರೀರಾಮಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಶ್ರೀರಾಮಪುರ ಪೊಲೀಸರು ತನಿಖೆ ಆರಂಭಿಸಿದ್ದರು.
ನವೆಂಬರ್ 4 ರಂದು ಹಂತಕರು ಲಾಕ್
ನವೆಂಬರ್ 4ರ ಬುಧವಾರ ಶ್ರೀರಾಮಪುರ ಪೊಲೀಸರು ಆರೋಪಿಗಳನ್ನ ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು. 7 ಮಂದಿ ನಾಪತ್ತೆಯಾದವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಟವರ್ ಡಂಪ್ ಪರಿಶೀಲಿಸಿದಾಗ ಒಂದೇ ಸ್ಥಳದಲ್ಲಿ 6 ಮಂದಿಯ ಮೊಬೈಲ್ ನೆಟ್ವರ್ಕ್ ಸಿಗ್ನಲ್ ಪತ್ತೆಯಾಗಿತ್ತು. ಈ ಆರು ಮಂದಿಯ ಪೈಕಿ ಹಂತಕ ಇಂದುಶೇಖರ್ನ ಮೊಬೈಲ್ ಸಂಖ್ಯೆಯೂ ಆ್ಯಕ್ಟಿವ್ ಆಗಿರುವುದು ಪೊಲೀಸರಿಗೆ ತಿಳಿದುಬಂದಿತ್ತು.
ಇದನ್ನೇ ಆಧಾರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಹಂತಕ ಇಂದುಶೇಖರ್ ಹಾಗೂ ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದು, ಬಾಲಕ ಯತೀನ್ನನ್ನ ರಕ್ಷಿಸಿದ್ದರು. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಏಳು ಕೊಲೆಗಳ ಭಯಾನಕ ರಹಸ್ಯ ಬಯಲಾಗಿದೆ. ಅಷ್ಟೇ ಅಲ್ಲದೇ, ಬಾಲಕ ಯತೀನ್ ಸೇರಿದಂತೆ ಇನ್ನೂ ಇಬ್ಬರನ್ನು ಹತ್ಯೆ ಮಾಡಲು ಇಂದುಶೇಖರ್ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಸಂಗತಿಯೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.




