ಉಡುಪಿ: ಮುದರಂಗಡಿಯಲ್ಲಿ ನಡೆದಿದ್ದ ಉದ್ಯಮಿ ಡೇವಿಡ್ ಡಿಸೋಜಾ (David Dsouza) ಹತ್ಯೆ ಕೇಸ್‌ನ ಮತ್ತೊಬ್ಬ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.
ಆರೋಪಿ ಅನೋಜ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಆತನ ಕಾಲಿಗೆ ಗುಂಡೇಟು ನೀಡಲಾಗಿದೆ. ಇಂದು (ಆ.24) ಮುಂಜಾನೆ ಹೆಬ್ರಿ ಬಳಿ ಆರೋಪಿಯನ್ನು ಕರೆದೊಯ್ಯುವಾಗ ಮೂತ್ರ ವಿಸರ್ಜನೆಗೆ ವಾಹನ ನಿಲ್ಲಿಸುವಂತೆ ಹೇಳಿದ್ದ. ವಾಹನ ನಿಲ್ಲಿಸಿ ಕೆಳಗಿಳಿಸಿದಾಗ ಕಾನ್ಸ್‌ಟೇಬಲ್‌ಗಳ ಮೇಲೆ ಹಲ್ಲೆ ಮಾಡಿ ಆತ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ, ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಕೇಸ್; ಆರೋಪಿ ಕಾಲಿಗೆ ಗುಂಡೇಟು
ಗಾಯಗೊಂಡಿದ್ದ ಆರೋಪಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಮೋಹನ್, ಕಾನ್ಸ್‌ಟೇಬಲ್ ಶ್ಯಾಮ್ ಗಾಯಗೊಂಡಿದ್ದಾರೆ.
ಆರೋಪಿ ಅನೋಜ್ 4 ರಾಜ್ಯಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದಾನೆ. ಈತನ ವಿರುದ್ಧ ಕೊಲೆ ಮಾಡಲು ಸುಪಾರಿ, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದೆ. ಡೇವಿಡ್ ಹತ್ಯೆ ಪ್ರಕರಣದಲ್ಲಿ ಅನೋಜ್ ಶೂಟರ್‌ಗಳನ್ನ ಒದಗಿಸಿರುವ ಮಾಹಿತಿ ತನಿಖೆಯಿಂದ ಬಯಲಾಗಿತ್ತು.
ಆ.8 ರಂದು ಯುಪಿ ಮೂಲದ ಶೂಟರ್ ರಾಜು ಬಲಗಾಲಿಗೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡೇಟು ನೀಡಿದ್ದರು.
ಏನಿದು ಘಟನೆ?
ಅಗಸ್ಟ್ 7 ರಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಸಮೀಪದ ಮುದರಂಗಡಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ (Congress Leader) ಡೇವಿಡ್ ಡಿಸೋಜಾ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು.
ಯುಪಿಸಿಎಲ್ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದ ಆರ್ಥಿಕ ವೈಮನಸ್ಸೇ ಉಡುಪಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜ ಹತ್ಯೆಗೆ ಪ್ರಮುಖ ಕಾರಣವಾಗಿರಬಹುದೇ ಎಂಬ ಅನುಮಾನ ಇದೀಗ ತನಿಖೆಯಲ್ಲಿ ವ್ಯಕ್ತವಾಗಿದೆ.
ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಉತ್ತರ ಭಾರತದ ವ್ಯಕ್ತಿಯೊಬ್ಬ ಡೇವಿಡ್ ಹತ್ಯೆಗೆ ಸುಪಾರಿ ನೀಡಿರುವುದನ್ನ ಪತ್ತೆಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಹತ್ಯೆಗೆ ಉತ್ತರ ಭಾರತದ ವ್ಯಕ್ತಿಯಿಂದ ಸುಪಾರಿ; ಹಂತಕನ ಖಾತೆಗೆ 2 ಲಕ್ಷಕ್ಕೂ ಅಧಿಕ ಹಣ ವರ್ಗ
