Districts
ತಂದೆಯ ಸಮಾಧಿಗೆ ವಿಶೇಷ ಪೂಜೆ ನೆರವೇರಿಸಿದ ಪುತ್ರ ಮಧು ಬಂಗಾರಪ್ಪ

ಶಿವಮೊಗ್ಗ: ವರ್ಣರಂಜಿತ ರಾಜಕಾರಣಿ, ಸೋಲಿಲ್ಲದ ಸರದಾರ, ಮಾಜಿ ಸಿಎಂ ದಿ. ಎಸ್. ಬಂಗಾರಪ್ಪನವರು ನಮ್ಮನ್ನಗಲಿ ಇಂದಿಗೆ ಬರೋಬ್ಬರಿ 8 ವರ್ಷವೇ ಕಳೆಯಿತು. ಇದರ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬಂಗಾರಧಾಮದಲ್ಲಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.
8ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿ. ಎಸ್. ಬಂಗಾರಪ್ಪ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ ತಮ್ಮ ತಂದೆಯ ಸಮಾಧಿಗೆ ವಿಶೇಷ ಪೂಜೆ ನೆರವೇರಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಇಂದು ಗ್ರಹಣ ದಿನವಾದ ಹಿನ್ನೆಲೆಯಲ್ಲಿ ಗ್ರಹಣ ಮೋಕ್ಷಕಾಲ ಸಂಪನ್ನಗೊಂಡ ನಂತರ ಮಧು ಬಂಗಾರಪ್ಪ ಸಮಾಧಿಗೆ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಸೊರಬದ ತಮ್ಮ ನಿವಾಸದಲ್ಲಿ ಮಧು ಅವರು ತಮ್ಮ ತಂದೆ ಬಂಗಾರಪ್ಪ ಮತ್ತು ತಾಯಿ ಶಕುಂತಲಾ ಬಂಗಾರಪ್ಪ ಭಾವಚಿತ್ರಗಳಿಗೆ ವಿಶೇಷ ಪೂಜೆ ನೆರವೇರಿಸಿದರು.
ಈ ವೇಳೆ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ, ಪುತ್ರ ಸೂರ್ಯ ಬಂಗಾರಪ್ಪ, ಬಂಗಾರಪ್ಪ ಅವರ ಅಳಿಯ ಭೀಮಣ್ಣ ನಾಯ್ಕ್, ಸ್ಥಳೀಯ ಮುಖಂಡರಾದ, ಗಣಪತಿ, ಅಜ್ಜಪ್ಪ ನಾಯ್ಕ್ ಸೇರಿದಂತೆ, ನೂರಾರು ಮಂದಿ ಬಂಗಾರಪ್ಪನವರ ಅಭಿಮಾನಿಗಳು ಉಪಸ್ಥಿತರಿದ್ದರು.
