– ಯುಪಿಯಲ್ಲಿ ಮೈತ್ರಿ ಲೆಕ್ಕಾಚಾರ ಉಲ್ಟಾಪಲ್ಟಾ
ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ (Uttar Pradesh Elections) ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದು ಕಡೆ `ಬಿಜೆಪಿ ಮಿಷನ್ 2027’ರ ಸಿದ್ಧತೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಇನ್ನೂ ಒಮ್ಮತ ಮೂಡದಿರುವುದು ತಲೆನೋವಾಗಿದೆ. ನವೆಂಬರ್ 17ರಂದು ಉಭಯ ಪಕ್ಷಗಳ ನಡುವೆ ನಡೆದಿದ್ದ ಸೀಟು ಹಂಚಿಕೆ ಸಭೆಯಲ್ಲಿ 181 ಸ್ಥಾನಗಳಿಗೆ ಪಟ್ಟು ಹಿಡಿದ್ದ ಕಾಂಗ್ರೆಸ್ಗೆ ಸಮಾಜವಾದಿ ಪಕ್ಷ (Samajwadi Party) 24 ಸ್ಥಾನಗಳ ಆರಂಭಿಕ ಆಫರ್ ನೀಡಿತ್ತು. ಆದ್ದರಿಂದ ಯಾವುದೇ ಒಮ್ಮತ ಮೂಡದೇ ಸಭೆ ವಿಫಲವಾಗಿತ್ತು. ಹೀಗಾಗಿ ನವೆಂಬರ್ 23 ರಂದು ಉಭಯ ಪಕ್ಷಗಳ ನಡುವೆ 2ನೇ ಸುತ್ತಿನ ಸಭೆಗೆ ಭರ್ಜರಿ ತಯಾರಿ ನಡೆದಿದೆ.
ಸೀಟು ಹಂಚಿಕೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಮತ್ತು ಈ ವಿಚಾರವನ್ನು ಹೆಚ್ಚು ದಿನಗಳ ಕಾಲ ಮುಂದೂಡಬಾರದು ಎಂಬುದು ಕಾಂಗ್ರೆಸ್ನ ನಿಲುವಾಗಿದೆ. ಹೀಗಾಗಿ 2ನೇ ಸುತ್ತಿನ ಮಾತುಕತೆಗೆ ಕಾಂಗ್ರೆಸ್ ನಾಯಕಿ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ನೇತೃತ್ವ ವಹಿಸಲು ಸಜ್ಜಾಗಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಿದ್ಧತೆಯ ಭಾಗವಾಗಿ ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿಯನ್ನ ರಚಿಸಿದೆ. ರಾಜ್ಯಸಭಾ ಸಂಸದ ಅಜಯ್ ಮಾಕನ್ ಅವರಿಗೆ ಸಮಿತಿಯ ಜವಾಬ್ದಾರಿ ನೀಡಲಾಗಿದೆ. ಅಸ್ಲಂ ಶೇಖ್ ಮತ್ತು ಬಿ.ವಿ. ಶ್ರೀನಿವಾಸ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಸಮಿತಿಯು ಚುನಾವಣಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಎಸ್ಪಿಯಿಂದಲೂ ಸಮಿತಿ ರಚನೆ, ಇಬ್ಬರು ಡಾಟಾ ತಜ್ಞರ ಸೇರ್ಪಡೆ
ಇದರ ಮಧ್ಯೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ಚುರುಕುಗೊಳಿಸಿರುವ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav), ಮಾತುಕತೆಗೆ 7 ಸದಸ್ಯರ ಸಮಿತಿಯೊಂದನ್ನ ರಚನೆ ಮಾಡಿದ್ದಾರೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಪ್ರೊ. ರಾಮ್ ಗೋಪಾಲ್ ಯಾದವ್ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿದೆ. ಇದರಲ್ಲಿ ಪಕ್ಷದ ಐವರು ನಾಯಕರು