ಮಂಗಳೂರು: ಇಲ್ಲಿನ ಕಣಚೂರು ಮೆಡಿಕಲ್ ಕಾಲೇಜು ಆವರಣದಿಂದ ಹಾಡಹಗಲೇ ಸಿನಿಮೀಯ ಮಾದರಿಯಲ್ಲಿ ಅಪಹರಣಕ್ಕೊಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಪೊಲೀಸರು ಕೇರಳದಲ್ಲಿ ಪತ್ತೆಹಚ್ಚಿ ರಕ್ಷಿಸಿದ್ದಾರೆ.
ಬೇರೆ ಧರ್ಮದ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಸ್ವಂತ ಹೆತ್ತವರು ಹಾಗೂ ಸಂಬಂಧಿಕರೇ ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದು, ಇದೀಗ ರಕ್ಷಿಸಲ್ಪಟ್ಟ ಯುವತಿ “ನನಗೆ ಹೆತ್ತವರೇ ಬೇಡ, ಅವರೊಂದಿಗೆ ಹೋಗುವುದಿಲ್ಲ” ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ.
ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಹಾಗೂ ಬಾಗಲಕೋಟೆ ಮೂಲದ ಮಂಗಳೂರಿನ ಕಾಲೇಜಿನಲ್ಲಿ ಡೆಂಟಲ್ ವ್ಯಾಸಂಗ ಮಾಡುತ್ತಿರುವ ಹಿಂದೂ ಯುವಕನೊಬ್ಬ ಪರಸ್ಪರ ಪ್ರೀತಿಸುತ್ತಿದ್ದರು
ಈ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಯುವತಿಯ ಕುಟುಂಬಸ್ಥರು, ಕಾಲೇಜು ಆವರಣಕ್ಕೆ ನುಗ್ಗಿ ಹಲವು ವ್ಯಕ್ತಿಗಳ ಸಹಾಯದಿಂದ ಆಕೆಯನ್ನು ಬಲವಂತವಾಗಿ ಎಳೆದೊಯ್ದು ‘ಥಾರ್’ ಜೀಪ್ನಲ್ಲಿ ಅಪಹರಿಸಿದ್ದರು. ಈ ಕೃತ್ಯದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಂಗಳೂರು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ನಿನ್ನೆ ರಾತ್ರಿ ಕೇರಳದ ಸಂಬಂಧಿಕರ ಮನೆಯಲ್ಲಿ ವಿದ್ಯಾರ್ಥಿನಿ ಇರುವುದನ್ನು ಪತ್ತೆಹಚ್ಚಿದ ಪೊಲೀಸರು ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿ ಮಂಗಳೂರಿಗೆ ಕರೆತಂದಿದ್ದಾರೆ. ಈ ವೇಳೆ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಯುವತಿ, ಪೋಷಕರೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಬಳಿಕ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಸದ್ಯ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.
ವಿದ್ಯಾರ್ಥಿನಿ ಪ್ರೀತಿಸುತ್ತಿದ್ದ ಬಾಗಲಕೋಟೆ ಮೂಲದ ಡೆಂಟಲ್ ವಿದ್ಯಾರ್ಥಿಯನ್ನು ಪೊಲೀಸರು ಇಂದು ಸಾಂತ್ವನ ಕೇಂದ್ರಕ್ಕೆ ಕರೆಸಲಿದ್ದಾರೆ. ಇಬ್ಬರ ಜೊತೆಗೂ ಮಾತುಕತೆ ನಡೆಸಿ, ವಯಸ್ಕಳಾಗಿರುವ ವಿದ್ಯಾರ್ಥಿನಿಯ ಇಚ್ಛೆಯಂತೆಯೇ ಆಕೆ ಬಯಸಿದ ವ್ಯಕ್ತಿಯೊಂದಿಗೆ ಕಳುಹಿಸಿಕೊಡಲು ಪೊಲೀಸರು ನಿರ್ಧರಿಸಿದ್ದಾರೆ.
ಕಿಡ್ನಾಪ್ ಕೇಸ್:
ವಿದ್ಯಾರ್ಥಿನಿಯನ್ನು ಬಲವಂತವಾಗಿ ಅಪಹರಿಸಿದ ಆರೋಪದ ಮೇಲೆ ಆಕೆಯ ಇಬ್ಬರು ಸಂಬಂಧಿಕರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, “ಯುವತಿ ವಯಸ್ಕಳಾಗಿದ್ದು, ತಾನು ಎಲ್ಲಿ ಮತ್ತು ಯಾರೊಂದಿಗೆ ವಾಸಿಸಬೇಕು ಎಂದು ನಿರ್ಧರಿಸುವ ಸಂಪೂರ್ಣ ಕಾನೂನುಬದ್ಧ ಹಕ್ಕು ಆಕೆಗಿದೆ. ಕುಟುಂಬಸ್ಥರೇ ಆಗಿದ್ದರೂ ಬಲವಂತವಾಗಿ ಕರೆದೊಯ್ಯುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ” ಎಂದು ಸ್ಪಷ್ಟಪಡಿಸಿದ್ದರು.
