Connect with us

International

ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ

Published

on

ಲಂಡನ್: ಕಳೆದ ಬುಧವಾರ ಜನಿಸಿದ ತನ್ನ ಗಂಡು ಮಗುವಿಗೆ ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ವೈದ್ಯರ ಹೆಸರನ್ನು ಇಟ್ಟಿದ್ದಾರೆ.

ಇತ್ತೀಚೆಗೆ ಬೋರಿಸ್ ಜಾನ್ಸನ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ವೇಳೆ ಅವರಿಗೆ ಚಿಕತ್ಸೆ ನೀಡಿದ ಇಬ್ಬರು ವೈದ್ಯರ ಹೆಸರನ್ನು ತನ್ನ ಮಗುವಿಗೆ ಇಟ್ಟಿದ್ದಾರೆ. ಈ ಮೂಲಕ ತನ್ನ ಜೀವ ಉಳಿಸಿದ ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಗೌರವ ಸಲ್ಲಿಸಿದ್ದಾರೆ.

ಬುಧವಾರ ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಸೈಮಂಡ್ಸ್ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಚಾರವಾಗಿ ಶನಿವಾರ ತಮ್ಮ ಇನ್‍ಸ್ಟಗ್ರಾಮ್‍ನಲ್ಲಿ ಮಗು ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಕ್ಯಾರಿ ಸೈಮಂಡ್ಸ್, ನನ್ನ ಮಗುವಿಗೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಡಿಲಾಗಿದೆ. ವಿಲ್ಫ್ರೆಡ್ ಬೋರಿಸ್ ಅವರ ತಾತನ ಹೆಸರು, ಲಾರಿ ನನ್ನ ತಾತನ ಹೆಸರು, ನಿಕೋಲಸ್ ಎಂಬುದು ಕೊರೊನಾದಿಂದ ಬೋರಿಸ್ ಅನ್ನು ಗುಣಪಡಿಸಿದ ವೈದ್ಯರ ಹೆಸರು ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ತುತ್ತಾಗಿದ್ದ ಬೋರಿಸ್ ಜಾನ್ಸನ್ ಅವರಿಗೆ ವೈದ್ಯರಾದ ನಿಕೋಲಸ್ ಪ್ರೈಸ್ ಮತ್ತು ನಿಕೋಲಸ್ ಹಾರ್ಟ್ ಚಿಕಿತ್ಸೆ ನೀಡಿದ್ದರು. ಇವರಿಗೆ ಗೌರವ ಸೂಚಿಸಲು ಅವರ ಮಗನ ಹೆಸರಿನಲ್ಲಿ ನಿಕೋಲಸ್ ಎಂದು ಬಳಸಲಾಗಿದೆ. ಜೊತೆಗೆ ಕ್ಯಾರಿ ಸೈಮಂಡ್ಸ್ ತನ್ನ ಗಂಡನ ಪ್ರಾಣವನ್ನು ಉಳಿಸಿದ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಮಗು ಹುಟ್ಟುವುದಕ್ಕಿಂತ ಒಂದು ವಾರದ ಹಿಂದೆಯಷ್ಟೇ ಬೋರಿಸ್ ಗುಣಮುಖರಾಗಿ ಆಸ್ಪತ್ರೆಗೆಯಿಂದ ಡಿಸ್ಚಾರ್ಜ್ ಆಗಿದ್ದರು.

ಈ ವಿಚಾರವಾಗಿ ಮಾತನಾಡಿರುವ ವೈದ್ಯರು, ಚಿಕಿತ್ಸೆ ನೀಡಿದಕ್ಕೆ, ನಮ್ಮ ಪ್ರಧಾನಿಗಳು ನಮಗೆ ಈ ರೀತಿಯ ಗೌರವ ಸಲ್ಲಿಸಿದ್ದಕ್ಕೆ ಹೆಮ್ಮೆ ಇದೆ. ಅವರ ಕುಟುಂಬದ ಮುಂದಿನ ಜೀವನ ಚೆನ್ನಾಗಿರಲಿ. ನಾವು ಈ ಗೌರವವನ್ನು ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಅರ್ಪಣೆ ಮಾಡುತ್ತೇವೆ. ಜೊತೆಗೆ ಪ್ರಧಾನಿ ಬೋರಿಸ್ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ತಿಳಿಸಿದ್ದಾರೆ.

ಮಾರ್ಚ್ 27ರಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮೊದಲಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ವೈರಸ್ ನ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದರು.

Click to comment

Leave a Reply

Your email address will not be published. Required fields are marked *