ಉಡುಪಿ/ಮಂಗಳೂರು: ನಿನ್ನೆಯಷ್ಟೇ ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಿರುವ ಬೆನ್ನಲ್ಲೇ ಕರ್ನಾಟಕದ ಕರಾವಳಿ ಭಾಗಗಳಲ್ಲೂ ಮಳೆಯ ಚಟುವಟಿಕೆ ಹೆಚ್ಚಾಗಿದೆ. ಉಡುಪಿ, ಮಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ.
ಕೇರಳಕ್ಕೆ ಮುಂಗಾರು ಆಗಮಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕದಲ್ಲೂ ಮಳೆ ಆರಂಭವಾಗುವುದು ಸಾಮಾನ್ಯ. ಅದರಂತೆ ಕರಾವಳಿ ಜಿಲ್ಲೆಗಳಲ್ಲಿ ಇಂದು ಮಳೆಯ ವಾತಾವರಣ ಕಂಡುಬಂದಿದೆ. ಇದನ್ನೂ ಓದಿ: ಅವೈಜ್ಞಾನಿಕ ರಸ್ತೆ ಕಾಮಗಾರಿ – ಬೈಕ್ ಸಮೇತ ಗುಂಡಿಗೆ ಬಿದ್ದು ನರ್ಸ್ ಸಾವು, ಪತಿಗೆ ಗಂಭೀರ ಗಾಯ!
ಉಡುಪಿಯಲ್ಲಿ ಸಾಧಾರಣ ಮಳೆ
ಉಡುಪಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇಂದು ಜಿಲ್ಲೆಯ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಉಡುಪಿ, ಕಾಪು, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ಭಾಗಗಳಲ್ಲಿ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಜೂನ್ 11ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.
ಮಳೆ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳ ಕಾಲುವೆ ಹಾಗೂ ಚರಂಡಿಗಳ ಸ್ವಚ್ಛತೆಗೆ ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ. ಸೂಚನೆ ನೀಡಿದ್ದಾರೆ. ಪ್ರಕೃತಿ ವಿಕೋಪ ಎದುರಿಸಲು ಅಗ್ನಿಶಾಮಕ ದಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಜ್ಜಾಗಿರಬೇಕು ಎಂದು ಸೂಚಿಸಲಾಗಿದೆ. ಇದೇ ವೇಳೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಕನಕಪುರದ ಕಂಚನಹಳ್ಳಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ – ನಿಟ್ಟುಸಿರು ಬಿಟ್ಟ ಜನ
ಮಂಗಳೂರಿನಲ್ಲಿ ಭಾರೀ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಜೋರಾಗಿದೆ. ಮಂಗಳೂರು ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಮಳೆಯಾಗಿದೆ. ಭಾರೀ ಮಳೆಯಿಂದ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಕರಾವಳಿ ಕರ್ನಾಟಕಕ್ಕೆ ಮುಂಗಾರು ಮಾರುತ ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಕೆಲವು ದಿನಗಳಲ್ಲಿ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
