– ಮೈಸೂರಿನ ನಿರುದ್ಯೋಗಿ ರಾಜಕಾರಣಿಗೆ ಕೆಲಸವಿಲ್ಲ
– ಗಣೇಶೋತ್ಸವದಲ್ಲಿ ವಿಪಕ್ಷಗಳು ಹುಳಿ ಹಿಂಡುವುದು ಬೇಡ
– ಇನ್ಸ್‌ಪೆಕ್ಟರ್ ಧನಂಜಯ್ ಅಮಾನತಿಗೆ ಬಿಜೆಪಿ ಆಗ್ರಹ
ಬೆಂಗಳೂರು: ಮೈಸೂರು ಜಿಲ್ಲೆಯ ಟಿ. ನರಸೀಪುರ(T Narasipura) ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರ ಧಮ್ಕಿ ವಿವಾದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷ ಬಿಜೆಪಿ ಹೂಡಿರುವ ‘ಅಮಾನತು’ ಅಸ್ತ್ರಕ್ಕೆ ರಾಜ್ಯ ಸರ್ಕಾರ ಯಾವುದೇ ಕ್ಯಾರೆ ಎಂದಿಲ್ಲ. ಬಿಜೆಪಿಯವರು ಹೇಳಿದ ತಕ್ಷಣ ಅಧಿಕಾರಿಯನ್ನು ಅಮಾನತು ಮಾಡಲು ಸಾಧ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಗಣೇಶ ಮೆರವಣಿಗೆ ಭದ್ರತೆ ಹಾಗೂ ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್(Inspector Dhananjay) ಅವರ ಹೇಳಿಕೆ ವಿವಾದದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳ ರಾಜಕೀಯ ಆರೋಪಗಳಿಗೆ ತೀಕ್ಷ್ಣ ತಿರುಗೇಟು ನೀಡಿದರು.
ಬಿಜೆಪಿಯವರು ಹೇಳಿದಂತೆ ನಾವು ಕೇಳಲು ಅಥವಾ ಆಡಳಿತ ನಡೆಸಲು ಸಾಧ್ಯವಿಲ್ಲ. ಅವರ ಮಾತಿಗೆ ಮಣಿದು ಅಧಿಕಾರಿಯನ್ನು ಸಸ್ಪೆಂಡ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇನ್ಸ್ಪೆಕ್ಟರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ಎಸ್‌ಪಿಯವರಿಗೆ ಮಾತ್ರ ಸೀಮಿತವಲ್ಲ, ಅಂತಿಮ ತೀರ್ಮಾನವನ್ನು ಸರ್ಕಾರ ಕೈಗೊಳ್ಳುತ್ತದೆ. ಎಸ್‌ಪಿ ವರದಿ ನೀಡಿದ ಬಳಿಕ ಅದನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ನಾನು ತೀರ್ಮಾನಿಸುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಗಣೇಶೋತ್ಸವ ಮತ್ತು ಈದ್ ಸೇರಿದಂತೆ ಎಲ್ಲ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸರ್ವ ರೀತಿಯ ಮುನ್ನೆಚ್ಚರಿಕೆ ಕೈಗೊಂಡಿದೆ. ಹಬ್ಬಗಳ ವಿಚಾರದಲ್ಲಿ ವಿರೋಧ ಪಕ್ಷಗಳು ಅನಗತ್ಯವಾಗಿ ಹುಳಿ ಹಿಂಡುವ ಕೆಲಸ ಬಿಟ್ಟು, ಜನರು ಶಾಂತಿಯಿಂದ ಹಬ್ಬ ಆಚರಿಸಲು ಬಿಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಇನ್‌ಸ್ಪೆಕ್ಟರ್ ಧನಂಜಯ್ ದರ್ಪದ ಹಳೆಯ ಕರಾಳ ಮುಖಗಳು ಮತ್ತೆ ವೈರಲ್: ವಿಚಾರಣೆ ನೆಪದಲ್ಲಿ ಬ್ಯಾಟ್‌ನಿಂದ ಹಲ್ಲೆ
