ಉಡುಪಿ: ಬಹುಭಾಷಾ ನಟ, ರಂಗಭೂಮಿ ಕಲಾವಿದ, ಸಹಜ ಅಭಿನಯದ ಮೂಲಕವೇ ಪ್ರೇಕ್ಷಕರ ಮನಗೆದ್ದ ಹಿರಿಯ ನಟ ನಾನಾ ಪಾಟೇಕರ್ (Nana Patekar) ಅವರ ನಿಧನಕ್ಕೆ ಬಾಲಿವುಡ್ ಮಾತ್ರವಲ್ಲ, ಕರಾವಳಿ ಕರ್ನಾಟಕವೂ ಕಂಬನಿ ಮಿಡಿದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದೊಂದಿಗೆ ನಾನಾ ಪಾಟೇಕರ್ ಅವರಿಗೆ ವಿಶೇಷವಾದ ಅವಿನಾಭಾವ ನಂಟಿತ್ತು. ಸಮಾಜಸೇವೆ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಮುಂಡ್ಕೂರು ಗ್ರಾಮಸ್ಥರ ಮನದಲ್ಲಿ ಇನ್ನು ಸದಾ ನೆನಪಾಗಿ ಉಳಿಯಲಿದೆ.
ಮುಂಡ್ಕೂರು ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ತನ್ನದೇ ಆದ ವಿಶೇಷತೆ ಹೊಂದಿರುವ ಗ್ರಾಮ. ಇದೇ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ನಾನಾ ಪಾಟೇಕರ್ ಅವರ ನಡುವೆ ವಿಶೇಷ ಬಾಂಧವ್ಯವಿತ್ತು. ಮುಂಬೈನ ಉದ್ಯಮಿ, ಮುಂಡ್ಕೂರು ಆಶ್ರಯ ಟ್ರಸ್ಟ್ ಹಾಗೂ ಮುಲ್ಲಡ್ಕ ಗುರುಪ್ರಸಾದ್ ಸಂಸ್ಥಾಪಕ ಸುಧಾಕರ್ ಶೆಟ್ಟಿ ಅವರೊಂದಿಗಿನ ಆಪ್ತ ಸ್ನೇಹವೇ ನಾನಾ ಪಾಟೇಕರ್ ಅವರನ್ನು ಮುಂಡ್ಕೂರಿನತ್ತ ಕರೆತಂದಿತ್ತು. ಸುಧಾಕರ್ ಶೆಟ್ಟಿ ಅವರ ಆಹ್ವಾನದ ಮೇರೆಗೆ ಹಲವು ಬಾರಿ ಮುಂಡ್ಕೂರಿಗೆ ಭೇಟಿ ನೀಡಿದ್ದ ನಾನಾ ಪಾಟೇಕರ್, ಗ್ರಾಮದ ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಯಲ್ಲೂ ಕೈಜೋಡಿಸಿದ್ದರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲೂ ನಾನಾ ಪಾಟೇಕರ್ ಮಹತ್ವದ ಸೇವೆ ಸಲ್ಲಿಸಿದ್ದರು. ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಅವರ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡಿರುವ ‘ನಾನಾ ಪಾಟೇಕರ್ ಸಭಾಂಗಣ’ ಇಂದು ಗ್ರಾಮದ ಪ್ರಮುಖ ಸಮುದಾಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದನ್ನೂ ಓದಿ: ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್ – 56ನೇ ವಯಸ್ಸಿನಲ್ಲಿ ಏಕಾಏಕಿ ಧೂಮಪಾನ ಬಿಟ್ಟಿದ್ದೇಕೆ?

ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೂ ನಾನಾ ಪಾಟೇಕರ್ ನೆರವಾಗಿದ್ದರು. ಮುಂಡ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಬಾರಿ ಖುದ್ದಾಗಿ ಭೇಟಿ ನೀಡಿದ್ದ ಅವರು, 2017ರಲ್ಲಿ ಆಶ್ರಯ ಟ್ರಸ್ಟ್ ಸಹಯೋಗದಲ್ಲಿ ಕಂಪ್ಯೂಟರ್ ಕೊಠಡಿ ಸ್ಥಾಪನೆ, ಗ್ರಂಥಾಲಯ ಆಧುನೀಕರಣ ಹಾಗೂ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ್ದರು. ಸ್ಥಳೀಯ ಪದವಿಪೂರ್ವ ಕಾಲೇಜಿಗೂ ಅವರು ಕೊಡುಗೆ ನೀಡಿದ್ದರು. ತಮ್ಮ ಸರಳತೆ, ಸಹಜತೆ ಹಾಗೂ ಸಮಾಜಮುಖಿ ಚಟುವಟಿಕೆಗಳಿಂದ ಮುಂಡ್ಕೂರು ಗ್ರಾಮಸ್ಥರ ಮನಗೆದ್ದಿದ್ದ ನಾನಾ ಪಾಟೇಕರ್ ಕರಾವಳಿ ಕರ್ನಾಟಕ ಹಾಗೂ ಬಾಲಿವುಡ್ ನಡುವಿನ ಸಾಮಾಜಿಕ ಸೇತುವೆಯಂತಿದ್ದರು. ಅವರ ಅಗಲಿಕೆ ಮುಂಡ್ಕೂರು ಗ್ರಾಮಸ್ಥರಿಗೂ ತುಂಬಲಾರದ ನಷ್ಟವಾಗಿದೆ. ಇದನ್ನೂ ಓದಿ: ಕಾರ್ಗಿಲ್ ಯುದ್ಧದ ಸಮಯದಲ್ಲಿ ಸಿನಿಮಾ ಬಿಟ್ಟು ಸೇನೆ ಸೇರಿದ್ದ ನಾನಾ ಪಾಟೇಕರ್
ಸಿನಿಮಾ, ರಂಗಭೂಮಿ ಹಾಗೂ ಸಮಾಜಸೇವೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಾನಾ ಪಾಟೇಕರ್ ಅವರೊಂದಿಗಿನ ಮುಂಡ್ಕೂರಿನ ನಂಟು ಇದೀಗ ನೆನಪಾಗಿ ಮಾತ್ರ ಉಳಿದಿದೆ. ಆದರೆ, ಅವರು ನೀಡಿದ ಶಿಕ್ಷಣ, ಧಾರ್ಮಿಕ ಹಾಗೂ ಸಮಾಜಮುಖಿ ಕೊಡುಗೆಗಳು ಮಾತ್ರ ಈ ಗ್ರಾಮದೊಂದಿಗೆ ಅವರ ಸಂಬಂಧವನ್ನು ಸದಾ ಜೀವಂತವಾಗಿರಿಸಲಿವೆ.

