ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ಯೋಜನೆಯನ್ನ ಸರ್ಕಾರ ಸಂಪೂರ್ಣವಾಗಿ ಕೈಬಿಡುವವರೆಗೂ ದೇವೇಗೌಡರ ಕುಟುಂಬ ಮತ್ತು ಜೆಡಿಎಸ್ ಪಕ್ಷವು ರೈತರ ಪರವಾಗಿ ಹೋರಾಟ ಮುಂದುವರಿಸಲಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.
ಭೈರಮಂಗಲ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿ ಹಾಗೂ ರೈತರ (Farmers) ವಿರೋಧಿ ನಿಲುವನ್ನ ತೀವ್ರವಾಗಿ ಖಂಡಿಸಿದರು.

ಕಳೆದ 500ಕ್ಕೂ ಹೆಚ್ಚು ದಿನಗಳಿಂದ ರೈತರು ತಮ್ಮ ಸ್ವಂತ ಆಸ್ತಿ ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಹೆಚ್.ಡಿ ದೇವೇಗೌಡರು (HD Devegowda) ಮಾಧ್ಯಮ ಗೋಷ್ಠಿ ನಡೆಸಿ, ʻಸರ್ಕಾರ ಈ ಯೋಜನೆಯಿಂದ ಹಿಂದೆ ಸರಿಯದಿದ್ದರೆ ಸತ್ಯಾಗ್ರಹ ಕೂರುತ್ತೇವೆʼ ಎಂದು ಎಚ್ಚರಿಕೆ ನೀಡಿದ ಮಾರನೇ ದಿನವೇ ಮುಖ್ಯಮಂತ್ರಿಗಳು ಸಮಿತಿ ರಚನೆಯ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ ನಂತರ ಮತ್ತೆ ನಾಲ್ಕು ಗ್ರಾಮಗಳ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ಇದು ಸರ್ಕಾರದ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಚುನಾವಣೆ ಹಾಗೂ ಭೇಟಿ ಸಂದರ್ಭಗಳಲ್ಲಿ ರಾಮನಗರದ ಜನರ ಬಳಿ ʻನಮಗೆ ಪೆನ್ನು, ಪೇಪರ್ ಕೊಡಿʼ ಎಂದು ಕೇಳಿದ್ದ ಆಡಳಿತ ಪಕ್ಷದ ನಾಯಕರು, ಈಗ ಅದೇ ಪೆನ್ನು-ಪೇಪರ್ ಬಳಸಿ ರೈತರಿಗೆ ಮರಣಶಾಸನ ಬರೆಯಲು ಹೊರಟಿದ್ದಾರೆಯೇ ಎಂದು ನಿಖಿಲ್ ನೇರವಾಗಿ ಪ್ರಶ್ನಿಸಿದರು.
ಈ ಟೌನ್‌ಶಿಪ್ ಯೋಜನೆಯಿಂದಾಗಿ ಸುಮಾರು 10 ಲಕ್ಷ ತೆಂಗು, ಮಾವು, ಬಾಳೆ ಮತ್ತು ಅಡಿಕೆ ಮರಗಳ ಮಾರಣಹೋಮ ನಡೆಯಲಿದೆ. 33 ಸಾವಿರ ಕೋಟಿ ರೂಪಾಯಿಗಳ ಲಾಭ ಮಾಡಿಕೊಳ್ಳಲು ಸರ್ಕಾರ ಈ ಬೃಹತ್ ಯೋಜನೆಯನ್ನ ಜಾರಿಗೊಳಿಸಲು ಹೊರಟಿದೆ. ರೈತರ ಭೂಮಿಗೆ ಪರಿಹಾರ ನೀಡಲು ಕನಿಷ್ಠ 11 ಸಾವಿರ ಕೋಟಿ ರೂಪಾಯಿ ಅಗತ್ಯವಿದೆ. ಆದರೆ ಸರ್ಕಾರದ ಬಳಿ ಹಣವೇ ಇಲ್ಲ. ನಿಮ್ಮ ಬಳಿ ಹಣವಿದ್ದರೆ ತೋರಿಸಿ ಎಂದು ಸರ್ಕಾರಕ್ಕೆ ಸವಾಲೆಸೆದ ಅವರು, ಯೋಜನೆಯ ವ್ಯಾಪ್ತಿಗೆ ಬರುವ 2,000 ರೈತರ ಪೈಕಿ ಕೇವಲ 50 ಜನರು ಮಾತ್ರ ಪರಿಹಾರ ಧನ ಪಡೆದಿದ್ದಾರೆ. ಬಹುತೇಕ ರೈತರು ಭೂಮಿ ನೀಡಲು ಸಿದ್ಧರಿಲ್ಲ ಎಂದರು.

ಈ ಜಿಲ್ಲೆಯಲ್ಲಿ ನಾವು ಹುಟ್ಟದೇ ಇದ್ದರೂ, ರಾಮನಗರದ ಜನತೆ ದೇವೇಗೌಡರ ಕುಟುಂಬಕ್ಕೆ ‘ಜಿಲ್ಲೆಯ ಮಗ’ ಎನ್ನುವ ಗೌರವ ಕೊಟ್ಟಿದ್ದಾರೆ. ರೈತರ ಭೂಮಿ ಉಳಿಸಲು ನಮ್ಮ ಕುಟುಂಬ ಕೊನೆ ಉಸಿರಿರುವ ತನಕ ಹೋರಾಡಲಿದೆ. ಈ ಸಂಬಂಧ ಈಗಾಗಲೇ ಕಾನೂನು ಹೋರಾಟವೂ ಆರಂಭವಾಗಿದೆ. ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು, ಈ ಮೂರು ದಿನಗಳ ಪಾದಯಾತ್ರೆಯ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅಭಯ ನೀಡಿದರು.