ಆರ್. ಅಶೋಕ್ ಗೃಹ ಸಚಿವರಾಗಿದ್ದಾಗ ಇಂತಹ ಶಾಂತಿ ಸಭೆಗಳನ್ನು ಮಾಡಿ ನಿಯಮಾವಳಿಗಳನ್ನು ವಿಧಿಸಿರಲಿಲ್ಲವೇ? ಅಂದು ಇದ್ದ ನಿಯಮಗಳೇ ಇಂದೂ ಇವೆ. ಮೈಸೂರಿನ ನಿರುದ್ಯೋಗಿ ರಾಜಕಾರಣಿಗಳಿಗೆ ಬೇರೆ ಕೆಲಸವಿಲ್ಲದೆ ಠಾಣೆಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಅವರದೇ ಸರ್ಕಾರ ಇದ್ದಾಗ ಯಾರಾದರೂ ಠಾಣೆಗೆ ನುಗ್ಗುತ್ತೇವೆ ಎಂದಿದ್ದರೆ ಸುಮ್ಮನಿರುತ್ತಿದ್ದರಾ ಎಂದು ಪ್ರಶ್ನಿಸಿದರು.
ಹಬ್ಬದ ದಿನಗಳಲ್ಲಿ ಪೊಲೀಸರು ತಮ್ಮ ಕುಟುಂಬ, ಹಬ್ಬ-ಹರಿದಿನಗಳನ್ನು ತ್ಯಾಗ ಮಾಡಿ ಜನರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಸಾರ್ವಜನಿಕರು ಮತ್ತು ಸಂಘಟಕರು ಪೊಲೀಸರಿಗೆ ಗೌರವ ನೀಡಿ, ಅವರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವ ಆಚರಣೆಯಿಂದಲೂ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಬಾರದು ಎಂದು ಹೇಳಿದರು.
ಟಿ. ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ್ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಇನ್‌ಸ್ಪೆಕ್ಟರ್ ಸ್ವಲ್ಪ ಖಾರವಾಗಿ ಮಾತನಾಡಿರಬಹುದು. ಆದರೆ ಮೆರವಣಿಗೆಗೆ ಹಲವು ಮಾರ್ಗಗಳಿರುತ್ತವೆ, ನಿಯಮ ಪಾಲಿಸುವುದು ಮುಖ್ಯ. ನಿರ್ದಿಷ್ಟ ಸೂಕ್ಷ್ಮ ಸ್ಥಳದಲ್ಲೇ ಪಟಾಕಿ ಹಚ್ಚುವುದು ಏಕೆ ಎಂಬ ಪ್ರಶ್ನೆ ಬರುತ್ತದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರಿಗೆ ಸ್ಥಳೀಯ ಸೂಕ್ಷ್ಮತೆ ಮತ್ತು ಹೋದ ವರ್ಷ ಉಂಟಾಗಿದ್ದ ಗೊಂದಲಗಳ ಬಗ್ಗೆ ಸ್ಪಷ್ಟ ಅರಿವಿರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ನೀಡಿದ ಸೂಚನೆಯನ್ನೇ ತಪ್ಪಾಗಿ ಬಿಂಬಿಸಲಾಗುತ್ತಿದೆ.ಶಾಂತಿ ಕದಡಲು ಯತ್ನಿಸುತ್ತಿರುವವರು ಯಾರು ಎಂಬುದನ್ನು ತಿಳಿಯಲು ಬಿಜೆಪಿಯವರು ಮೊದಲು ಮೋಹನ್ ಭಾಗವತ್ ಅವರ ಮಾತುಗಳನ್ನು ಕೇಳಲಿ ಎಂದು ಲೇವಡಿ ಮಾಡಿದರು.

