ಬೆಂಗಳೂರು: ಕರ್ನಾಟಕಕ್ಕೆ ಮುಂಗಾರು ಮಳೆ(Karnataka Monsoon Rain) ಅಧಿಕೃತವಾಗಿ ಪ್ರವೇಶ ಪಡೆದಿದ್ದು, ರಾಜ್ಯದಾದ್ಯಂತ ಭಾರಿ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಧಾರಾಕಾರ ಮಳೆಗೆ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಶಾಲೆಗಳು ಜಲಾವೃತಗೊಂಡಿವೆ. ಮಳೆಯಿಂದಾಗಿ ಹಲವೆಡೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ
ಬಳ್ಳಾರಿ
ನಗರದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳು ಹೈರಾಣಾಗಿದ್ದಾರೆ.ನಗರದ ತಗ್ಗು ಪ್ರದೇಶದ ಮನೆಗಳಿಗೆ ಕಾಲುವೆ ಮತ್ತು ಚರಂಡಿ ನೀರು ನುಗ್ಗಿದ್ದು, ಮನೆಗಳಲ್ಲಿದ್ದ ದವಸ-ಧಾನ್ಯಗಳೆಲ್ಲವೂ ನೀರಿನಲ್ಲಿ ಮುಳುಗಡೆಯಾಗಿವೆ. ಮನೆಯೊಳಗಿನ ನೀರನ್ನು ಹೊರಹಾಕಲು ನಿವಾಸಿಗಳು ಹರಸಾಹಸ ಪಟ್ಟಿದ್ದಾರೆ.
ಬಳ್ಳಾರಿ(Ballari) ಪ್ರಮುಖ ಶೋರೂಮ್ ಒಂದರ ಅಂಡರ್ ಗ್ರೌಂಡ್ (ನೆಲಮಹಡಿ) ಮಳೆನೀರು ನುಗ್ಗಿದ ಪರಿಣಾಮ, ಅಲ್ಲಿ ನಿಲ್ಲಿಸಲಾಗಿದ್ದ ನೂರಾರು ಬೈಕ್‌ಗಳು ಹಾಗೂ ಶೋರೂಮ್‌ನ ಜನರೇಟರ್ ನೀರಿನಲ್ಲಿ ಮುಳುಗಿವೆ. ನಗರದ ಇನ್ಫೆಂಟ್ರಿ ರಸ್ತೆ, ರಾಣಿ ತೋಟ ಏರಿಯಾ, ಕನೇಕಲ್ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ನಗರದಲ್ಲಿ ಇನ್ನೂ ಮಳೆ ಮುಂದುವರಿದಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಬಾಗಲಕೋಟೆ
ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನಿಂದ ಬೆಂದಿದ್ದ ಬಾಗಲಕೋಟೆ (Bagalkote) ಜಿಲ್ಲೆಗೆ ವರುಣದೇವ ತಂಪೆರೆದಿದ್ದಾನೆ. ರಾತ್ರಿ ಸುರಿದ ಭಾರೀ ಮಳೆಗೆ ನಗರದ ಚಿತ್ರಣವೇ ಬದಲಾಗಿದೆ.
ನಿರಂತರ ಮಳೆಗೆ ಬಾಗಲಕೋಟೆಯ ನವನಗರದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ವಿಶೇಷವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದ ಬಳಿಯ ರಸ್ತೆಗಳು ಹಳ್ಳದಂತಾಗಿ ಮಾರ್ಪಟ್ಟಿವೆ.ರಸ್ತೆಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಕಲಬುರಗಿ
ಕಲಬುರಗಿ (Kalaburagi) ಜಿಲ್ಲೆಯ ಹಲವೆಡೆ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಮುಖ್ಯ ರಸ್ತೆಗಳು ಜಲಾವೃತ: ಭಾರಿ ಮಳೆಯಿಂದಾಗಿ ಜಿಲ್ಲೆಯ ಸೇಡಂ ಪಟ್ಟಣದ ಮುಖ್ಯ ರಸ್ತೆಯು ಕೆರೆಯಂತಾಗಿದ್ದು, ರಸ್ತೆಯ ಮೇಲೆ ನೀರು ನಿಂತಿದ್ದರಿಂದ ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದಾರೆ.ಸೇಡಂ ಪಟ್ಟಣದ ಕೆಲವು ತಗ್ಗು ಪ್ರದೇಶಗಳ ಮನೆಗಳಿಗೆ ಮಳೆನೀರು ನುಗ್ಗಿದ್ದು, ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ.
