ಬಾಗಲಕೋಟೆ: ಕಾಂಗ್ರೆಸ್ ಹೈಕಮಾಂಡ್ (Congress High Command) ನಾಯಕರು ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಹರಿಹಾಯ್ದಿರುವಂತೆ ಹರಿದಾಡುತ್ತಿರುವ ವೈರಲ್ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ(SG Nanjayyanamath) ಸ್ಪಷ್ಟನೆ ನೀಡಿದ್ದಾರೆ.
“ಆಡಿಯೋದಲ್ಲಿ ಮಾತನಾಡಿರುವುದು ನಾನೇ ಆದರೂ, ಅದರಲ್ಲಿ ಹೈಕಮಾಂಡ್ ನಾಯಕರ ವಿರುದ್ಧ ಮಾತನಾಡಿರುವ ಭಾಗವನ್ನು ತಿರುಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತಿಮ್ಮಾಪುರ ಮತ್ತು ನಾನು ಹಳೆಯ ಕಾಂಗ್ರೆಸ್ ಸ್ನೇಹಿತರು. ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಮಾಧಾನ ಹೇಳಲು ಅವರ ಮನೆಗೆ ಹೋಗಿದ್ದೆ. ಅವರು ಮನೆಯಲ್ಲಿ ಇಲ್ಲದ ಕಾರಣ ಫೋನ್‌ನಲ್ಲಿ ಮಾತನಾಡಿದ್ದು ನಿಜ. ಈ ವೇಳೆ ಲೋಕಾರೂಢಿಯಾಗಿ ಮಾತನಾಡುತ್ತಾ ‘ಶೇಕಡಾ 70-80 ರಷ್ಟು ಪೇಮೆಂಟ್ ಶೀಟ್ ಆಗಿದೆ’ ಎಂದು ಜನ ಮಾತನಾಡಿಕೊಳ್ಳುತ್ತಿರುವುದನ್ನು ಪ್ರಸ್ತಾಪಿಸಿದ್ದೆ ಹೊರತು ಹೈಕಮಾಂಡ್ ನಾಯಕರಿಗೆ ಬೈದದ್ದು ನಾನಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಹಣಕ್ಕೆ ಮಂತ್ರಿ ಸ್ಥಾನ ಮಾರಾಟ – ಹೈಕಮಾಂಡ್‌ಗೆ ತಿಮ್ಮಾಪೂರ ನಿಂದನೆ, ಆಡಿಯೋ ವೈರಲ್
ಕಾನೂನು ಹೋರಾಟ:
ನಾನು ಮಾತನಾಡಿರುವ ಆಡಿಯೋದಲ್ಲಿ ಅರ್ಧ ಭಾಗವನ್ನು ಬೇರೆಯದೇ ಧ್ವನಿಯೊಂದಿಗೆ ಸೇರಿಸಿ ತಿರುಚಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಬಗ್ಗೆಯಾಗಲಿ ಅಥವಾ ‘ಪೇಮೆಂಟ್ ಶೀಟ್’ ವಿಚಾರದಲ್ಲಾಗಲಿ ನಾನು ಹೈಕಮಾಂಡ್ ವಿರುದ್ಧ ತಪ್ಪಾಗಿ ಮಾತನಾಡಿಯೇ ಇಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದ್ದು, ಆಡಿಯೋ ಲೀಕ್ ಮಾಡಿದವರು ಯಾರು ಮತ್ತು ಅದನ್ನು ತಿರುಚಿದವರು ಯಾರು ಎಂಬುದು ಹೊರಬರಬೇಕಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಬಾಗಲಕೋಟೆ ಎಸ್‌ಪಿ ಅವರಿಗೆ ದೂರು ನೀಡುತ್ತೇನೆ ಎಂದು ಹೇಳಿದರು.
ಶಾಸಕ ವಿಜಯಾನಂದ ಕಾಶಪ್ಪನವರ್( Vijayananda Kashappanavar) ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ತಪ್ಪಿಸುವ ಪ್ಲಾನ್ ಮಾಡಲಾಗಿತ್ತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಶಪ್ಪನವರ್ ನನ್ನ ವೈರಿಯಲ್ಲ, ಅವರ ವಿರುದ್ಧ ನಾನೇಕೆ ಮಾತನಾಡಲಿ? ಅವರನ್ನು ಜಿಲ್ಲಾ ಉಸ್ತುವಾರಿ ಮಾಡಲು ನಾನೇನು ಸಿಎಂ ಅಥವಾ ಹೈಕಮಾಂಡ್ ನಾಯಕನಲ್ಲ. ಕಾಶಪ್ಪನವರ್ ಅವರ ತಂದೆ ಮತ್ತು ನಾನು ಆಪ್ತ ಗೆಳೆಯರಾಗಿದ್ದೆವು. ಯಾರೋ ಸುಳ್ಳು ಹೇಳಿ ಅವರ ತಲೆ ಕೆಡಿಸಿದ್ದಾರೆ. ಈ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ದೂರು ನೀಡಿದ ಬಳಿಕ ಕೆಪಿಸಿಸಿ ಅಧ್ಯಕ್ಷರು ಹಾಗೂ ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ಸ್ವತಃ ಮಾತನಾಡಿ ವಸ್ತುಸ್ಥಿತಿಯನ್ನು ವಿವರಿಸುವುದಾಗಿ ಅವರು ತಿಳಿಸಿದ್ದಾರೆ.



