– ನಗರಾಭಿವೃದ್ಧಿ ಅಧ್ಯಯನ, ಹೂಡಿಕೆ ಆಕರ್ಷಣೆಗಾಗಿ ಪ್ರವಾಸ
– ನ. 23 ರಿಂದ 25 ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ನಿಯೋಗವು ನವೆಂಬರ್ 23 ರಿಂದ 25 ರವರೆಗೆ ಜಪಾನ್ ಪ್ರವಾಸ(Japan Tour) ಕೈಗೊಳ್ಳಲಿದೆ.
ನ.23 ರಂದು ನಗೋಯಾ, 24 ರಂದು ಒಸಾಕಾ ಹಾಗೂ 25 ರಂದು ಟೋಕಿಯೊದಲ್ಲಿ ಮುಖ್ಯಮಂತ್ರಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಪ್ರವಾಸವು ಎರಡು ಪ್ರಮುಖ ಆದ್ಯತೆಗಳನ್ನು ಹೊಂದಿದೆ. ರಾಜ್ಯದಲ್ಲಿ ಜಪಾನ್ ಹೂಡಿಕೆಯನ್ನು ಮತ್ತಷ್ಟು ಬಲಪಡಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಯೋಗದಲ್ಲಿ ಉದ್ಯಮಿಗಳೊಂದಿಗೆ ಸಭೆ ನಡೆಸುವುದು, ಹಾಗೂ ಜಾಗತಿಕ ಮಟ್ಟದಲ್ಲಿ ಮಾದರಿಯಾಗಿರುವ ಜಪಾನ್ನ ನಗರ ನಿರ್ಮಾಣ ಪದ್ಧತಿಗಳನ್ನು ಅಧ್ಯಯನ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ತಂಡದೊಂದಿಗೆ ನಗರಾಭಿವೃದ್ಧಿ ಯೋಜನೆಗಳಿಗೆ ಭೇಟಿ ನೀಡುವುದು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ. ಬಿ. ಪಾಟೀಲ್ ಅವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಲಿದ್ದು, ಕೈಗಾರಿಕಾ ಸಂವಾದಗಳನ್ನು ಮುನ್ನಡೆಸಲಿದ್ದಾರೆ. ಅಲ್ಲದೆ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ (ರಿಪಬ್ಲಿಕ್ ಆಫ್ ಕೊರಿಯಾ) ರಾಜ್ಯದ ಹೂಡಿಕೆ ಪ್ರಚಾರ ಕಾರ್ಯಕ್ರಮಗಳ ನೇತೃತ್ವವನ್ನೂ ವಹಿಸಲಿದ್ದಾರೆ.
ಈ ನಿಯೋಗದಲ್ಲಿ ಹಿರಿಯ ಅಧಿಕಾರಿಗಳ ತಂಡ ಇರಲಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ಇನ್ವೆಸ್ಟ್ ಕರ್ನಾಟಕ ಫೋರಂನ ಸಿಇಒ ಖುಷ್ಬೂ ಗೋಯೆಲ್ ಚೌಧರಿ,ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ-ಯತೀಶ್ ಆರ್ ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿ, ಜಿಬಿಎ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಸ್ಟಿಂಗ್ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ನಾಯಕಿಗೆ ಬಂಧನ ಭೀತಿ
ಜಪಾನ್ ಉದ್ಯಮಗಳೊಂದಿಗೆ ಬಾಂಧವ್ಯ ವೃದ್ಧಿ
ಮುಖ್ಯಮಂತ್ರಿಗಳು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನಿಯೋಗವು ಜಪಾನ್ನ ಪ್ರಮುಖ ಕಂಪನಿಗಳ ಉನ್ನತ ನಾಯಕರನ್ನು ಭೇಟಿ ಮಾಡಿ, ಅವರ ಮುಂದಿನ ಹೂಡಿಕೆ ಯೋಜನೆಗಳ ಕುರಿತು ಚರ್ಚಿಸುವುದರ ಜೊತೆಗೆ ಕರ್ನಾಟಕದಲ್ಲಿರುವ ವಿಪುಲ ಹೂಡಿಕೆ ಅವಕಾಶಗಳನ್ನು ಮನವರಿಕೆ ಮಾಡಿಕೊಡಲಿದೆ. ನ.27 ರವರೆಗೆ ನಡೆಯಲಿರುವ ಈ ಕೈಗಾರಿಕಾ ಸಭೆಗಳಲ್ಲಿ, 2027ರ ಏಪ್ರಿಲ್ 20 ರಿಂದ 22 ರವರೆಗೆ ಬೆಂಗಳೂರು ಅರಮನೆಯಲ್ಲಿ ಇನ್ವೆಸ್ಟ್ ಕರ್ನಾಟಕ ವತಿಯಿಂದ ಆಯೋಜಿಸಲಾಗಿರುವ ‘ಜಾಗತಿಕ ಹೂಡಿಕೆದಾರರ ಸಮಾವೇಶ 2027’ ಕ್ಕೆ ಪ್ರತಿ ಕಂಪನಿಗೂ ಅಧಿಕೃತ ಆಹ್ವಾನ ನೀಡಲಾಗುವುದು.
