Connect with us

Latest

ಪ್ರಜ್ಞಾಸಿಂಗ್ ವಿರುದ್ಧ 12 ವರ್ಷದ ಹಿಂದಿನ ಕೇಸ್ ತೆರೆಯಲು ಮುಂದಾದ ಮಧ್ಯಪ್ರದೇಶ ಸರ್ಕಾರ

Published

on

ಭೋಪಾಲ್: ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಭೋಪಾಲ್ ಕ್ಷೇತ್ರದಿಂದ ಗೆಲ್ಲಲ್ಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರವು ಪ್ರಜ್ಞಾಸಿಂಗ್ ವಿರುದ್ಧ ದಾಖಲಾಗಿರುವ 12 ವರ್ಷದ ಹಿಂದಿನ ಪ್ರಕರಣ ತೆರೆಯಲು ಮುಂದಾಗಿದೆ.

ಆರ್‌ಎಸ್‌ಎಸ್‌ನ ಮಾಜಿ ಪ್ರಚಾರಕ ಸುನಿಲ್ ಜೋಶಿ ಕೊಲೆ ಪ್ರಕರಣವನ್ನು ಪುನಃ ತೆರೆದು, ತನಿಖೆ ನಡೆಸಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಕಾನೂನು ಸಚಿವ ಪಿ.ಸಿ.ಶರ್ಮಾ ತಿಳಿಸಿದ್ದಾರೆ.

ಸುನಿಲ್ ಜೋಶಿ ಅವರ ಕೊಲೆಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆ ದೇವಾಸ್ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಕಾನೂನು ಅಭಿಪ್ರಾಯ ಪಡೆದು ಹೈಕೋರ್ಟ್ ಮೆಟ್ಟಿಲು ಏರಲಾಗುತ್ತದೆ ಎಂದು ಪಿ.ಸಿ.ಶರ್ಮಾ ಹೇಳಿದ್ದಾರೆ.

ಏನಿದು ಪ್ರಕರಣ?:
ಆರ್‍ಎಸ್‍ಎಸ್‍ನ ಮಾಜಿ ಪ್ರಚಾರಕ ಸುನಿಲ್ ಜೋಶಿ ಅವರು 2007ರ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣದ ಆರೋಪಿಯಾಗಿದ್ದರು. ಆದರೆ ಅವರನ್ನು 2007 ಡಿಸೆಂಬರ್ 29ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಸಾಧ್ವಿ ಪ್ರಜ್ಞಾಸಿಂಗ್ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣ ಕೋರ್ಟ್ ಸ್ವಾಧ್ವಿ ಅವರನ್ನು 2017ರಲ್ಲಿ ಖುಲಾಸೆಗೊಳಿಸಿತ್ತು.

ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಗೆಲುವು ಸಾಧಿಸುತ್ತಾರೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ತಿಳಿವೆ. ಹೀಗಾಗಿ ಅವರ ವಿರುದ್ಧ ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.