ಬೀದರ್: ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಧಾರಾಕಾರ ಮುಂಗಾರು ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತ ಎರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಭಾರೀ ಮಳೆಯಾದ(Heavy Rain) ವರದಿಯಾಗಿದೆ.
ಗುರುವಾರ ಮುಂಜಾನೆಯಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಬೀದರ್(Bidar) ನಗರ ಸೇರಿದಂತೆ ಜಿಲ್ಲೆಯಾದ್ಯಂತ ದಟ್ಟವಾದ ಮಂಜು ಮುಸುಕಿದ್ದು, ಗಡಿನಾಡು ‘ಮಂಜಿನ ನಗರಿ’ಯಂತೆ ಕಂಗೊಳಿಸುತ್ತಿದೆ. ಈ ಆಹ್ಲಾದಕರ ವಾತಾವರಣಕ್ಕೆ ಜಿಲ್ಲೆಯ ಜನತೆ ಸಖತ್ ಖುಷಿಯಾಗಿದ್ದಾರೆ. ಬೀದರ್, ಭಾಲ್ಕಿ, ಹುಮ್ನಾಬಾದ್, ಚಿಟಗುಪ್ಪ ಹಾಗೂ ಬಸವಕಲ್ಯಾಣ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಉತ್ತಮ ಮಳೆಯಾಗುತ್ತಿದೆ. ಇದನ್ನೂ ಓದಿ: ಕೊಡಗಿನಲ್ಲಿ ಗಾಳಿ ಮಳೆ ಆರ್ಭಟ ಜೋರು – ಹಾರಂಗಿ ಜಲಾಶಯದಿಂದ 5,365 ಕ್ಯೂಸೆಕ್ ನೀರು ಕಾವೇರಿ ನದಿಗೆ
ಕಳೆದ ಎರಡು ತಿಂಗಳಿನಿಂದ ಸೂಕ್ತ ಮುಂಗಾರು ಮಳೆಯಿಲ್ಲದೆ ಬಿತ್ತನೆ ಮಾಡಲು ಸಾಧ್ಯವಾಗದೆ ಕಾಯುತ್ತಿದ್ದ ಜಿಲ್ಲೆಯ ಅನ್ನದಾತರಿಗೆ ಈ ಮಳೆ ಹೊಸ ಭರವಸೆ ಮೂಡಿಸಿದೆ. ಒಣಗುತ್ತಿದ್ದ ಜಮೀನುಗಳಿಗೆ ಜೀವಕಳೆ ಬಂದಂತಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಇಂದು ಜಿಲ್ಲೆಯಾದ್ಯಂತ ಮತ್ತಷ್ಟು ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಬೀದರ್ ಜಿಲ್ಲೆಗೆ ಯೆಲ್ಲೋ ಅಲರ್ಟ್ (Yellow Alert) ಘೋಷಿಸಿದೆ. ಸಾರ್ವಜನಿಕರು ಹಾಗೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
