– 25 ಸಾವಿರ ರೂ.ಗೆ ಭೌತಶಾಸ್ತ್ರ ಪ್ರಶ್ನೆ ಸೇಲ್; ಆರೋಪ
ನವದೆಹಲಿ: ನೀಟ್ ಯುಜಿ (NEET UG) 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಶುಕ್ರವಾರ (ಇಂದು) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ. ಪರೀಕ್ಷೆಗೆ ಮೂರು ದಿನಗಳಿಗೂ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಅವುಗಳನ್ನು ವಾಟ್ಸಪ್, ಟೆಲಿಗ್ರಾಂ ಹಾಗೂ ಆಫ್‌ಲೈನ್ ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.
ಸಿಬಿಐ ತನಿಖೆಯ ಪ್ರಕಾರ, ಈ ಪ್ರಕರಣದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ಸಂಬಂಧಿಸಿದ ವಿಷಯ ತಜ್ಞರು, ಕೋಚಿಂಗ್ ಕೇಂದ್ರಗಳ ನಿರ್ವಾಹಕರು, ಮಧ್ಯವರ್ತಿಗಳು ಹಾಗೂ ಇನ್ನಿತರರು ಭಾಗಿಯಾಗಿದ್ದಾರೆ ಎಂದು ಕೂಡ ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.


ಪಿ.ವಿ ಕುಲಕರ್ಣಿ ಸ್ಪೆಷಲ್ ಕ್ಲಾಸ್‌ನಲ್ಲಿ ಪೇಪರ್ ಲೀಕ್
ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿರುವಂತೆ, ರಸಾಯನಶಾಸ್ತ್ರ ವಿಷಯದ ತಜ್ಞ ಪಿ.ವಿ ಕುಲಕರ್ಣಿ, ಕಳೆದ ಏಪ್ರಿಲ್ 25 ರಿಂದ 27ರ ವರೆಗೆ ಪುಣೆಯಲ್ಲಿ ನೀಟ್ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನ ನಡೆಸಿದ್ದರು. ಈ ಸಂರ್ಭದಲ್ಲಿ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ ಬಂದಿದ್ದ ಅದೇ ಪ್ರಶ್ನೆಗಳು ಹಾಗೂ ಅದಕ್ಕೆ ಉತ್ತರಗಳನ್ನೂ ಹೇಳಿಕೊಟ್ಟಿದ್ದರು. ಇದೇ ರೀತಿಯ ವಿಶೇಷ ತರಗತಿಗಳು ಲಾತೂರ್‌ನಲ್ಲಿಯೂ ನಡೆದಿದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ವಿದ್ಯಾರ್ಥಿಗಳ ನೋಟ್‌ಬುಕ್‌ಗಳಲ್ಲಿ ಬರೆದಿದ್ದ ಪ್ರಶ್ನೆಗಳು ಸೋರಿಕೆಯಾದ ಪ್ರಶ್ನೆಪತ್ರಿಕೆಯೊಂದಿಗೆ ಹೊಂದಿಕೆಯಾಗಿವೆ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ಕುಲಕರ್ಣಿ ಅವರ ಮೊಬೈಲ್‌ನಿಂದ ರಸಾಯನಶಾಸ್ತ್ರ ಪ್ರಶ್ನೆಗಳ ಫೋಟೋಗಳು, ಅಭ್ಯರ್ಥಿಗಳು ಹಾಗೂ ಅವರ ಪೋಷಕರೊಂದಿಗೆ ನಡೆದ ಸಂಭಾಷಣೆಗಳು ಸೇರಿದಂತೆ ಹಲವು ಪ್ರಮುಖ ಡಿಜಿಟಲ್ ಸಾಕ್ಷ್ಯಗಳು ಪತ್ತೆಯಾಗಿವೆ. ಪರೀಕ್ಷೆಯ ಬಳಿಕ ಒಬ್ಬ ಪೋಷಕರು ಕುಲಕರ್ಣಿ ಅವರನ್ನ ಸಂಪರ್ಕಿಸಿ, ಅವರು ಹೇಳಿದ್ದ ಪ್ರಶ್ನೆಗಳೇ ಪರೀಕ್ಷೆಯಲ್ಲಿ ಬಂದಿದ್ದರಿಂದ ಅವರಿಗೆ ವಾಚ್ ವೊಂದನ್ನ ಗಿಫ್ಟ್ ಆಗಿ ನೀಡಲು ಬಯಸಿದ್ದಾಗಿಯೂ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಪಡೆಯಲು ಕೂಡ ಕುಲಕರ್ಣಿ ಪ್ರಯತ್ನಿಸಿದ್ದರು ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

25 ಸಾವಿರ ರೂ.ಗೆ ಭೌತಶಾಸ್ತ್ರ ಪ್ರಶ್ನೆ ಸೋರಿಕೆ ಆರೋಪ
ಇನ್ನೂ ಭೌತಶಾಸ್ತ್ರ ವಿಷಯದ ತಜ್ಞೆ ಮನೀಷಾ ಹವಾಲ್ದಾರ್ ಅವರು, 25 ಸಾವಿರ ರೂ. ಪಡೆದು ಪ್ರಶ್ನೆಗಳನ್ನ ಸೋರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪರೀಕ್ಷೆಗೆ 8 ದಿನಗಳ ಮುಂಚೆಯೇ ಅವರ ಮೊಬೈಲ್‌ನಲ್ಲಿ ಕೈಬರಹದ ಪ್ರಶ್ನೆಗಳು ಇದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅವರು ಆ ಪ್ರಶ್ನೆಗಳನ್ನ ಮತ್ತೊಬ್ಬ ಆರೋಪಿ ತೇಜಸ್ ಶಾಗೆ ಹೇಳಿಕೊಟ್ಟಿದ್ದು, ಆತ ಅವುಗಳನ್ನು ಮುಂದಕ್ಕೆ ರವಾನಿಸಿದ್ದಾನೆ ಎಂದು ಸಿಬಿಐ ಹೇಳಿದೆ.