ಹಾಗೂ ಇಬ್ಬರು ಡಾಟಾ ತಜ್ಞರು ಇದ್ದಾರೆ. ಕ್ಷೇತ್ರವಾರು ಚುನಾವಣಾ ದತ್ತಾಂಶ, ರಾಜಕೀಯ ಸಮೀಕರಣಗಳು, 2022ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹಾಗೂ ಸಂಭಾವ್ಯ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆಗಳನ್ನು ವಿಶ್ಲೇಷಿಸಲು ಇಬ್ಬರು ಡಾಟಾ ತಜ್ಞರನ್ನ ಸಮಿತಿಗೆ ಸೇರಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಎಸ್ಪಿ ಗೆದ್ದ 22 ಕ್ಷೇತ್ರಗಳಿಗೆ ಕೈಪಟ್ಟು
ಈ ಬೆಳವಣಿಗೆ ಮಧ್ಯೆಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ ಗೆದ್ದಿರುವ 22 ಕ್ಷೇತ್ರಗಳನ್ನ ಈ ಸಲ ತಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದ್ದಾರೆ. ಕಾಂಗ್ರೆಸ್ನ ಈ ಬೇಡಿಕೆ ಈಗ ಎಸ್ಪಿ ನಾಯಕರನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಒಟ್ಟು 403 ಸ್ಥಾನಗಳಲ್ಲಿ ಮಿತ್ರ ಕಾಂಗ್ರೆಸ್ ಪಕ್ಷವು 181 ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ.
ಈಗಾಗಲೇ 181 ಕ್ಷೇತ್ರಗಳ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ನ ನಾಯಕರು ಅಖಿಲೇಶ್ ಯಾದವ್ ಅವರಿಗೆ ಸಲ್ಲಿಸಿದ್ದಾರೆ. ಇದರಲ್ಲಿ ಅಮೇಠಿ, ಸಹಾರನಪುರ, ಬಚ್ರಾನಾ, ಬೆಹಟ್, ಮೊರಾದಾಬಾದ್ ಸೇರಿದಂತೆ ಪ್ರಸ್ತುತ ಎಸ್ಪಿ ಶಾಸಕರು ಪ್ರತಿನಿಧಿಸುತ್ತಿರುವ 22 ಕ್ಷೇತ್ರಗಳ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿದೆ. ಇದಕ್ಕೆ ಎಸ್ಪಿ ನಾಯಕರು ತೀವ್ರ ಆಕ್ಷೇಪ ಎತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 2 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಈಗಿನ ಪರಿಸ್ಥಿತಿ ನೋಡಿದ್ರೆ, 50 ಕ್ಷೇತ್ರಗಳನ್ನೂ ಗೆಲ್ಲುವ ಅರ್ಹತೆ ಹೊಂದಿಲ್ಲ. ಹೀಗಿರುವಾಗ 181 ಸ್ಥಾನಗಳಿಗೆ ಬೇಡಿಕೆಯಿಟ್ಟಿರೋದು ಅಸಮಂಜಸ ಎಂದಿದ್ದಾರೆ. ಆದ್ರೆ ಈ ಹಿಂದೆ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಸೀಟುಗಳನ್ನು ಕೇಳಬೇಕು ಎಂದಿದ್ದ ಅಖಿಲೇಶ್ ಯಾದವ್, ತಮ್ಮ ಪಕ್ಷವು ಎಷ್ಟು ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಿದೆ ಅನ್ನೋ ವಿಚಾರವನ್ನ ಈವರೆಗೂ ಗೌಪ್ಯವಾಗಿಯೇ ಇಟ್ಟಿದ್ದಾರೆ. ಒಟ್ಟಾರೆಯಾಗಿ 24 ಸ್ಥಾನಗಳ ಆರಂಭಿಕ ಆಫರ್ ನೀಡಿದ್ದ ಎಸ್ಪಿ 70 ರಿಂದ 80 ಸ್ಥಾನಗಳನ್ನಷ್ಟೇ ಬಿಟ್ಟುಕೊಡಲು ಒಲವು ತೋರಿದೆ.
