ಕಾರವಾರ: ಬೇರೆ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 9 ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರದಿಂದ ಪಡಿತರ ಅಕ್ಕಿಯನ್ನು (Ration) ಅಕ್ರಮವಾಗಿ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸಾಗಿಸುತ್ತಿದ್ದ ವೇಳೆ ಶಿರಸಿಯಲ್ಲಿ ತಹಸಿಲ್ದಾರ್, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಹತ್ತು ವ್ಹೀಲ್ ಲಾರಿಯಲ್ಲಿ ಇದ್ದ 476 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಸರಣಿ ಕಳ್ಳತನ ಮಾಡ್ತಿದ್ದ ಮೂವರು ಖದೀಮರ ಬಂಧನ – 20 ಲಕ್ಷ ಮೌಲ್ಯದ ಚಿನ್ನಾಭರಣಗಳು ವಶಕ್ಕೆ
ಶಿರಸಿ ತಹಸಿಲ್ದಾರ್ ಪಟ್ಟರಾಜ ಗೌಡ, ನಗರ ಠಾಣೆ ಪಿಎಸ್ಐ ನರಸಿಂಹಲು ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸಿದ್ದಾಪುರದಿಂದ ಕೊಲ್ಲಾಪುರ ಕಡೆಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದು ದಿಢೀರ್ ದಾಳಿ ನಡೆಸಿ ನೀಲೇಕಣಿ ಭೀಮನಗುಡ್ಡ ಕ್ರಾಸ್ ಬಳಿ ಲಾರಿ ಅಡ್ಡಗಟ್ಟಿದ ಅಧಿಕಾರಿಗಳು ಲಾರಿ ಚಾಲಕನ ಸಮೇತ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಒಂಬತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಎಂದು ಹೇಳಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಘಟನೆ ಸಂಬಂಧ ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ – ಅನಾಥವಾದ ಕಂದಮ್ಮ