ಮನೀಷಾ ವಾಘ್ಮಾರೆ ಎಂಬವರು ವಿದ್ಯಾರ್ಥಿಗಳು ಹಾಗೂ ವಿಷಯ ತಜ್ಞರ ನಡುವಿನ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪೋಷಕರಿಂದ ವಿದ್ಯಾರ್ಥಿಗಳನ್ನು ಆಫ್‌ಲೈನ್ ತರಗತಿಗಳಿಗೆ ಕಳುಹಿಸಲು 4 ಲಕ್ಷ ರೂ. ವರೆಗೆ ಸಂಗ್ರಹಿಸುತ್ತಿದ್ದು, ನಂತರ ವಾಟ್ಸ್‌ಆ್ಯಪ್ ಮೂಲಕ ಭೌತಶಾಸ್ತ್ರ ಪ್ರಶ್ನೆಗಳನ್ನ ಹಂಚಿಕೊಳ್ಳಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅದೇ ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದರೆ ಹೆಚ್ಚುವರಿಯಾಗಿ 50 ಸಾವಿರ ರೂ. ನೀಡುವಂತೆ ಬೇಡಿಕೆ ಕೂಡ ಇಡಲಾಗುತ್ತಿತ್ತು ಎನ್ನಲಾಗಿದೆ.

ಮನೆಯಲ್ಲೇ ಜೀವಶಾಸ್ತ್ರ ತರಗತಿಗಳು
ಇನ್ನೊಬ್ಬ ಆರೋಪಿ ಮನೀಷಾ ಗುರುನಾಥ್ ಮಂದಾರೆ ತಮ್ಮ ನಿವಾಸದಲ್ಲಿಯೇ ಜೀವಶಾಸ್ತ್ರ ತರಗತಿಗಳನ್ನ ನಡೆಸುತ್ತಿದ್ದರು. ವಿದ್ಯಾರ್ಥಿಗಳಿಗೆ ಹೊಸ ಎನ್‌ಸಿಇಆರ್‌ಟಿ (NCERT) ಪಠ್ಯಪುಸ್ತಕದಲ್ಲಿನ ನಿರ್ದಿಷ್ಟ ಪ್ಯಾರಾಗಳನ್ನೇ ಗುರುತಿಸಿ ಪ್ರಶ್ನೆಗಳನ್ನು ಬರೆಸಲಾಗುತ್ತಿತ್ತು. ಬಳಿಕ ಅವರು ಸೋರಿಕೆಯಾದ ಭೌತಶಾಸ್ತ್ರ ಪ್ರಶ್ನೆಗಳ ಪ್ರತಿಗಳನ್ನೂ ಪಡೆದಿದ್ದರು ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಶ್ನೆಗಳು ನೂರಾರು ವಿದ್ಯಾರ್ಥಿಗಳನ್ನ ತಲುಪಿದ್ದು ಹೇಗೆ?
