ಮೈಸೂರು: ಗಣೇಶೋತ್ಸವ(Ganesh Chaturthi) ಸಮಿತಿಯ ಯುವಕರಿಗೆ ಧಮ್ಕಿ ಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಟಿ ನರಸೀಪುರ(T. Narasipura) ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್(Dhananjay) ಅವರ ಹಳೆಯ ದರ್ಪದ ಘಟನೆಗಳು ಮತ್ತು ಕ್ರೌರ್ಯದ ನಡವಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಭಾರೀ ಸದ್ದು ಮಾಡುತ್ತಿದೆ
ವಿಚಾರಣೆಯ ನೆಪದಲ್ಲಿ ಠಾಣೆಗೆ ಕರೆಸಿ ನಾಗರಿಕರ ಮೇಲೆ ಮೃಗೀಯವಾಗಿ ಹಲ್ಲೆ ನಡೆಸುತ್ತಿದ್ದ ಅವರ ಇತಿಹಾಸ ಈಗ ಒಂದೊಂದಾಗಿ ಹೊರಬರುತ್ತಿದ್ದು, ಸ್ಥಳೀಯರಲ್ಲಿ ಆಕ್ರೋಶದ ಕಟ್ಟೆಯೊಡೆದಿದೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಕೌಟುಂಬಿಕ ಕಲಹದ ವಿಚಾರವಾಗಿ ನಾಲ್ವರು ದಲಿತ ಯುವಕರನ್ನು ಠಾಣೆಗೆ ಕರೆಸಿದ್ದ ಧನಂಜಯ್ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು ಎಂಬ ಆರೋಪವಿದೆ. ವಿಚಾರಣೆಗೆ ಬಂದವರನ್ನು ಥಳಿಸಲೆಂದೇ ಠಾಣೆಯಲ್ಲಿ ಕ್ರಿಕೆಟ್ ಬ್ಯಾಟ್, ವಿಕೆಟ್‌ಗಳು ಹಾಗೂ ಮರದ ತುಂಡುಗಳನ್ನು ಇಟ್ಟುಕೊಂಡಿದ್ದಾರೆ.
ಹಲ್ಲೆ ನಡೆಸಲು ಅಗಲವಾದ ಬೆಲ್ಟ್ ರೂಪದ ವಿಶೇಷ ಬ್ಯಾಟ್ ಅನ್ನು ಪ್ರತ್ಯೇಕವಾಗಿ ತಯಾರಿಸಿಟ್ಟುಕೊಂಡಿದ್ದಾರೆ. ಅಂದು ಧನಂಜಯ್ ನಡೆಸಿದ ಭೀಕರ ಹಲ್ಲೆಯಿಂದ ಗಾಯಗೊಂಡಿದ್ದ ಯುವಕರ ಫೋಟೋಗಳು ಮತ್ತು ಹಲ್ಲೆಗೆ ಬಳಸಲಾದ ಮರದ ಬ್ಯಾಟ್‌ಗಳ ಚಿತ್ರಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಇದನ್ನೂ ಓದಿ: ಗಣೇಶೋತ್ಸವದ ಯುವಕರಿಗೆ ಧಮ್ಕಿ ಹಾಕಿದ ಇನ್‌ಸ್ಪೆಕ್ಟರ್ ಸಸ್ಪೆಂಡ್ ಆಗ್ತಾರಾ?

ಸಿಎಂಗೆ ದೂರು
ಅಂದು ಇನ್‌ಸ್ಪೆಕ್ಟರ್ ಧನಂಜಯ್ ಅವರ ದೌರ್ಜನ್ಯದ ವಿರುದ್ಧ ನೊಂದ ಯುವಕರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದ್ದರು. ಅಲ್ಲದೆ ದಲಿತ ಸಂಘರ್ಷ ಸಮಿತಿ (ದಸಂಸ) ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಇನ್‌ಸ್ಪೆಕ್ಟರ್ ವಿರುದ್ಧ ಬೀದಿಗಿಳಿದು ತೀವ್ರ ಹೋರಾಟ ನಡೆಸಿದ್ದವು. ಆದರೂ ತಮ್ಮ ದರ್ಪ ಮತ್ತು ದಿಮಾಕಿನ ವರ್ತನೆಯನ್ನು ಮುಂದುವರಿಸಿದ್ದ ಧನಂಜಯ್ ವಿರುದ್ಧ ಇಲಾಖಾ ಮಟ್ಟದಲ್ಲಿ ಸೂಕ್ತ ಕಠಿಣ ಕ್ರಮವಾಗಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇನ್‌ಸ್ಪೆಕ್ಟರ್ ಧನಂಜಯ್ ಅವರ ಈ ರೀತಿಯ ದರ್ಪದ ನಡವಳಿಕೆ ಹೊಸದೇನಲ್ಲ. ತಮ್ಮ ಸೇವಾ ಅವಧಿಯುದ್ದಕ್ಕೂ ಪ್ರತಿ ಪ್ರಕರಣದಲ್ಲೂ ವಿಚಾರಣೆಯ ನೆಪದಲ್ಲಿ ಜನರನ್ನು ಠಾಣೆಗೆ ಕರೆಸಿ ಮನಬಂದಂತೆ ಥಳಿಸುವುದು, ಬೆದರಿಕೆ ಹಾಕುವುದು ಹಾಗೂ ಸ್ಥಳೀಯರೊಂದಿಗೆ ಸಂಘರ್ಷಕ್ಕಿಳಿಯುವುದನ್ನೇ ರೂಢಿಸಿಕೊಂಡಿದ್ದಾರೆ. ಸುಮಾರು ಒಂದು ವರ್ಷದ ಹಿಂದೆಯೂ ಐದಾರು ಯುವಕರ ಮೇಲೆ ಇದೇ ರೀತಿಯ ಅಮಾನವೀಯ ಹಲ್ಲೆ ನಡೆಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು.

