ನವದೆಹಲಿ: ಬಂಗಾಳ ಉಪಚುನಾವಣೆ ಹಿನ್ನೆಲೆ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಬಣಗಳ ಹೆಸರು ಮತ್ತು ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.
ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಟಿಎಂಸಿ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ (Mamata All India Trinamool Congress) ಎಂಬ ಹೆಸರನ್ನು ಹಾಗೂ ‘ಫುಟ್‌ಬಾಲ್ ಆಟಗಾರ’ ಚಿಹ್ನೆಯನ್ನ ಚುನಾವಣಾ ಆಯೋಗ ನೀಡಿದೆ.

ಮತ್ತೊಂದೆಡೆ, ಅರೂಪ್ ರಾಯ್ ನೇತೃತ್ವದ ಟಿಎಂಸಿ ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ (Democratic Trinamool Congress) ಎಂಬ ಹೆಸರು ಮತ್ತು ‘ಲಕೋಟೆ’ ಚಿಹ್ನೆಯನ್ನು ನೀಡಲಾಗಿದೆ ಎಂದು ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಿದೆ.
ಗುರುವಾರ (ನಿನ್ನೆ) ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ (Ritabrata Banerjee) ನೇತೃತ್ವದ ಐವರು ಸದಸ್ಯರ ನಿಯೋಗದೊಂದಿಗೆ ಚುನಾವಣಾ ಆಯೋಗ ವಿಚಾರಣೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಿಚಾರಣೆ ಕುರಿತು ಚುನಾವಣಾ ಆಯೋಗವು ರಿತಬ್ರತ ಬ್ಯಾನರ್ಜಿ ಅವರಿಗೆ ಪತ್ರ ಬರೆದು, ನವದೆಹಲಿಯ ನಿರ್ವಾಚನ್ ಸದನ್‌ನಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿತ್ತು. ನಿಮ್ಮ ಐವರು ಸದಸ್ಯರ ನಿಯೋಗದೊಂದಿಗೆ ಸೆ.17ರ ಗುರುವಾರ ನವದೆಹಲಿಯ ಅಶೋಕ ರಸ್ತೆಯಲ್ಲಿರುವ ನಿರ್ವಾಚನ್ ಸದನ್‌ನಲ್ಲಿ ವಿಚಾರಣೆ ನಡೆಸಲು ಆಯೋಗ ನಿರ್ಧರಿಸಿದೆ ಎಂದು ತಿಳಿಸಿತ್ತು.

ಇದಕ್ಕೂ ಮುನ್ನ, ಟಿಎಂಸಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕು ಮಂಡನೆಗೆ ಸಂಬಂಧಿಸಿದ ಪ್ರಕ್ರಿಯೆಯ ಭಾಗವಾಗಿ ಆಯೋಗ ಐವರು ಸದಸ್ಯರ ನಿಯೋಗದೊಂದಿಗೆ ಸಭೆ ನಡೆಸಿತ್ತು. ಈ ನಿಯೋಗದಲ್ಲಿ ರಿತಬ್ರತ ಬ್ಯಾನರ್ಜಿ, ಅಖ್ರುಜ್ಜಮಾನ್, ಅರೂಪ್ ರಾಯ್, ಚಂದ್ರಿಮಾ ಭಟ್ಟಾಚಾರ್ಯ ಮತ್ತು ರಿಜು ದತ್ತಾ ಇದ್ದರು.
ಕಳೆದ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಸೋಲು ಕಂಡ ಬಳಿಕ, ಹೊಸದಾಗಿ ಆಯ್ಕೆಯಾದ 80 ಟಿಎಂಸಿ ಶಾಸಕರ ಪೈಕಿ ಸುಮಾರು 60 ಶಾಸಕರನ್ನ ಒಳಗೊಂಡ ಬಣವು ಮಾಜಿ ಸಿಎಂ ಮಮತಾ ಬ್ಯಾನರ್ಜಿಯಿಂದ ದೂರ ಸರಿದಿದೆ. ಅಲ್ಲದೇ ಟಿಎಂಸಿ ಪಕ್ಷದ ನಿಜವಾದ ಬಣ ತಾವೇ ಎಂದು ಎರಡೂ ಬಣಗಳು ಹಕ್ಕು ಮಂಡಿಸಿವೆ. ಪಕ್ಷದ ಕಾನೂನುಬದ್ಧ ನಾಯಕತ್ವವಾಗಿ ತಮ್ಮನ್ನು ಗುರುತಿಸುವಂತೆ ಕೋರಿ ಎರಡೂ ಬಣಗಳು ಚುನಾವಣಾ ಆಯೋಗವನ್ನ ಸಂಪರ್ಕಿಸಿವೆ.

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಜ್
ಒಂದು ದಿನಕ್ಕೆ ಮುನ್ನ ಪಕ್ಷದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದದ ಹಿನ್ನೆಲೆ ಚುನಾವಣಾ ಆಯೋಗ ʻಟಿಎಂಸಿʼ ಪಕ್ಷದ ಚಿಹ್ನೆ ಹಾಗೂ ಲೋಗೋವನ್ನ ತಾತ್ಕಾಲಿಕವಾಗಿ ತಡೆ ಹಿಡಿದಿತ್ತು. ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITMC) ಹೆಸರಾಗಲಿ, ‘ಹೂವು ಮತ್ತು ಹುಲ್ಲು’ ಚಿಹ್ನೆಯಾಗಲಿ ಯಾವುದೇ ಬಣ ಬಳಸುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿತ್ತು. ಅಲ್ಲದೇ, ಉಪಚುನಾವಣೆ ಮುಗಿಯುವವರೆಗೆ ಪರ್ಯಾಯ ಹೆಸರು, ಚಿಹ್ನೆ ಆಯ್ಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿತ್ತು.

