ತುಮಕೂರು: ಕೆಲ ದಿನಗಳ ಹಿಂದೆ ತೆರೆ ಕಂಡಿದ್ದ ಶಿವರಾಜ್ ಕುಮಾರ್ ನಟನೆಯ ʻಗೋಸ್ಟ್ʼ ಸಿನಿಮಾದಲ್ಲಿ (Cinema) ಇಲಿಯೊಂದಕ್ಕೆ ವಿಶೇಷ ಪಾತ್ರ ನೀಡಲಾಗಿತ್ತು. ಇಲಿಯನ್ನ ಈ ಸಿನಿಮಾದಲ್ಲಿ ಸೀಕ್ರೆಟ್ ಸಂದೇಶಗಳನ್ನ ರವಾನಿಸುವ ವಾಹಕವನ್ನಾಗಿ ಬಳಸಿಕೊಳ್ಳಲಾಗಿತ್ತು. ಇದೀಗ ಈ ಸಿನಿಮಾ ಕಥೆಯನ್ನೇ ಮೀರಿಸುವಂತಹ ಘಟನೆಯೊಂದು ತುಮಕೂರು ನಗರದಲ್ಲಿ ಬೆಳಕಿಗೆ ಬಂದಿದೆ.
ಪ್ರತಿಷ್ಠಿತ ಜ್ಯುವೆಲರಿ ಶಾಪ್‌ನಿಂದ (Jewellery Shop) ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳು ನಾಪತ್ತೆಯಾಗಿದ್ದರಿಂದ ಮಾಲೀಕ ಹಾಗೂ ಸಿಬ್ಬಂದಿ ಬೆಚ್ಚಿಬಿದ್ದಿದ್ದರು. ಆದರೆ ತನಿಖೆ ಮುಂದುವರಿದಂತೆ ಪ್ರಕರಣಕ್ಕೆ ಸಿಕ್ಕ ಟ್ವಿಸ್ಟ್ ಪೊಲೀಸರನ್ನೂ (Tumkur Police) ಅಚ್ಚರಿಗೊಳಿಸಿದೆ. ಇದನ್ನೂ ಓದಿ: 28 ಕೋಟಿ ನಗದು, 15 ಕೆಜಿ ಚಿನ್ನ – ನಿವೃತ್ತ ಬಸ್ ಡ್ರೈವರ್ ಮನೆಯಲ್ಲಿ ಭಾರೀ ಸಂಪತ್ತು ಕಂಡು ಬೆಚ್ಚಿದ ಪೊಲೀಸ್

ಹೌದು. ತುಮಕೂರು ನಗರದ ಕಾಲ್‌ಟೆಕ್ಸ್ ಸರ್ಕಲ್ ಸಮೀಪದ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ರಾತ್ರಿ ವೇಳೆ ಸುಮಾರು 50 ಗ್ರಾಂಗೂ ಅಧಿಕ ವಜ್ರ ಹಾಗೂ ಚಿನ್ನಾಭರಣಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದವು. ಬೆಳಗ್ಗೆ ಅಂಗಡಿ ತೆರೆದು ನೋಡಿದ ಸಿಬ್ಬಂದಿಗೆ ಅಚ್ಚರಿ ಕಾದಿತ್ತು. ಸರಗಳು, ಉಂಗುರಗಳು ಸೇರಿದಂತೆ ಹಲವು ಅಮೂಲ್ಯ ಆಭರಣಗಳು ಮಿಸ್ಸಿಂಗ್ ಆಗಿರೋದು ಗೊತ್ತಾಗಿ, ಆತಂಕ ಕಾಡಿತ್ತು.
ಆದ್ರೆ ಪ್ರಕರಣದಲ್ಲಿ ಇನ್ನಷ್ಟು ಟ್ವಿಸ್ಟ್ ಕೊಟ್ಟಿದ್ದು ಏನು ಅಂದ್ರೆ, ಅಂಗಡಿಯ ಶಟರ್ ಮುರಿದಿರಲಿಲ್ಲ, ಬಾಗಿಲು ಒಡೆದಿರಲಿಲ್ಲ, ಹೊರಗಿನಿಂದ ಯಾರೂ ಒಳನುಗ್ಗಿದ ಯಾವುದೇ ಗುರುತೂಗಳೂ ಇರಲಿಲ್ಲ. ಹೀಗಾಗಿ ಆಭರಣಗಳು ಹೇಗೆ ನಾಪತ್ತೆಯಾದವು ಎಂಬುದು ಮಾಲೀಕರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಇದನ್ನೂ ಓದಿ: ದೇಣಿಗೆ ಕೊರತೆಯಿಂದ ಅಯೋಧ್ಯೆಯಲ್ಲಿ ಭವ್ಯ ಮಸೀದಿ ನಿರ್ಮಾಣ ಯೋಜನೆ ಕೈಬಿಟ್ಟ ಟ್ರಸ್ಟ್

ಪೊಲೀಸರಿಗೆ ದೂರು ನೀಡುವ ಮುನ್ನ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ನಿಜವಾದ ‘ಕಳ್ಳ’ ಯಾರು ಎಂಬುದು ಗೊತ್ತಾಯ್ತು. ದೃಶ್ಯಗಳಲ್ಲಿ ಸಣ್ಣ ಇಲಿ ಒಂದು ಸದ್ದಿಲ್ಲದೇ ಅಂಗಡಿಯಲ್ಲಿ ಓಡಾಡಿ, ವಜ್ರಾಭರಣಗಳನ್ನ ಒಂದೊಂದಾಗಿ ಎಳೆದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿತ್ತು. ಸಿಸಿಟಿವಿ ಸುಳಿವಿನ ಆಧಾರದಲ್ಲಿ ಸಿಬ್ಬಂದಿ ಇಲಿಯ ಜಾಡು ಹಿಡಿದು ಅದರ ಬಿಲವನ್ನು ತೋಡಿದಾಗ ಅಚ್ಚರಿಯ ಸಂಗತಿ ಹೊರಬಿದ್ದಿತು. ಬಿಲದೊಳಗೆ ಸುಮಾರು 10 ಲಕ್ಷ ರೂ. ಮೌಲ್ಯದ ವಜ್ರಾಭರಣಗಳು ಸುರಕ್ಷಿತವಾಗಿ ಪತ್ತೆಯಾಗಿದ್ದವು.
ಬಿಲದಿಂದ ಬರೋಬ್ಬರಿ 10 ಉಂಗುರಗಳು ಮತ್ತು 3 ಸರಗಳು ಸೇರಿದಂತೆ ಹಲವು ಅಮೂಲ್ಯ ಆಭರಣಗಳು ವಶಕ್ಕೆ ಬಂದಿದ್ದು, ಕಳೆದುಹೋಗಿದ್ದ ಎಲ್ಲ ಆಭರಣಗಳು ಮರಳಿ ಸಿಕ್ಕ ಹಿನ್ನೆಲೆಯಲ್ಲಿ ಜ್ಯುವೆಲರಿ ಶಾಪ್ ಮಾಲೀಕ ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟರು.
