ನವದೆಹಲಿ: ಮಹಾದೇವ್ ಆ್ಯಪ್ ಮೂಲಕ ನಡೆಯುತ್ತಿದ್ದ ಅಕ್ರಮ ಬೆಟ್ಟಿಂಗ್ ಜಾಲದ ಕಿಂಗ್ಪಿನ್ ಸೌರಭ್ ಚಂದ್ರಕರ್ನನ್ನ ಓಮನ್ನಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಭಾನುವಾರ ತಿಳಿಸಿದೆ.
ಸೋಮವಾರ (ನ.2 ರಂದು) ಆತನನ್ನ ಛತ್ತೀಸ್ಗಢದ ರಾಯ್ಪುರದಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಸಿಬಿಐ ಹಾಜರುಪಡಿಸಲಾಗುತ್ತದೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ – ತುಮಕೂರು ಮೂಲದ ಇಬ್ಬರ ಪಾರ್ಥಿವ ಶರೀರ ಇಂದು ರಾತ್ರಿ ರಾಜ್ಯಕ್ಕೆ, ನಾಳೆ ಅಂತ್ಯಕ್ರಿಯೆ
ಮಹದೇವ್ ಆ್ಯಪ್ ಬೆಟ್ಟಿಂಗ್ ಕೇಸ್ ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್ ಕುಮಾರ್ ನನ್ನು ಬಂಧಿಸಿದ ಒಂದು ತಿಂಗಳ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ. ದುಬೈನಿಂದ ಬಂದಿದ್ದ ಅಭಿಷೇಕ್ನನ್ನ ಹೈದರಾಬಾದ್ನ ರಾಜೀವ್ ಗಾಂಧಿ ಏರ್ಪೋರ್ಟ್ನಲ್ಲೇ ಬಂಧಿಸಲಾಗಿತ್ತು.
ಸಿಬಿಐ ಮೂಲಗಳ ಪ್ರಕಾರ, ಕಿಂಗ್ಪಿನ್ ಚಂದ್ರಕರ್ ವಿರುದ್ಧ ಈಗಾಗಲೇ ಎರಡು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ದಾಖಲಾಗಿದೆ. ಜೊತೆಗೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು, ಪ್ರಾಸಿಕ್ಯೂಷನ್ ಹಂತದಲ್ಲಿದೆ. ದೇಶದಿಂದ ಪರಾರಿಯಾಗಿ ಹೊರಗಿನಿಂದ ಕಾರ್ಯಾಚರಣೆ ನಡೆಸುವ ಆರೋಪಿಗಳ ವಿರುದ್ಧದ ಹೋರಾಟದಲ್ಲಿ, ಚಂದ್ರಕರ್ನನ್ನ ಭಾರತಕ್ಕೆ ಕರೆತಂದಿರುವುದು ಒಂದು ಮೈಲಿಗಲ್ಲು ಎಂದು ಸಿಬಿಐ ಬಣ್ಣಿಸಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಅನಧಿಕೃತ ವಿಪಕ್ಷ ನಾಯಕ – `ಇಂಡಿಯಾ’ ರ್ಯಾಲಿ ಫ್ಲಾಪ್ ಶೋ ಎಂದ ಬಿಜೆಪಿ
ಮುಂದುವರಿದು… ‘ಮಹಾದೇವ್ ಆನ್ಲೈನ್ ಬುಕ್’ ದೇಶದ ಅತಿದೊಡ್ಡ ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲಗಳಲ್ಲಿ ಒಂದಾಗಿದೆ. ಈ ಜಾಲವನ್ನು ಭಾರತದ ಹೊರಗಿನಿಂದ ನಿರ್ವಹಿಸಲಾಗುತ್ತಿತ್ತು. ದೇಶದ ವಿವಿಧ ಭಾಗಗಳಲ್ಲಿ ಹರಡಿರುವ ಫ್ರಾಂಚೈಸಿಗಳು ಮತ್ತು ಶಾಖೆಗಳ ಮೂಲಕ ಕ್ರಿಕೆಟ್, ಫುಟ್ಬಾಲ್, ಇಸ್ಪೀಟು ಸೇರಿದಂತೆ ವಿವಿಧ ಆಟಗಳು ಹಾಗೂ ಸ್ಪರ್ಧೆಗಳ ಮೇಲೆ ಹಣ ಪಣಕ್ಕಿಡಲು ಈ ವೇದಿಕೆ ಅವಕಾಶ ಕಲ್ಪಿಸಿತ್ತು. ಈ ಶಾಖೆಗಳು ಬಳಕೆದಾರರನ್ನು ನೋಂದಾಯಿಸಿಕೊಳ್ಳುವುದರ ಜತೆಗೆ ಅವರಿಂದ ಬೆಟ್ಟಿಂಗ್ ಹಣವನ್ನು ಸಂಗ್ರಹಿಸುತ್ತಿದ್ದವು. ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳಿಂದ ಸಂಗ್ರಹವಾದ ಹಣವನ್ನು ಇತರರ ಹೆಸರಿನಲ್ಲಿ ತೆರೆಯಲಾಗಿದ್ದ ಹಲವು ಮ್ಯೂಲ್ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಲಾಗುತ್ತಿತ್ತು. ಬಳಿಕ ಹಲವು ಹಂತಗಳ ವಹಿವಾಟುಗಳ ಮೂಲಕ ಹಣದ ಮೂಲವನ್ನು ಮರೆಮಾಚಿ, ಹವಾಲಾ ಮಾರ್ಗಗಳ ಮೂಲಕ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು. ಈ ಅಕ್ರಮ ಹಣದ ಒಂದು ಭಾಗವನ್ನು ಸರ್ಕಾರಿ ಅಧಿಕಾರಿಗಳಿಗೆ ಲಂಚ ಅಥವಾ ರಕ್ಷಣಾ ಹಣದ ರೂಪದಲ್ಲಿ ನೀಡಲಾಗುತ್ತಿತ್ತು. ಇದರಿಂದ ಬೆಟ್ಟಿಂಗ್ ಜಾಲವು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿತ್ತು ಎನ್ನಲಾಗಿದೆ.

