– ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ
ಉಡುಪಿ: ಒಂದು ತಿಂಗಳ ಕಾಲ ಮಳೆಯ ಕೊರತೆಯಿಂದ ಕಂಗೆಟ್ಟಿದ್ದ ಉಡುಪಿ (Udupi) ಜಿಲ್ಲೆಯಲ್ಲಿ ಈಗ ಮುಂಗಾರು ಮತ್ತೆ ಚುರುಕುಗೊಂಡಿದೆ. ಜಿಲ್ಲೆಗೆ ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ, ಸಾಧಾರಣ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯ ಪರಿಣಾಮ ಸ್ವರ್ಣ ಸೇರಿದಂತೆ ಜಿಲ್ಲೆಯ ಜೀವನದಿಗಳು, ಜಲಾಶಯಗಳು ತುಂಬಿ ಹರಿಯುತ್ತಿದ್ದು, ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ. ಆದರೆ ಗಾಳಿ ಮತ್ತು ಭಾರೀ ಮಳೆಯ ಎಚ್ಚರಿಕೆಯೂ ಇರುವುದರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.
ಉಡುಪಿ ಜಿಲ್ಲೆಯಲ್ಲಿ ಮುಂಗಾರು (Monsoon Rain) ಮತ್ತೆ ತನ್ನ ಅಬ್ಬರ ತೋರಲು ಆರಂಭಿಸಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಹಾಗೂ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ಮೀನುಗಾರರು ಹಾಗೂ ಪ್ರವಾಸಿಗರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಗೂ ಮುನ್ನವೇ ಇರಾನ್ ಮೇಲೆ ವಿನಾಶಕಾರಿ ದಾಳಿ – ಪರಿಸ್ಥಿತಿ ಇನ್ನೂ ಕೆಟ್ಟದ್ದಾಗಿರಲಿದೆ ಎಂದ ಟ್ರಂಪ್

ಸದ್ಯ ನಿರಂತರ ಧಾರಾಕಾರ ಮಳೆ ಸುರಿಯದ ಕಾರಣ ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆದರೆ ನದಿ ಪಾತ್ರದ ಪ್ರದೇಶಗಳು ಹಾಗೂ ಕಡಲ ತೀರದಲ್ಲಿ ವಾಸಿಸುವವರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಪಶ್ಚಿಮ ಘಟ್ಟದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನೂ ಓದಿ: ಲಾರಿ, ಕ್ರೂಸರ್ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ 6 ಮಂದಿ ದುರ್ಮರಣ
ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜೀವನಾಡಿಯಾದ ಸ್ವರ್ಣಾ ನದಿ ಇದೀಗ ಮೈದುಂಬಿ ಹರಿಯುತ್ತಿದೆ. ಹಿರಿಯಡ್ಕ (Hiriyadka) ಸಮೀಪದ ಬಜೆ ಡ್ಯಾಂ (Baje Dam) ಕೂಡ ಸಂಪೂರ್ಣ ಭರ್ತಿಯಾಗಿ ನೀರು ಹರಿಬಿಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ಮಳೆಯ ಕೊರತೆ ಕಂಡುಬಂದಿದ್ದರೂ, ಪಶ್ಚಿಮ ಘಟ್ಟದಲ್ಲಿ ಸುರಿದ ಉತ್ತಮ ಮಳೆಯ ಪರಿಣಾಮ ಜಲಾಶಯಗಳು ಮತ್ತು ನದಿಗಳು ತುಂಬಿ ಹರಿಯುತ್ತಿವೆ. ಇದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಭರವಸೆ ಮೂಡಿಸಿದೆ. ಇದನ್ನೂ ಓದಿ: ಕೇದಾರನಾಥದಿಂದ ವಯನಾಡಿನವರೆಗೆ – ದುರಂತಗಳ ಪಟ್ಟಿಗೆ ವರ್ಷಕ್ಕೊಂದು ಭೂಕುಸಿತ!
ಸ್ವರ್ಣಾ ಮಾತ್ರವಲ್ಲ, ಬ್ರಹ್ಮಾವರದ ಸೀತಾನದಿ, ಪಾಪನಾಶಿನಿ ಹಾಗೂ ಪಿನಾಕಿನಿ ನದಿಗಳಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಒಂದು ತಿಂಗಳು ತಡವಾಗಿ ಸುರಿದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಭತ್ತದ ನಾಟಿ ಸೇರಿದಂತೆ ಕೃಷಿ ಚಟುವಟಿಕೆಗಳು ಮತ್ತೆ ವೇಗ ಪಡೆದುಕೊಂಡಿವೆ. ಕಳೆದ ವರ್ಷ ಡಿಸೆಂಬರ್ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದ ಜಿಲ್ಲೆಯ ಜನರು, ಈ ಬಾರಿ ಜಲಾಶಯಗಳು ತುಂಬಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ತಡವಾಗಿಯಾದರೂ ಮುಂಗಾರು ಉಡುಪಿ ಜಿಲ್ಲೆಗೆ ಹೊಸ ಚೈತನ್ಯ ನೀಡಿದೆ. ಒಂದೆಡೆ ನದಿಗಳು ಮೈದುಂಬಿ ಹರಿಯುತ್ತಿದ್ದರೆ, ಮತ್ತೊಂದೆಡೆ ರೈತರಲ್ಲಿ ಉತ್ತಮ ಬೆಳೆಯ ನಿರೀಕ್ಷೆ ಹೆಚ್ಚಾಗಿದೆ. ಆದರೆ ಮುಂದಿನ ಎರಡು ದಿನಗಳ ಕಾಲ ರೆಡ್ ಅಲರ್ಟ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ನದಿ, ಹೊಳೆ, ತೋಡು ಹಾಗೂ ಕಡಲ ತೀರ ಪ್ರದೇಶಗಳಿಗೆ ತೆರಳದೆ ಸುರಕ್ಷತೆಗೆ ಆದ್ಯತೆ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಇದನ್ನೂ ಓದಿ: 7 ಜಿಲ್ಲೆಯ 10 ಅಧಿಕಾರಿಗಳಿಗೆ ಸೇರಿದ 54 ಕಡೆ ಲೋಕಾ ದಾಳಿ – ಭ್ರಷ್ಟರ ಬಣ್ಣ ಬಯಲು
