ರಾಂಚಿ: ಜಾರ್ಖಂಡ್‌ನ (Jharkhand) ರಾಮಗಢ (Ramgarh) ಜಿಲ್ಲೆಯಲ್ಲಿ ಉಕ್ಕು ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Factory Fire) ಮೂವರು ಎಂಜಿನಿಯರ್‌ಗಳು (Engineers) ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿ ಹೆಲಾಲ್ ಪ್ರದೇಶದಲ್ಲಿರುವ ಉಕ್ಕು ಕಾರ್ಖಾನೆಯ ಕ್ಯಾಪ್ಟಿವ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿ ಘಟಕದ ಇತರ ಭಾಗಗಳಿಗೂ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದವರ ಜೊತೆ ಸಂಪರ್ಕ ಹೊಂದಿದ್ದ ವ್ಯಕ್ತಿ ಬಂಧನ
ರಾಮಗಢದ ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್ ಕುಮಾರ್ ಲುನಾಯತ್ ಅವರ ಪ್ರಕಾರ, ಘಟನೆಯಲ್ಲಿ ಒಟ್ಟು ನಾಲ್ವರು ಉದ್ಯೋಗಿಗಳು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ವ್ಯಾಪಾರ ಒಪ್ಪಂದ ಮಾತುಕತೆ ವಿಫಲ; ಕೆನಡಾ ಉತ್ಪನ್ನಗಳ ಮೇಲೆ ಯುಎಸ್ 50% ಸುಂಕ
ಮೃತರನ್ನು ಸಂಜೀವ್, ವಿನೀತ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಬರ್ಕಾಕಾನಾ ಪೊಲೀಸ್ ಠಾಣೆಯ ಇನ್‌ಚಾರ್ಜ್ ಉಮಾ ಶಂಕರ್ ವರ್ಮಾ ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ಆರಂಭಿಸಲಾಗಿದ್ದು, ಬೆಂಕಿ ಟರ್ಬೈನ್ ಅಥವಾ ಪವರ್ ಪ್ಲಾಂಟ್‌ನಲ್ಲಿನ ತಾಂತ್ರಿಕ ದೋಷದಿಂದ ಸಂಭವಿಸಿರಬಹುದಾ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಎ ಖಾತಾ ಅರ್ಜಿ ಸಲ್ಲಿಕೆಗೆ ನಾಳೆ ಕೊನೆ ದಿನ – ಅವಧಿ ವಿಸ್ತರಣೆ ಇಲ್ಲ
ಮುಖ್ಯ ಕಾರ್ಖಾನೆ ನಿರೀಕ್ಷಕ ಮನೀಶ್ ಸಿನ್ಹಾ ಮಾತನಾಡಿ, ಕಾರ್ಖಾನೆಯ ಕ್ಯಾಪ್ಟಿವ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲು ಕಾರ್ಖಾನೆ ನಿರೀಕ್ಷಕರು ಹಾಗೂ ಛೋಟಾನಾಗ್ಪುರದ ಡೆಪ್ಯುಟಿ ಚೀಫ್ ಇನ್‌ಸ್ಪೆಕ್ಟರ್ ಒಳಗೊಂಡ ಇಬ್ಬರು ಸದಸ್ಯರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಲಿಂಗಸುಗೂರಲ್ಲಿ ಹೊತ್ತಿ ಉರಿದ ರೇಷ್ಮೆ ಇಲಾಖೆ ಕಟ್ಟಡ – ದಾಖಲೆಗಳು ಭಸ್ಮ
ಅವಘಡ ಸಂಭವಿಸಿದ ವೇಳೆ ಕಾರ್ಖಾನೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ, ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ಘಟಕದಲ್ಲಿ ಸಂಭವಿಸಿದ ತಾಂತ್ರಿಕ ವೈಫಲ್ಯಗಳ ಕುರಿತು ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ. ತನಿಖೆಯ ಬಳಿಕವೇ ಬೆಂಕಿ ಅವಘಡದ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 1 ವರ್ಷ ಕೃತಕ ಪನ್ನೀರ್ ಬ್ಯಾನ್

