ಮಂಡ್ಯ: ಕೆಆರ್‌ಎಸ್ (KRS) ಜಲಾಶಯದಿಂದ ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಹರಿದು ಹೋಗುತ್ತಿದೆ ಎಂಬ ಸ್ಪಷ್ಟ ಮಾಹಿತಿಯೇ ಇಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ (N.Chaluvaraya Swamy) ಮಾತನಾಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇರುವುದರಿಂದ ಲೀಗಲ್ ಟೀಮ್ ನೀರು ಬಿಡುವಂತೆ ಸೂಚಿಸಿದೆ. ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ಕಾರಣಕ್ಕೆ ನೀರು ಹರಿಸಲಾಗುತ್ತಿದೆ. ಆದೇಶ ಬಂದ ದಿನ ಕೇವಲ 2 ಸಾವಿರ ಕ್ಯೂಸೆಕ್ ನೀರು ಹೋಗುತ್ತಿತ್ತು. ನಾನು ಅಧಿಕಾರಿಗಳಿಗೆ 6 ಸಾವಿರ ಕ್ಯೂಸೆಕ್‌ಗಿಂತ ಕಡಿಮೆ ಬಿಡುವಂತೆ ಸೂಚಿಸಿದ್ದೆ. ಸದ್ಯ 6 ಸಾವಿರ ಕ್ಯೂಸೆಕ್ ಕೂಡ ಹೋಗುತ್ತಿಲ್ಲ ಎನಿಸುತ್ತದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಕಾವೇರಿ ಕೊಳ್ಳದ ಜನರಿಗೆ ಮತ್ತೆ ಮತ್ತೆ ಮೋಸ? – ತಮಿಳುನಾಡಿಗೆ 8000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿವು
ಜಲಾಶಯದಿಂದ ಈಗಾಗಲೇ 8 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಮಾಧ್ಯಮಗಳು ಗಮನಕ್ಕೆ ತಂದಾಗ, 8 ಸಾವಿರ ಕ್ಯೂಸೆಕ್ ಹೋಗ್ತಿದೆಯಾ? ನನಗೆ ಗೊತ್ತಿಲ್ಲ. ಈಗಲೇ ಚೆಕ್ ಮಾಡುತ್ತೇನೆ ಎಂದು ಜಾರಿಕೊಂಡರು.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಾರೆ. ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬರದ ಮಧ್ಯೆ ರಾಜ್ಯಕ್ಕೆ ಕಾವೇರಿ ಸಿಡಿಲು; ಮತ್ತೆ 15 ದಿನ ತಮಿಳುನಾಡಿಗೆ 7.5 ಟಿಎಂಸಿ ನೀರು ಹರಿಸಲು ಸೂಚನೆ

