– ಜಿಟಿಡಿ ಕ್ರಾಸ್ ವೋಟ್‌ಗೆ ಕಾರಣಗಳೇನು?
ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್‌ನ 7 ಸ್ಥಾನಗಳಿಗೆ ಇಂದು ಚುನಾವಣೆ (Legislative Council Elections) ನಡೆಯುತ್ತಿದ್ದು, ಈಗಾಗಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. 8 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ 4 ಅಭ್ಯರ್ಥಿಗಳ ಆಯ್ಕೆ ದಾರಿ ಸಲೀಸಾಗಿದೆ. ಆದರೆ, ಐದನೇ ಅಭ್ಯರ್ಥಿಯ ಗೆಲುವಿನ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಈ ಮಧ್ಯೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ (GT Deve Gowda) ಅವರು ಪಕ್ಷಕ್ಕೆ ಶಾಕ್ ಕೊಟ್ಟಿದ್ದಾರೆ.
ಏಜೆಂಟ್‌ಗಳಿಗೆ ಖಾಲಿ ಮತಪೆಟ್ಟಿಗೆ ತೋರಿಸಿ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆ ಶಾಸಕ ಜಿ.ಟಿ ದೇವೇಗೌಡ ಅವರು ಮತ ಚಲಾಯಿಸಿದರು. ಬಳಿಕ ವೇದವ್ಯಾಸ ಕಾಮತ್, ಎಸ್.ಆರ್ ವಿಶ್ವನಾಥ್ ಸೇರಿದಂತೆ ಬಿಜೆಪಿ ಶಾಸಕರು ಮತ ಚಲಾಯಿಸಲು ಶುರು ಮಾಡಿದ್ದಾರೆ.

ಜೆಡಿಎಸ್ ಗೆ ಕ್ರಾಸ್ ವೋಟ್ ಭೀತಿ..?
ಮತ ಚಲಾಯಿಸಿದ ಬಳಿಕ ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿದ ಶಾಸಕ ಜಿಟಿಡಿ, ಆತ್ಮಸಾಕ್ಷಿಗೆ ಮತ ಹಾಕಿದ್ದೇನೆ, ಜೆಡಿಎಸ್ ಅಭ್ಯರ್ಥಿ ಗೆಲ್ತಾರೆ ಎಂದಷ್ಟೇ ಹೇಳಿದ್ದಾರೆ. ಆದ್ರೆ ಯಾರಿಗೆ ಮತ ಚಲಾಯಿಸಿದ್ದೇನೆ ಎನ್ನುವ ಗುಟ್ಟನ್ನು ಹಾಗೇ ಉಳಿಸಿಕೊಂಡಿದ್ದಾರೆ. ಇದರಿಂದ ಕ್ರಾಸ್‌ವೋಟ್ ಮಾಡಿದ್ರಾ ಅನ್ನೋ ಭೀತಿ ಜೆಡಿಎಸ್‌ಗೆ ಶುರುವಾಗಿದೆ.
ಜಿಟಿಡಿ ಕ್ರಾಸ್ ವೋಟ್ ಮಾಡಿದ್ದರೆ ಕಾರಣಗಳೇನಿರಬಹುದು?
* 2023 ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ಶಾಸಕರಾಗಿ ಆಯ್ಕೆಯಾದ ಜಿ.ಟಿ ದೇವೇಗೌಡ ಅವರು ಜನತಾದಳ ನಾಯಕರ ನಡೆಯಿಂದ ಬೇಸರಗೊಳ್ಳುತ್ತಲೇ ಬಂದರು.
* ಹೆಚ್.ಡಿ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಪಕ್ಷದ ಸಭೆ ಮಾಡುವಾಗಲೂ ಜಿ.ಟಿ ದೇವೇಗೌಡರು ನಮ್ಮ ಪಕ್ಷದಲ್ಲಿ ಇಲ್ಲ, ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ಕಡ್ಡಿ ತುಂಡಾದಂತೆ ಮಾತನಾಡಿದ್ದರು.
* ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಜೆಡಿಎಸ್ ಸಮಾವೇಶ ನಡೆಸಿದ್ದರೂ ಜಿಟಿಡಿಗೆ ಆಹ್ವಾನ ಇರಲಿಲ್ಲ.
* ಇದರೊಂದಿಗೆ ಜಿಟಿಡಿ ಪುತ್ರ ಶಾಸಕ ಜಿ.ಡಿ ಹರೀಶ್ ಗೌಡ ಅಪ್ಪನಿಂದ ದೂರ ಆಗೋಕೆ ಪಕ್ಷದ ಕೆಲ ನಾಯಕರು ಕಾರಣ ಎಂಬ ನೋವು.
* ಪಕ್ಷದ ಎಲ್ಲಾ ಸಭೆಗಳಿಂದ ದಳಪತಿಗಳು ಜಿಟಿಡಿಯನ್ನು ದೂರ ಇಟ್ಟರು, ಪಕ್ಷದ ಪೋಸ್ಟರ್ ಗಳಿಂದಲೂ ಫೋಟೋಗೆ ಕೊಕ್ ನೀಡಿದ್ರು. ಇದೆಲ್ಲಾ ಕಾರಣ ಬೇಸರಗೊಂಡಿರುವ ಜಿಟಿಡಿ ಪಕ್ಷದ ವಿರುದ್ದವಾಗಿ ಮತ ಚಲಾಯಿಸಿರುವ ಅನುಮಾನ ಇದೆ.

ಯಾವ ಪಕ್ಷದ ಶಾಸಕರ ಸಂಖ್ಯೆ ಎಷ್ಟಿದೆ?
ಒಟ್ಟು ಶಾಸಕರು: 222
ಕಾಂಗ್ರೆಸ್: 135
ಬಿಜೆಪಿ: 62
ಜೆಡಿಎಸ್: 18
ಪಕ್ಷೇತರರು: 2
ಸರ್ವೋದಯ ಪಕ್ಷ: 1
ಬಿಜೆಪಿ ಉಚ್ಚಾಟಿತರು: 3
5ನೇ ಸ್ಥಾನಕ್ಕೆ ಜೆಡಿಎಸ್-ಕಾಂಗ್ರೆಸ್ ನಡುವೆ ಕಾದಾಟ:
7 ಪರಿಷತ್ ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 4, ಬಿಜೆಪಿಗೆ 2 ಸ್ಥಾನಕ್ಕೆ ಯಾವುದೇ ತಲೆನೋವು ಇಲ್ಲ. ಆದರೆ 5ನೇ ಸ್ಥಾನಕ್ಕೆ ಜೆಡಿಎಸ್-ಕಾಂಗ್ರೆಸ್ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಶಾಸಕರನ್ನು ಬಿಡದಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಇತ್ತ ದೇವನಹಳ್ಳಿಯ ಖಾಸಗಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರನ್ನು ಸ್ಥಳಾಂತರಿಸಲಾಗಿದೆ. ಕುಮಾರಸ್ವಾಮಿ ಅಡ್ಡ ಮತದಾನ ಮಾಡದಂತೆ ಶಾಸಕರಿಗೆ ಸೂಚಿಸಿದ್ದಾರೆ.
