Wednesday, 13th November 2019

Recent News

ಅನಾಮಧೇಯ ಪ್ರೇಮ ಪತ್ರದಿಂದಾಗಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ

ಮುಂಬೈ: ಅನಾಮಧೇಯ ಪ್ರೇಮ ಪತ್ರದಿಂದಾಗಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪಂಡರಾಪುರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ವಾಖ್ರಿ ಗ್ರಾಮದವಳಾಗಿದ್ದು, ಪಂಡರಾಪುರದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಹಿಂದೆ ಇದ್ದ ಸಹಪಾಠಿಯೊಬ್ಬರು ಅನಾಮಧೇಯ ಪ್ರೇಮ ಪತ್ರ ನೀಡಿದ್ದಾರೆ. ಈ ವೇಳೆ ಅದನ್ನು ನೋಡಿದ ತರಗತಿಯ ಶಿಕ್ಷಕಿ ವಿದ್ಯಾರ್ಥಿನಿಯನ್ನು ನಿಲ್ಲಿಸಿ ಮನಬಂದಂತೆ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಘಟನೆಯಿಂದ ಮನನೊಂದು ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ವಿದ್ಯಾರ್ಥಿಯ ತಂದೆ, ನನಗೆ ಶಾಲೆಯಿಂದ ಫೋನ್ ಬಂದಿತ್ತು. ತಕ್ಷಣವೇ ನಾನು ಶಾಲೆಗೆ ಭೇಟಿ ನೀಡುತ್ತಿದ್ದಂತೆ ಮಗಳು ಅಳುತ್ತಾ ನನ್ನ ಬಳಿಗೆ ಬಂದಳು. ಬಳಿಕ ಶಿಕ್ಷಕಿ ಬಂದು ನಿಮ್ಮ ಮಗಳ ಕೈಯಲ್ಲಿ ಪ್ರೇಮ ಪತ್ರ ಸಿಕ್ಕಿದೆ ಅಂತ ದೂರಿದರು. ನನ್ನ ಮಗಳು ಯಾರನ್ನೂ ಪ್ರೀತಿಸುತ್ತಿಲ್ಲ. ಈ ಪತ್ರವನ್ನು ಆಕೆಗೆ ಯಾರೋ ಬರೆದಿದ್ದಾರೆ ಎಂದು ತಿಳಿಸಿ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದೆ ಎಂದರು.

ತರಗತಿ ಹಾಗೂ ಶಾಲೆಯಲ್ಲಿ ಆದ ಘಟನೆಯಿಂದ ಮಗಳು ಮುಜುಗುರಕ್ಕೆ ಒಳಗಾಗಿದ್ದಳು. ಇದರಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿದ್ದಾರೆ.

ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೃತ ವಿದ್ಯಾರ್ಥಿನಿ ಪೋಷಕರು ಹಾಗೂ ವಾಖ್ರಿ ಗ್ರಾಮಸ್ಥರು ಪಂಡರಾಪುರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಶಿಕ್ಷಕಿಯ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *