ಮುಂಬೈ: ಮಹಾರಾಷ್ಟ್ರದ (Maharashtra) ಘಾಟ್‌ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ರಾಜ್ಯದ ಅತ್ಯಂತ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ ಪರಾಗ್ ಶಾ (Parag Shah) ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ಪರಾಗ್ ಶಾ ಅವರು ಭಿಕ್ಷುಕನ (Begger) ವೇಷ ಧರಿಸಿ ಘಾಟ್‌ಕೋಪರ್‌ನ ರಸ್ತೆಗಳಲ್ಲಿ ಕೆಲ ಗಂಟೆಗಳ ಕಾಲ ಓಡಾಡಿದ್ದಾರೆ. ಆರಂಭದಲ್ಲಿ ವೀಡಿಯೋ ನೋಡಿದವರಿಗೆ ಅಚ್ಚರಿಯಾಗಿದ್ದರೂ, ಬಳಿಕ ಇದರ ಹಿಂದಿನ ಕಾರಣ ಬಹಿರಂಗವಾಗಿದೆ.
ಜೈನ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಪರಾಗ್ ಶಾ ಒಂದು ದಿನ ಭಿಕ್ಷುಕನ ಜೀವನವನ್ನು ಅನುಭವಿಸಲು ಮುಂದಾಗಿದ್ದರು. ಪ್ರಸ್ತುತ ಜೈನ ಸಮುದಾಯದ ಚಾತುರ್ಮಾಸ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಗುರುಗಳು ಅವರಿಗೆ ಭಿಕ್ಷುಕನಾಗಿ ಒಂದು ದಿನ ಕಳೆಯುವ ಅನುಭವ ಪಡೆಯುವಂತೆ ಸೂಚಿಸಿದ್ದರು. ಗುರುಗಳ ಸಲಹೆಯನ್ನು ಪಾಲಿಸಿದ ಪರಾಗ್ ಶಾ ತಮ್ಮ ಭದ್ರತಾ ಸಿಬ್ಬಂದಿ, ಕಾರುಗಳು ಹಾಗೂ ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ಧರಿಸಿದ್ದರು. ಬಳಿಕ ಘಾಟ್‌ಕೋಪರ್‌ನ ವಿವಿಧ ರಸ್ತೆಗಳಲ್ಲಿ ಸಾಮಾನ್ಯ ಭಿಕ್ಷುಕನಂತೆ ಓಡಾಡಿದ್ದರು. ಇದನ್ನೂ ಓದಿ: ಬಿಜೆಪಿ ಹೇಳಿದಂತೆ ಕೇಳಲು ಆಗುತ್ತಾ? ಶಿಸ್ತುಕ್ರಮದ ತೀರ್ಮಾನ ಮಾಡೋದು ಎಸ್‌ಪಿ ಅಲ್ಲ, ನಾನು: ಪ್ರಿಯಾಂಕ್ ಖರ್ಗೆ
ಈ ವೇಳೆ ಅವರು ಜನರ ಬಳಿ ಭಿಕ್ಷೆ ಬೇಡಿದ್ದಾರೆ. ರಸ್ತೆ ಬದಿಯಲ್ಲಿ ಭಿಕ್ಷುಕರಂತೆ ಕುಳಿತುಕೊಂಡು, ಭಿಕ್ಷೆಯಾಗಿ ದೊರೆತ ಆಹಾರವನ್ನೇ ಸೇವಿಸಿದ್ದಾರೆ. ವಿಶೇಷವೆಂದರೆ, ಈ ವೇಳೆ ಅವರೊಂದಿಗೆ ಇದ್ದ ಬಹುತೇಕ ಜನರಿಗೆ ಅವರು ಪರಾಗ್ ಶಾ ಎಂಬುದು ತಿಳಿದಿರಲಿಲ್ಲ. ತಮ್ಮ ಗುರುಗಳ ಸಲಹೆಯಂತೆ ಭಿಕ್ಷುಕನ ಜೀವನವನ್ನು ಅನುಭವಿಸಿದ ಬಳಿಕ ಪರಾಗ್ ಶಾ ಈ ಅನುಭವವನ್ನು ಗುರುಗಳು ಹಾಗೂ ಇತರರೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 70 ಕೋಟಿಗೂ ಅಧಿಕ ಮೌಲ್ಯದ ನಕಲಿ ನಾಣ್ಯ ಜಾಲ ಪತ್ತೆ; ಸಹರನ್‌ಪುರದಲ್ಲಿ ಐವರ ಗ್ಯಾಂಗ್ ಬಂಧನ