ಪ್ರಮುಖ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು
ಸದ್ಯ ಕಾಂಗ್ರೆಸ್ ಸಲ್ಲಿಕೆ ಮಾಡಿರುವ 181 ಕ್ಷೇತ್ರಗಳ ಪಟ್ಟಿಯಲ್ಲಿ ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ಪೂರ್ವದ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳು ಸೇರಿಕೊಂಡಿವೆ. ರಾಯ್ಬರೇಲಿ, ಅಮೇಠಿ, ಸುಲ್ತಾನ್ಪುರ, ಲಕ್ನೋ ಪೂರ್ವ, ಕಾನ್ಪುರ ಕಂಟೋನ್ಮೆಂಟ್, ಬಾಗ್ಪತ್, ಲೋನಿ, ಮಥುರಾ, ಆಗ್ರಾ ಗ್ರಾಮೀಣ, ಜೇವಾರ್, ಮೀರತ್ ದಕ್ಷಿಣ, ಹಾಪುರ್, ವಾರಣಾಸಿ ಉತ್ತರ, ವಾರಣಾಸಿ ಕಂಟೋನ್ಮೆಂಟ್, ಅಲಹಾಬಾದ್ ಉತ್ತರ, ಅಲಹಾಬಾದ್ ದಕ್ಷಿಣ ಮತ್ತು ಪಿಲಿಭಿತ್ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.
ಅಲ್ಪಸಂಖ್ಯಾತರೇ ಎಸ್ಪಿಯ ಪ್ರಮುಖ ವೋಟ್ ಬ್ಯಾಂಕ್
ಇನ್ನೂ ಉತ್ತರ ಪ್ರದೇಶದಲ್ಲಿ ಅಲ್ಪ ಸಂಖ್ಯಾತ ಸಮುದಾಯವು ಸಮಾಜವಾದಿ ಪಕ್ಷದ ಪ್ರಮುಖ ವೋಟ್ಬ್ಯಾಂಕ್ ಆಗಿದೆ. ಈ ಮಧ್ಯೆ ಮುಸ್ಲಿಂ ಪ್ರಾಬಲ್ಯವಿರುವ ಅನೇಕ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವುದು ಎಸ್ಪಿ ನಾಯಕರ ಅತೃಪ್ತಿಗೆ ಕಾರಣವಾಗಿದೆ.
20,000ಕ್ಕೂ ಹೆಚ್ಚು ಲೀಡ್ ಪಡೆದ ಕ್ಷೇತ್ರಗಳನ್ನ ಬಿಟ್ಟುಕೊಡಲು ಎಸ್ಪಿ ಪ್ಲ್ಯಾನ್?
ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಮತ ಪಡೆದಿತ್ತು. 10 ಸಾವಿರದಿಂದ 20 ಸಾವಿರ ಮತಗಳನ್ನು 10 ಕ್ಷೇತ್ರಗಳಲ್ಲಿ ಗಳಿಸಿತ್ತಯ. ಆರಂಭಿಕ ಹಂತದಲ್ಲಿ ಈ ಕ್ಷೇತ್ರಗಳ ಬಗ್ಗೆಯೇ ಮಾತುಕತೆ ನಡೆಯಲಿದೆ. ಇನ್ನೊಂದು ಕಡೆ ಉತ್ತರಾಖಂಡದಲ್ಲಿ ತಮ್ಮ ಪಕ್ಷಕ್ಕೆ ಕನಿಷ್ಠ 15 ಕ್ಷೇತ್ರಗಳನ್ನ ಬಿಟ್ಟುಕೊಡಬೇಕೆಂದು ಎಸ್ಪಿ ನಾಯಕರು ಕಾಂಗ್ರೆಸ್ಗೆ ಬೇಡಿಕೆಯಿಟ್ಟಿದ್ದಾರೆ.
ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸೂತ್ರವೇ ಆಧಾರ?
ಸದ್ಯದ ಮಾಹಿತಿ ಪ್ರಕಾರ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ವಿಚಾರದಲ್ಲಿ 2024ರ ಲೋಕಸಭಾ ಚುನಾವಣೆಯ ಸೂತ್ರವನ್ನು ಪ್ರಮುಖ ಆಧಾರವಾಗಿ ಪರಿಗಣಿಸಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳ ಪೈಕಿ ಸಮಾಜವಾದಿ ಪಕ್ಷ 63 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ಗೆ ಸುಮಾರು ಶೇ.21ರಷ್ಟು ಸ್ಥಾನಗಳು ದೊರೆತಿದ್ದವು. ಇದೇ ಅನುಪಾತವನ್ನ 403 ವಿಧಾನಸಭಾ ಕ್ಷೇತ್ರಗಳಿಗೆ ಅನ್ವಯಿಸಿದರೆ ಕಾಂಗ್ರೆಸ್ಗೆ ಸುಮಾರು 86 ಸ್ಥಾನಗಳು ಸಿಗಬಹುದು. ಶೇ.20ರಷ್ಟು ಪಾಲನ್ನು ಪರಿಗಣಿಸಿದರೆ ಸುಮಾರು 81 ಸ್ಥಾನಗಳು ದೊರೆಯಬಹುದು. ಹೀಗಾಗಿ ಕಾಂಗ್ರೆಸ್ಗೆ 80 ರಿಂದ 86 ಸ್ಥಾನಗಳನ್ನು ನೀಡುವ ಆಧಾರದಲ್ಲಿ ಮಾತುಕತೆ ನಡೆಬಹುದು ಎಂದು ಹೇಳಲಾಗ್ತಿದೆ
2024ರಲ್ಲಿ ಎಸ್ಪಿ–ಕಾಂಗ್ರೆಸ್ ಮೈತ್ರಿಗೆ ಭರ್ಜರಿ ಯಶಸ್ಸು
ಉತ್ತರ ಪ್ರದೇಶದಲ್ಲಿ ಕಳೆದ ಮೂರು ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನ ಗಮನಿಸಿದರೆ, 2024ರಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಉತ್ತಮ ಪ್ರದರ್ಶನ ನೀಡಿತ್ತು.
ಯಾವ ವರ್ಷ – ಯಾವ ಪಕ್ಷ – ಗೆದ್ದ ಸ್ಥಾನಗಳೆಷ್ಟು?
ಪಕ್ಷ – 2014 – 2019 – 2024
ಬಿಜೆಪಿ – 71 – 62 – 33
ಸಮಾಜವಾದಿ ಪಕ್ಷ – 5 – 5 – 37
ಕಾಂಗ್ರೆಸ್ – 2 – 1 – 6
ಬಿಎಸ್ಪಿ – 0 – 10 – 0
2019ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿ ಮಾಡಿಕೊಂಡಿದ್ದವು. ಆದರೆ 2024ರಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆಯನ್ನ ಎದುರಿಸಿದ್ದವು. 2024ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 6 ಸ್ಥಾನಗಳಲ್ಲಿ ಜಯಗಳಿಸಿತ್ತು. ಎರಡೂ ಪಕ್ಷಗಳು ಒಟ್ಟಾಗಿ 43 ಸ್ಥಾನಗಳನ್ನು ಪಡೆದುಕೊಂಡಿದ್ದವು. ಮತ್ತೊಂದೆಡೆ, ಬಿಜೆಪಿ 33 ಸ್ಥಾನಗಳಿಗೆ ಸೀಮಿತವಾಗಿತ್ತು. ಈ ಫಲಿತಾಂಶವೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಲು ಎರಡೂ ಪಕ್ಷಗಳಿಗೆ ಪ್ರಮುಖ ಪ್ರೇರಣೆಯಾಗಿದೆ.
ಈ ವರ್ಷದಲ್ಲಿ ಅಖಿಲೇಶ್ ಯಾದವ್ ನೀಡಿದ ಬಿಗ್ ಸ್ಟೇಟ್ಮೆಂಟ್; ಟೈಮ್ಲೈನ್!
– ಜೂನ್ 17: ಕಾಂಗ್ರೆಸ್ ಜೊತೆಗೂಡಿ ಚುನಾವಣೆ ಎದುರಿಸುವುದಾಗಿ ಘೋಷಣೆ.
– ಸೆಪ್ಟೆಂಬರ್ 25: ಮೈತ್ರಿ ಖಚಿತ, ಆದರೆ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ಹೇಳಿಕೆ.
– ಅಕ್ಟೋಬರ್ 4: ಸೀಟುಗಳಿಗಿಂತ ಮೈತ್ರಿಯ ಗೆಲುವು ಮುಖ್ಯ ಎಂದು ಅಭಿಪ್ರಾಯ.
– ನವೆಂಬರ್ 14: ಕಾಂಗ್ರೆಸ್ 181 ಸ್ಥಾನಗಳನ್ನು ಕೇಳಿದೆ ಎಂದು ಬಹಿರಂಗಪಡಿಸಿದ ಅಖಿಲೇಶ್.
– ನವೆಂಬರ್ 17: ಸೀಟು ಹಂಚಿಕೆಯಲ್ಲಿ ಪರಸ್ಪರ ಗೌರವಕ್ಕೆ ಆದ್ಯತೆ ನೀಡುವುದಾಗಿ ಮತ್ತೊಮ್ಮೆ ಸ್ಪಷ್ಟನೆ.
ಅಖಿಲೇಶ್ ಯಾದವ್ ಅವರ ಈ ಹಿಂದಿನ ಹೇಳಿಕೆಗಳನ್ನು ಗಮನಿಸಿದರೆ ಮೂರು ಪ್ರಮುಖ ಅಂಶಗಳು ಕಂಡುಬರುತ್ತವೆ. ಮೊದಲನೆಯದು, ಕಾಂಗ್ರೆಸ್ಗೆ ಗೌರವಯುತ ಸ್ಥಾನಗಳನ್ನು ನೀಡುವುದು. ಎರಡನೆಯದು, ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯಕ್ಕೆ ಆದ್ಯತೆ ನೀಡುವುದು. ಮೂರನೆಯದು, ಸೀಟುಗಳ ಸಂಖ್ಯೆಗಿಂತ ಮೈತ್ರಿಯ ಗೆಲುವಿಗೆ ಹೆಚ್ಚಿನ ಮಹತ್ವ ನೀಡುವುದು.
ಸೀಟು ಹಂಚಿಕೆ ಗೊಂದಲಕ್ಕೆ ಅಂತಿಮ ತೆರೆ ಬೀಳುವುದೇ?
2024ರ ಚುನಾವಣೆಯ ಫಲಿತಾಂಶವನ್ನ ಗಮನಿಸಿದರೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಎರಡಕ್ಕೂ ಮೈತ್ರಿ ರಾಜಕೀಯವಾಗಿ ಮಹತ್ವದ್ದಾಗಿದೆ. ಆದರೆ ಲೋಕಸಭಾ ಚುನಾವಣೆಗೆ ಹೋಲಿಸಿದರೆ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಇನ್ನಷ್ಟು ಸವಾಲಿನ ಸಂಗತಿಯಾಗಬಹುದು. ಒಂದೆಡೆ ಕಾಂಗ್ರೆಸ್ 181 ಸ್ಥಾನಗಳನ್ನು ಕೇಳಿದ್ದರೆ, ಅಖಿಲೇಶ್ ಯಾದವ್ ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯಕ್ಕೆ ಆದ್ಯತೆ ನೀಡುವ ನಿಲುವು ಹೊಂದಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಮುಂದಿರುವ ಪ್ರಮುಖ ಸವಾಲು ಕೇವಲ ಸೀಟುಗಳ ಸಂಖ್ಯೆಯನ್ನು ನಿರ್ಧರಿಸುವುದಲ್ಲ. ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲೂ ಒಮ್ಮತ ಮೂಡಿಸಬೇಕಿದೆ.
ಇದೀಗ ಎಲ್ಲರ ಗಮನ ನವೆಂಬರ್ 23ರಿಂದ 25ರವರೆಗೆ ನಡೆಯುವ ಸಾಧ್ಯತೆಯಿರುವ ಮಾತುಕತೆಯ ಮೇಲಿದೆ. ಈ ಸಭೆಗಳ ಬಳಿಕವಷ್ಟೇ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಯಾವ ಸೀಟು ಹಂಚಿಕೆ ಸೂತ್ರದೊಂದಿಗೆ 2027ರ ವಿಧಾನಸಭಾ ಚುನಾವಣೆಗೆ ಸಜ್ಜಾಗಲಿವೆ ಎಂಬುದು ಸ್ಪಷ್ಟವಾಗಲಿದೆ.