ಕರ್ನಾಟಕ ಮತ್ತು ಜಪಾನ್ ಎರಡೂ ಬಲಿಷ್ಠವಾಗಿರುವ ಪ್ರಮುಖ ವಲಯಗಳ ಮೇಲೆ ಈ ಸಭೆಗಳು ಕೇಂದ್ರೀಕೃತವಾಗಿವೆ:
* ಆಟೋಮೋಟಿವ್ ಮತ್ತು ಇವಿ (EV) ಬಿಡಿಭಾಗಗಳು: ಟೊಯೋಟಾ ಮತ್ತು ಪ್ಯಾನಾಸೋನಿಕ್ ಆಟೋಮೋಟಿವ್ ಸಿಸ್ಟಮ್ಸ್
* ವಿಶೇಷ ರಾಸಾಯನಿಕಗಳು ಮತ್ತು ಸುಧಾರಿತ ಸಾಮಗ್ರಿಗಳು: ಮಿತ್ಸುಬಿಷಿ ಕೆಮಿಕಲ್ ಗ್ರೂಪ್
* ಔಷಧೀಯ ಕ್ಷೇತ್ರ: ಟಕೆಡಾ ಫಾರ್ಮಾಸ್ಯುಟಿಕಲ್ಸ್
* ಕೈಗಾರಿಕಾ ಆಟೊಮೇಷನ್: ಯೊಕೊಗಾವಾ ಎಲೆಕ್ಟ್ರಿಕ್
* ಉತ್ಪಾದನಾ ವಲಯದ ಹೂಡಿಕೆಗಳು: ಸುಮಿಟೊಮೊ ಕಾರ್ಪೊರೇಷನ್
ಪ್ರತಿ ಸಭೆಯಲ್ಲಿಯೂ ರಾಜ್ಯ ಸರ್ಕಾರದ ಹೊಸ ನೀತಿಗಳು ಮತ್ತು ಪ್ರೋತ್ಸಾಹಕ ಕ್ರಮಗಳನ್ನು ಪ್ರಸ್ತುತಪಡಿಸಲಾಗುವುದು. ಇದರಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ, ಹಿಂದುಳಿದ ಮತ್ತು ಆದ್ಯತಾ ತಾಲ್ಲೂಕುಗಳಲ್ಲಿನ ಹೂಡಿಕೆಗಳಿಗೆ ಶೇ. 20 ರವರೆಗಿನ ಹೆಚ್ಚುವರಿ ಬಂಡವಾಳ ಸಬ್ಸಿಡಿ, ಕೆಐಎಡಿಬಿ (KIADB) ಡಿಜಿಟಲ್ ಇಂಡಸ್ಟ್ರಿಯಲ್ ಲ್ಯಾಂಡ್ ಬ್ಯಾಂಕ್ ಹಾಗೂ ಪ್ರತಿ ಹೂಡಿಕೆ ಪ್ರಸ್ತಾವನೆಗೂ ಏಕಗವಾಕ್ಷಿ ಸೌಲಭ್ಯದ ಮಾಹಿತಿ ಒಳಗೊಂಡಿದೆ. ಜೊತೆಗೆ, ಕರ್ನಾಟಕದಲ್ಲಿ ಹೂಡಿಕೆ ಮಾಡುವ ಜಪಾನ್ ಕಂಪನಿಗಳಿಗೆ ಸಾಂಸ್ಥಿಕ ಬೆಂಬಲವನ್ನು ಬಲಪಡಿಸುವ ಕುರಿತು ಜೆಟ್ರೋ (JETRO) ಕಾರ್ಯನಿರ್ವಾಹಕ ಉಪಾಧ್ಯಕ್ಷರೊಂದಿಗೂ ಮಹತ್ವದ ಸಭೆ ನಡೆಯಲಿದೆ.
ಜಪಾನ್ ಮಾದರಿಯಿಂದ ಕಲಿಕೆ
ಯೋಜಿತ, ಹೆಚ್ಚಿನ ಜನಸಾಂದ್ರತೆಯ ಮತ್ತು ಸುಸ್ಥಿರ ನಗರ ಬೆಳವಣಿಗೆಗೆ ಜಪಾನ್ನ ನಗರಗಳು ಜಗತ್ತಿಗೇ ಮಾದರಿಯಾಗಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಿಯೋಗವು ಬೆಂಗಳೂರು ಹಾಗೂ ಕರ್ನಾಟಕದ ಇತರ ವೇಗವಾಗಿ ಬೆಳೆಯುತ್ತಿರುವ ನಗರಗಳಿಗೆ ಅಗತ್ಯವಿರುವ ಪ್ರಮುಖ ಕ್ಷೇತ್ರಗಳ ಕುರಿತು ಅಧ್ಯಯನ ನಡೆಸಲಿದೆ. ಇದರಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದನೆ, ನಗರ ಯೋಜನೆ, ಸಮಗ್ರ ಸಾರಿಗೆ ಮತ್ತು ಸಂಚಾರ ನಿರ್ವಹಣೆ, ಹಾಗೂ ಆಧುನಿಕ ವಾಸ್ತುಶಿಲ್ಪ ಮತ್ತು ನಗರ ವಿನ್ಯಾಸ ಸೇರಿವೆ.
