ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನೀಟ್ ಮರುಪರೀಕ್ಷೆ ಫಲಿತಾಂಶ ಇದೇ ಜು.20ರೊಳಗೆ ಪ್ರಕಟಗೊಳ್ಳಲಿದೆ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ ಜೂ.21ರಂದು ನಡೆಸಲಾಗಿದ್ದ ನೀಟ್ ಮರುಪರೀಕ್ಷೆಯ ಫಲಿತಾಂಶಕ್ಕಾಗಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಇದರ ನಡುವೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದ್ದು, ಜು.20ರೊಳಗೆ ಪ್ರಕಟಗೊಳ್ಳಲಿದೆ. ಆದರೆ ನಿಖರವಾದ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಕಲ್ಯಾಣ ಮಂಟಪದಲ್ಲಿ ಎಸ್‌ಐಆರ್ – ಮುಖ್ಯ ಚುನಾವಣಾಧಿಕಾರಿಯಿಂದ ಬಿಎಲ್‌ಒಗಳಿಗೆ ನೋಟಿಸ್ ಜಾರಿ
ಸಾಮಾನ್ಯವಾಗಿ 45 ದಿನ ತಗಲುವ ಪ್ರಕ್ರಿಯೆಯನ್ನು ಈ ಬಾರಿ ಕೇವಲ 37 ದಿನಗಳಲ್ಲಿ ಮುಗಿಸಲು ಎನ್‌ಟಿಎ ಸಿದ್ಧತೆ ನಡೆಸಿದೆ. ಜೂನ್ 25 ರಂದು ಬಿಡುಗಡೆಯಾಗಿದ್ದ ತಾತ್ಕಾಲಿಕ ಕೀ ಉತ್ತರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಸುಮಾರು 10,000 ಆಕ್ಷೇಪಣೆಗಳು ಬಂದಿವೆ. ಅಧಿಕಾರಿಗಳು ಪ್ರತಿಯೊಂದು ಆಕ್ಷೇಪಣೆಯನ್ನು ಮತ್ತು ಅದಕ್ಕೆ ನೀಡಲಾದ ಪುರಾವೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಈ ಪ್ರಕ್ರಿಯೆ ಮುಗಿದ ನಂತರವೇ ಅಂತಿಮ ಕೀ ಉತ್ತರ ಮತ್ತು ರಿಸಲ್ಟ್ ಹೊರಬರಲಿದೆ.
ಸದ್ಯಕ್ಕೆ ಫಲಿತಾಂಶದ ದಿನಾಂಕ ಹತ್ತಿರವಿದ್ದರೂ, ಕೌನ್ಸೆಲಿಂಗ್ ಯಾವಾಗ ಆರಂಭವಾಗುತ್ತದೆ ಎಂಬ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಇನ್ನೂ ಮರು-ಪರೀಕ್ಷೆ ನಡೆದಿದ್ದರೂ ಸಹ, ವೈದ್ಯಕೀಯ ಶಿಕ್ಷಣದ ತರಗತಿಗಳು ನಿಗದಿತ ಸಮಯಕ್ಕೇ ಆರಂಭವಾಗಲಿವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಗೆ ಮಗ ಮೊಜ್ತಬಾ ಹೋಗಲ್ಲ – ಭಾರತದಿಂದ ಭಾಗವಹಿಸೋದ್ಯಾರು?
