ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಡಾಡಿ ಗೋವುಗಳ ಕಾಟ ಮಿತಿಮೀರಿದ್ದು, ಇವುಗಳಿಂದಾಗಿ ರಸ್ತೆಗಳಲ್ಲಿ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡಾಡಿ ದನಗಳ ಕಾಟದಿಂದ ಅಪಘಾತ ಹೆಚ್ಚಾಗುತಿದ್ದು, ಸಾವಿನ ಸಂಖ್ಯೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಒಟ್ಟು 4,10,305 ಗೋವುಗಳಿವೆ. ಇವುಗಳಲ್ಲಿ ಕಾರವಾರ, ಯಲ್ಲಾಪುರ, ಶಿರಸಿ, ಅಂಕೋಲ ಭಾಗದ ಬಿಡಾಡಿ ದನಗಳೇ 5,244 ಇವೆ. ಇವುಗಳನ್ನ ಹಿಡಿದು ಗೋಶಾಲೆಗೆ ಕಳುಹಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕೆಲವರು ಗೋವುಗಳನ್ನ ಸಾಕಲಾಗದೇ ಬೀದಿಗೆ ಬಿಡುತ್ತಿದ್ದು, ಇವುಗಳಿಂದ ಬಿಡಾಡಿ ದನಗಳ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಜಿಲ್ಲೆಯಲ್ಲಿ ಹಳಿಯಾಳ, ಕಾರವಾರದ ಕಣಸಗೇರಿ, ಶಿರಸೊಯ ಅಜ್ಜಿಬಾಳದಲ್ಲಿ ಗೋಶಾಲೆಗಳಿವೆ. ಆದರೆ, ಹಳಿಯಾಳದಲ್ಲಿ ಮಾತ್ರ ಗೋಶಾಲೆ ನಿರ್ವಹಣೆಯಾಗುತ್ತಿದ್ದು, ಇಲ್ಲಿ 208 ಬಿಡಾಡಿ ಗೋವುಗಳು ಮಾತ್ರ ಇವೆ. ಉಳಿದ ಎರಡು ಗೋಶಾಲೆಯಲ್ಲಿ 50 ರಿಂದ 100 ಹಸುಗಳನ್ನ ಮಾತ್ರ ಇಡಲು ಅವಕಾಶವಿದೆ. ಆದರೆ, ಕಾರವಾರ ಹಾಗೂ ಶಿರಸಿಯ ಎರಡು ಸರ್ಕಾರಿ ಗೋಶಾಲೆಗಳು ಅನುದಾನದ ಕೊರತೆ ಹಾಗೂ ಸಿಬ್ಬಂದಿ ಇಲ್ಲದೇ ಈವರೆಗೂ ಪ್ರಾರಂಭವಾಗದೆ ಹಾಗಿಯೇ ಪಾಳು ಬಿದ್ದಿವೆ.
ರಸ್ತೆ ಸೇರಿದಂತೆ ಇತರೆ ಅಪಘಾತದಲ್ಲಿ ತೊಂದರೆಗೊಳಗಾದ ಗೋವುಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ. ಹೀಗಾಗಿ, ಹಸುಗಳು ಅಪಘಾತವಾಗಿ ಸೂಕ್ತ ಚಿಕಿತ್ಸೆ ಸಿಗದೇ ರಸ್ತೆಯಲ್ಲೇ ಅಸುನೀಗುವಂತಾಗಿದೆ. ಸ್ಥಳೀಯ ಆಡಳಿತ ಸಹ ಮುತುವರ್ಜಿ ವಹಿಸದ ಕಾರಣ ಗೋವುಗಳ ಜೊತೆ ಮನುಷ್ಯನೂ ಪ್ರಾಣ ಕಳೆದುಕೊಳ್ಳುವಂತಾಗಿದ್ದು, ಜಿಲ್ಲಾಡಳಿತ ಅನುದಾನದ ಕೊರತೆಯಿಂದ ಸೂಕ್ತ ವ್ಯವಸ್ಥೆ ಮಾಡಲಾಗದೇ ಕೈಚಲ್ಲಿ ಕುಳಿತಿದೆ ಎಂಬುದು ಸ್ಥಳೀಯರ ಆರೋಪ.
ಖಸಾಯಿಕಾನೆಗೆ ಹೋಗುವ ಗೋವುಗಳನ್ನ ಗೋರಕ್ಷಕರು ಹಾಗೂ ಪೊಲೀಸರು ರಕ್ಷಿಸಿ ಗೋಶಾಲೆಗೆ ಬಿಡುತ್ತಿದ್ದಾರೆ. ಆದರೆ, ಈ ಹಸುಗಳನ್ನ ನೋಡಿಕೊಳ್ಳಲು ಆಡಳಿತದ ಬಳಿ ಹಣವಿಲ್ಲದ ಕಾರಣ ಹಾಗೂ ಸರ್ಕಾರದ ಅನುದಾನದ ಕೊರತೆಯಿಂದ ಬೀದಿಗೆ ಬಿಡುವಂತೆ ಆಗಿದೆ. ಹೀಗೆ ಬೀದಿಗೆ ಬರುವ ಹಸುಗಳು ನಗರ ಹಾಗೂ ಹೆದ್ದಾರಿ ಭಾಗದಲ್ಲೇ ಉಳಿಯುತ್ತಿದ್ದು, ರಾತ್ರಿ ವೇಳೆ ಸಂಚಾರ ಮಾಡುವವರ ನಿರ್ಲಕ್ಷ್ಯದಿಂದ ಅಪಘಾತವಾಗುತ್ತಿದೆ. ಕಾರವಾರದ ಮಲ್ಲಾಪುರದಲ್ಲಿ ಹಸುಗಳ ಕಾಳಗಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತರಾಗಿದ್ದರು. ಹೀಗಾಗಿ, ಆಡಳಿತ ಈ ಬಿಡಾಡಿ ದನಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬುದು ಗೋಪ್ರೇಮಿಗಳ ಆಗ್ರಹ.