ಹೆಚ್ಚಿನ ಜನಸಾಂದ್ರತೆಯ ಮಹಾನಗರಗಳನ್ನು ಜಪಾನ್ ಹೇಗೆ ಯೋಜಿಸುತ್ತದೆ, ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂಬುದರ ನೇರ ಅನುಭವವನ್ನು ಒಸಾಕಾ ಮತ್ತು ಟೋಕಿಯೊ ಭೇಟಿಗಳು ನಿಯೋಗಕ್ಕೆ ನೀಡಲಿವೆ. ವಿಶ್ವದ ಅತಿದೊಡ್ಡ ಮಹಾನಗರಗಳಲ್ಲಿ ಒಂದಾದ ಟೋಕಿಯೊ, ಸಮಗ್ರ ಸಾರಿಗೆ ಮತ್ತು ನಿಲ್ದಾಣ-ಕೇಂದ್ರಿತ ಪುನರಾಭಿವೃದ್ಧಿಗೆ ಜಾಗತಿಕ ಮಾದರಿಯಾಗಿದ್ದರೆ, ಪಶ್ಚಿಮ ಜಪಾನ್ನ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾದ ಒಸಾಕಾ, ಬೃಹತ್ ಪ್ರಮಾಣದ ನಗರ ನವೀಕರಣ ಮತ್ತು ಮಹಾನಗರ ಯೋಜನೆಯಲ್ಲಿ ಉತ್ತಮ ಪಾಠಗಳನ್ನು ಒದಗಿಸಲಿದೆ.
ಈ ಭೇಟಿಯ ಭಾಗವಾಗಿ, ಜಪಾನ್ನ ಪ್ರಮುಖ ವಾಸ್ತುಶಿಲ್ಪ ಮತ್ತು ನಗರ ವಿನ್ಯಾಸ ಸಂಸ್ಥೆಯಾದ ನಿಕ್ಕೆನ್ ಸೆಕ್ಕೆಯ್ (Nikken Sekkei) ಪ್ರತಿನಿಧಿಗಳೊಂದಿಗೆ ನಿಯೋಗವು ‘ಟೋಕಿಯೊ ಮಿಡ್ಟೌನ್ ರೊಪ್ಪೊಂಗಿ’ಗೆ ಭೇಟಿ ನೀಡಲಿದೆ. ಈ ಬೃಹತ್ ಯೋಜನೆಯು ನಗರ ಪುನರಾಭಿವೃದ್ಧಿ, ಸಾರಿಗೆ-ಆಧಾರಿತ ಅಭಿವೃದ್ಧಿ, ಭೂ ಮರುಹೊಂದಾಣಿಕೆ, ಮಿಶ್ರ ಭೂ ಬಳಕೆ ಮತ್ತು ನಗರ ಹಸಿರು ಪ್ರದೇಶಗಳ ನಿರ್ವಹಣೆಗೆ ಉತ್ತಮ ನಿದರ್ಶನವಾಗಿದೆ. ಬೆಂಗಳೂರು ಮತ್ತು ಇತರ ಭಾರತೀಯ ನಗರಗಳು ಸಹ ಇದೇ ದಿಕ್ಕಿನಲ್ಲಿ ವಿಕಸನಗೊಳ್ಳುತ್ತಿರುವುದರಿಂದ ಈ ಅಧ್ಯಯನ ಮಹತ್ವದ್ದಾಗಿದೆ.
ಇದರೊಂದಿಗೆ, ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಇಂಧನ ಉತ್ಪಾದನೆ ಮತ್ತು ನಗರ ಮೂಲಸೌಕರ್ಯ ನಿರ್ಮಾಣದಲ್ಲಿ ಜೆಎಫ್ಇ (JFE) ಎಂಜಿನಿಯರಿಂಗ್ ಕಾರ್ಪೊರೇಷನ್ನ ಸಾಮರ್ಥ್ಯ ಮತ್ತು ಪ್ರಮುಖ ಯೋಜನೆಗಳನ್ನು ಅರಿಯಲು, ಟೋಕಿಯೊದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಹಿರಿಯ ಆಡಳಿತ ಮಂಡಳಿಯೊಂದಿಗೆ ನಿಯೋಗವು ಸಭೆ ನಡೆಸಲಿದೆ.