ಹಾವೇರಿ:
ಹಾವೇರಿ (Haveri) ತಾಲ್ಲೂಕಿನ ಅಗಡಿ ಗ್ರಾಮದ ಬಳಿ ಇರುವ ಹಳ್ಳವು ತುಂಬಿ ಹರಿದಿದ್ದರಿಂದ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಮೈಲಾರಲಿಂಗೇಶ್ವರ ದೇವರ ಕಟ್ಟಿ, ಕೆಲವು ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿವೆ. ರಾಣೇಬೆನ್ನೂರು ನಗರದ ಗ್ರಾಮೀಣ ಪೊಲೀಸ್ ಠಾಣೆಯ ಬಳಿ ಇರುವ ಚರಂಡಿ ನೀರು ಠಾಣೆಯ ಆವರಣ ಹಾಗೂ ಒಳಗಡೆ ನುಗ್ಗಿದೆ. ಇದರಿಂದಾಗಿ ಠಾಣೆಯ ಕಡತಗಳು ಹಾಗೂ ಸಾಮಗ್ರಿಗಳನ್ನು ರಕ್ಷಿಸಲು ಮತ್ತು ನೀರನ್ನು ಹೊರಹಾಕಲು ಪೊಲೀಸ್ ಸಿಬ್ಬಂದಿ ತೀವ್ರ ಪರದಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂಗಾರು ಅಬ್ಬರ; ಸೋರುತಿದೆ ಆಸ್ಪತ್ರೆ, ಸರ್ಕಾರಿ ಶಾಲೆ ಜಲಾವೃತ – ಎಲ್ಲೆಲ್ಲಿ ಏನಾಗಿದೆ?
ಹುಬ್ಬಳ್ಳಿ:
ಹುಬ್ಬಳ್ಳಿಯಲ್ಲಿ(Hubballi) ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ಹಲವು ತಗ್ಗು ಪ್ರದೇಶಗಳು, ಅಂಡರ್ ಬ್ರಿಡ್ಜ್‌ಗಳು ಹಾಗೂ ದಾಜಿಬಾನಪೇಟೆ ಸೇರಿದಂತೆ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಬಳಿ ಇರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಆವರಣದಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಮರವು ಅಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದು, ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಳಗಾವಿ:
ಧಾರಾಕಾರವಾಗಿ ಸುರಿದ ಮಳೆಗೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಎರಡಂತಸ್ತಿನ ಕಟ್ಟಡವೊಂದು ಇದ್ದಕ್ಕಿದ್ದಂತೆ ನೆಲಕ್ಕುರುಳಿದೆ. ಪಟ್ಟಣದ ಹಲ್ಯಾಳ ರಸ್ತೆಯಲ್ಲಿರುವ ರಾವಸಾಬ ಐಹೊಳೆ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದೆ. ಇದು ಶಿಥಿಲಾವಸ್ಥೆಯಲ್ಲಿದ್ದರೂ ಇದನ್ನು ಖಾಸಗಿ ಕಚೇರಿಯಾಗಿ ಬಳಸಲಾಗುತ್ತಿತ್ತು. ಕಟ್ಟಡ ಬೀಳುವ ಸಂದರ್ಭದಲ್ಲಿ ಒಳಗೆ ಯಾರೂ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಈ ನಡುಗಿಸುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗದಗ:
ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದ್ದು, ನಗರದ ತಿಲಕ್ ಪಾರ್ಕ್ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಕೆರೆಯಂತಾಗಿವೆ. ಚರಂಡಿಗಳು ತುಂಬಿ ರಸ್ತೆ ಮೇಲೆ ಕಲುಷಿತ ನೀರು ಹರಿದಿದ್ದರಿಂದ ಬೀದಿ ಬದಿ ವ್ಯಾಪಾರಸ್ಥರು, ವಾಹನ ಸವಾರರು ಹಾಗೂ ಪಾದಾಚಾರಿಗಳು ತೊಂದರೆ ಅನುಭವಿಸಿದರು. ನಗರಸಭೆಯು ಚರಂಡಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದಕ್ಕೆ ರಸ್ತೆಗಳು ಬ್ಲಾಕ್ ಆಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಈ ಮುಂಗಾರು ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ರಾಯಚೂರು
ಮಸ್ಕಿ ತಾಲೂಕಿನ ಅಡವಿಬಾವಿ ತಾಂಡ ಗ್ರಾಮದಲ್ಲಿ ಸರ್ಕಾರಿ ಶಾಲೆ ಜಲಾವೃತಗೊಂಡಿದೆ. ಶಾಲೆ ಮುಂದಿನ ರಸ್ತೆಯಲ್ಲೂ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಮಕ್ಕಳು ಶಾಲೆಗೆ ಹೋಗಲು ಪರದಾಡುತ್ತಿದ್ದಾರೆ. ಈ ಬಗ್ಗೆ ಶಾಸಕ ಬಸನಗೌಡ ತುರ್ವಿಹಾಳ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು
ಎನ್.ಆರ್.ಪುರ ತಾಲೂಕು ಆಸ್ಪತ್ರೆಯ ಮಾಳಿಗೆಯೂ ಮಳೆಗೆ ಸೋರುತ್ತಿದ್ದು, ರೋಗಿಗಳು ಹೈರಾಣಾಗಿದ್ದಾರೆ. ಅಧಿಕಾರಿಗಳು ಕೇವಲ ತಾತ್ಕಾಲಿಕ ತೇಪೆ ಹಚ್ಚಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
