Tuesday, 16th July 2019

ನಮ್ಮ ಕುಟುಂಬ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ: ನಿಖಿಲ್

ಮಂಡ್ಯ: ನಮ್ಮ ಕುಟುಂಬ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಹೇಳುವ ಮೂಲಕ ನನ್ನ ಪರವಾಗಿ ಕೆಲಸ ಮಾಡಿದವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಸುಮಲತಾ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಚುನಾವಣೆ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿದ್ದ ನಿಖಿಲ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ತಮ್ಮ ಪರ ಕೆಲಸ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ವಂದನೆಗಳು. ಚುನಾವಣೆ ಮುಗಿದ ನಂತರ ಬೆಂಗಳೂರಿನಲ್ಲೇ ಇದ್ದು ಒಂದಷ್ಟು ದೇವರ ಪೂಜೆ ಮಾಡುತ್ತಿದ್ದೆ. ನಾನು ಮಂಡ್ಯದಲ್ಲೇ ಇದ್ದು ಜಮೀನು ಖರೀದಿಸುವ ಬಗ್ಗೆ ಹಿಂದೆ ಹೇಳಿದ್ದೆ. ಆ ಪ್ರಕ್ರಿಯೆ ಒಂದೆರೆಡು ದಿನದಲ್ಲಿ ಆಗುವಂತಹದ್ದಲ್ಲ. ನಾನು ಇಲ್ಲಿಯೇ ಇರುತ್ತೇನೆ. ಮೂರ್ನಾಲ್ಕು ತಿಂಗಳಲ್ಲಿ ಮನೆ ಕಟ್ಟಿ, ಜಮೀನು ತೆಗೆದುಕೊಳ್ಳುವುದನ್ನು ನೋಡಲಿದ್ದೀರಿ. ಇಲ್ಲೇ ನಮ್ಮ ಶಾಸಕರು, ಸಚಿವರ ಕೈ ಬಲಪಡಿಸಿ ಕೆಲಸ ಮಾಡುತ್ತೇನೆ ಎಂದರು.

ಮಂಡ್ಯ ಜಿಲ್ಲೆಯ ಮತದಾರ ಬಂಧುಗಳು ನನಗೆ ಅವಕಾಶ ಮಾಡಿಕೊಡುವ ನಂಬಿಕೆಯಿದೆ. ಈ ಚುನಾವಣೆ ನನಗೆ ಉತ್ತಮ ಅನುಭವ ಸಿಕ್ಕಿದೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಂದಷ್ಟು ಗೊಂದಲ ಇದ್ದದ್ದು ನಿಜ. ಇದರ ಬಗ್ಗೆ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆದ ದಿನದಿಂದಲೂ ಡೇಟ್ ಫಿಕ್ಸ್ ಮಾಡಿದ್ದಾರೆ. ಮೈತ್ರಿ ಪಕ್ಷಕ್ಕೆ ತೊಂದರೆ ಕೊಡಲು ಒಂದಷ್ಟು ಜನ ಪ್ರಯತ್ನ ಪಡುತ್ತಿರಬಹುದು. ಆದರೆ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಚ್‍ಡಿಡಿ ಕುರಿತು ಪ್ರಶ್ನೆಗೆ ಉತ್ತರಿಸಿದ ನಿಖಿಲ್, ಅವರು ಒಂದಷ್ಟು ಕ್ರೆಡಿಟ್ ನನಗೆ ಕೊಟ್ಟಿದ್ದಾರೆ. ಮೊಮ್ಮಗನೇ ಹೋರಾಟ ಮಾಡಿದ್ದೀಯ. ಗೆಲುವು ನಿನ್ನದಾಗಲಿದೆ ಎಂದಿದ್ದಾರೆ. ಅವರು ಚಿಕ್ಕಂದಿನಿಂದ ಹೋರಾಟ ಮಾಡಿಕೊಂಡು ಬಂದು ಆ ಹಿನ್ನೆಲೆಯಲ್ಲಿಯೇ ಪ್ರಧಾನ ಮಂತ್ರಿ ಆಗಿದ್ದಾರೆ. ಅವರ ಹೆಜ್ಜೆ ಗುರುತನ್ನು ಮುಂದೆ ನಾನು ಫಾಲೋ ಮಾಡುತ್ತೇನೆ. ದೇವೇಗೌಡರನ್ನು ಯಾರ ಜೊತೆಯೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಬೆಟ್ಟಿಂಗ್ ಆಡುವುದು ತಪ್ಪು, ಯಾರೂ ಕೂಡ ಬೆಟ್ಟಿಂಗ್ ಕಟ್ಟಬಾರದು ಎಂದು ನಿಖಿಲ್ ಮನವಿ ಮಾಡಿದರು.

Leave a Reply

Your email address will not be published. Required fields are marked *