ರಾಜಸ್ಥಾನದ ಸೀಕರ್‌ನಲ್ಲಿದ್ದ ಕೋಚಿಂಗ್ ಜಾಲದ ಮೂಲಕವೂ ಸೋರಿಕೆಯಾದ ಪ್ರಶ್ನೆಪತ್ರಿಕೆ ನೂರಾರು ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ ಎಂದು ಸಿಬಿಐ ಹೇಳಿದೆ. ಪರೀಕ್ಷೆಗೆ ಮುನ್ನ ಮೇ 2ರ ರಾತ್ರಿ 40 ರಿಂದ 50 ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿರುವ ಪಿಡಿಎಫ್ ಫೈಲ್ ಹಂಚಲಾಗಿತ್ತು. ಕೋಚಿಂಗ್ ನಿರ್ವಾಹಕರು ಅದನ್ನು “ಬಹುತೇಕ ಇದೇ ಪ್ರಶ್ನೆಪತ್ರಿಕೆ ಬರುತ್ತದೆ” ಎಂದು ಹೇಳಿ ವಿದ್ಯಾರ್ಥಿಗಳಿಗೆ ರವಾನಿಸಿದ್ದರು. ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಇದೇ ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿದ್ದವು ಎಂದು ಹೇಳುವ ವಿಡಿಯೊಗಳನ್ನೂ ದಾಖಲಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ವಾಟ್ಸಪ್ ಗ್ರೂಪ್, ಕೋಡ್ ವರ್ಡ್ ಬಳಕೆ
ʻNEET 2026ʼ, ʻFIFA World Cup 2026ʼ ಸೇರಿದಂತೆ ಹಲವು ವಾಟ್ಸಪ್ ಗುಂಪುಗಳ ಮೂಲಕ ಪ್ರಶ್ನೆಗಳು ಹಾಗೂ ಮಾಹಿತಿಯನ್ನ ಹಂಚಿಕೊಳ್ಳಲಾಗುತ್ತಿತ್ತು. ಆರೋಪಿಗಳು ತಮ್ಮ ಗುರುತು ಮರೆಮಾಚಲು ಕೋಡ್ ಹೆಸರುಗಳನ್ನ ಬಳಸುತ್ತಿದ್ದರು. ಎನ್‌ಟಿಎಯ ಮಾಸ್ಟರ್ ಸೆಟ್‌ಗಳಿಗೆ ʻKailashʼ ಹಾಗೂ ʻShivalikʼ ಎಂಬ ಹೆಸರುಗಳನ್ನ ಬಳಸಲಾಗುತ್ತಿತ್ತು. ಮತ್ತೊಬ್ಬ ಆರೋಪಿ ತನ್ನ ಸಹಚರನ ಮೊಬೈಲ್ ಸಂಖ್ಯೆಯನ್ನ ʻAP Brokerʼ ಎಂಬ ಹೆಸರಿನಲ್ಲಿ ಸೇವ್ ಮಾಡಿಕೊಂಡಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
2025ರ ಅಕ್ಟೋಬರ್‌ನಲ್ಲೇ ಆರಂಭವಾಗಿತ್ತು ಸಂಚು
ಪ್ರಶ್ನೆಪತ್ರಿಕೆ ಸೋರಿಕೆಗೆ 2025ರ ಅಕ್ಟೋಬರ್‌ನಲ್ಲೇ ಸಂಚು ರೂಪಿಸಲಾಗಿತ್ತು. 2025ರ ಅಕ್ಟೋಬರ್‌ನಿಂದಲೇ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸಂಪರ್ಕಿಸಿ, ಲಕ್ಷಾಂತರ ರೂಪಾಯಿಗಳನ್ನ ಕಂತುಗಳಲ್ಲಿ ಸಂಗ್ರಹಿಸುತ್ತಿದ್ದರು. ಹಣವನ್ನ ನಗದು ರೂಪದಲ್ಲೂ, ಆನ್‌ಲೈನ್ ಮೂಲಕವೂ ಪಾವತಿಸಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಭದ್ರತಾ ಲೋಪದ ದುರುಪಯೋಗ
ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹಾಗೂ ಭಾಷಾಂತರ ಮಾಡುವ ಪ್ರಕ್ರಿಯೆಯಲ್ಲಿ ಒಬ್ಬನೇ ತಜ್ಞನಿಗೆ 4 ಮಾಸ್ಟರ್ ಸೆಟ್‌ಗಳ ಪ್ರವೇಶವಿತ್ತು ಎಂದು ಸಿಬಿಐ ಪ್ರಶ್ನಿಸಿದೆ. ತಜ್ಞರ ಸಮರ್ಪಕ ತಪಾಸಣೆ (Frisking) ನಡೆಸಲಾಗಿರಲಿಲ್ಲ. ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಪ್ರತ್ಯೇಕ ನಿಯಂತ್ರಣ ಕೊಠಡಿಯೂ ಇರಲಿಲ್ಲ. ಇದೇ ಭದ್ರತಾ ಲೋಪವನ್ನ ಬಳಸಿಕೊಂಡು ಪ್ರಶ್ನೆಗಳನ್ನು ಹೊರಗೆ ಸಾಗಿಸಲಾಗಿದೆ ಎಂದು ತನಿಖೆ ತಿಳಿಸಿದೆ.