ಇದರ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಪರಾಗ್ ಶಾ ಭಿಕ್ಷುಕನ ವೇಷದಲ್ಲಿದ್ದಾಗ ಭೇಟಿ ನೀಡಿದ ಕೆಲವು ಸ್ಥಳಗಳಿಗೆ ನಂತರ ತಮ್ಮ ನೈಜ ರೂಪದಲ್ಲಿ ಮತ್ತೆ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ತಾವು ಭಿಕ್ಷುಕನ ವೇಷದಲ್ಲಿ ಬಂದಿದ್ದಾಗ ಜನರೊಂದಿಗೆ ನಡೆದ ಸಂಭಾಷಣೆ ಹಾಗೂ ಅನುಭವದ ಕುರಿತು ಮತ್ತೆ ಚರ್ಚಿಸಿದ್ದಾರೆ. ಸಿನಿಮಾದ ದೃಶ್ಯವೊಂದನ್ನು ನೆನಪಿಸುವಂತಿರುವ ಈ ಸಂಪೂರ್ಣ ಪ್ರಸಂಗದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪರಾಗ್ ಶಾ ಅವರ ಈ ವಿಭಿನ್ನ ಪ್ರಯತ್ನದ ಬಗ್ಗೆ ರಾಜಕೀಯ ವಲಯದಲ್ಲೂ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ರುಂಡ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಸಾವು
3,383 ಕೋಟಿಗೂ ಅಧಿಕ ಆಸ್ತಿ:
ಪರಾಗ್ ಶಾ ಅವರ ಆಸ್ತಿಯ ಪ್ರಮಾಣವೂ ಈ ವೀಡಿಯೋ ವೈರಲ್ ಆಗಲು ಪ್ರಮುಖ ಕಾರಣವಾಗಿದೆ. 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ್ದ ಚುನಾವಣಾ ಅಫಿಡವಿಟ್‌ನಲ್ಲಿ ಅವರು 3,383 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಇದರೊಂದಿಗೆ ಅವರು ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಚುನಾವಣಾ ಅಭ್ಯರ್ಥಿಗಳಲ್ಲಿ ಪ್ರಮುಖರಾಗಿದ್ದರು. ಐದು ವರ್ಷಗಳ ಹಿಂದೆ ಅವರ ಘೋಷಿತ ಆಸ್ತಿ ಸುಮಾರು 500 ಕೋಟಿಯಷ್ಟಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ಜಾರಕಿಹೊಳಿ ಬಣಕ್ಕೆ ಶಾಕ್ ನೀಡಿ ಆಪ್ತನಿಗೆ ನಿರ್ದೇಶಕ ಪಟ್ಟ ಕೊಡಿಸಿದ ಸಚಿವ ಲಕ್ಷ್ಮಣ ಸವದಿ
ಕೇವಲ ಐದು ವರ್ಷಗಳ ಅವಧಿಯಲ್ಲಿ ಅವರ ಆಸ್ತಿ ಹಲವು ಪಟ್ಟು ಹೆಚ್ಚಾಗಿದೆ. ಪರಾಗ್ ಶಾ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ರಾಜಕೀಯ ಪ್ರವೇಶಕ್ಕೂ ಮುನ್ನ ಹಾಗೂ ನಂತರವೂ ಈ ಕ್ಷೇತ್ರದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಪರಾಗ್ ಶಾ ಈ ಹಿಂದೆ ಮುಂಬೈ ಮಹಾನಗರ ಪಾಲಿಕೆಯ ನಗರಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ಘಾಟ್‌ಕೋಪರ್ ಪೂರ್ವ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಇನ್‌ಸ್ಪೆಕ್ಟರ್ ಧನಂಜಯ್ ದರ್ಪದ ಹಳೆಯ ಕರಾಳ ಮುಖಗಳು ಮತ್ತೆ ವೈರಲ್: ವಿಚಾರಣೆ ನೆಪದಲ್ಲಿ ಬ್ಯಾಟ್‌ನಿಂದ ಹಲ್ಲೆ

