Connect with us

Bellary

ಜಿಲ್ಲಾಧಿಕಾರಿ ಆದೇಶ ಗಾಳಿಗೆ ತೂರಿದ ಜಿಂದಾಲ್

Published

on

ಬಳ್ಳಾರಿ: ಮಹಾಮಾರಿ ಕೊರೊನಾ ತಡೆಗಾಗಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಜಿಂದಾಲ್ ಕಂಪನಿ ಗಾಳಿಗೆ ತೂರಿದೆ.

ಜಿಲ್ಲೆಗೆ ಮಾರಕ ಆಗಿರುವ ಜಿಂದಾಲ್ ನೌಕರರು ಬೇರೆ ಕಡೆಗೆ ಸಂಚಾರ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಟೌನ್‍ಶಿಪ್ ಲಾಕ್ ಡೌನ್ ಮಾಡುವಂತೆ ಬಳ್ಳಾರಿ ಜಿಲ್ಲಾಡಳಿತ ಆದೇಶ ಮಾಡಿದೆ. ಈ ಮೂಲಕ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಆದೇಶ ಅನ್ವಯ ಜಿಂದಾಲ್ ಟೌನ್‍ಶಿಪ್ ನಲ್ಲಿರುವ ಉದ್ಯೋಗಿಗಳಿಂದ ಮಾತ್ರ ಕಂಪನಿ ನಡೆಸುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಆದ್ರೆ ಜಿಲ್ಲಾಡಳಿತದ ಆದೇಶಕ್ಕಿಲ್ಲಿ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ಆದೇಶ ಮೀರಿ ಜಿಂದಾಲ್ ನ ಇಸಿಪಿಎಲ್ ಸಿಬ್ಬಂದಿ ಕೆಲಸಕ್ಕೆ ಹೋಗುವುದು ಬರುವುದು ಮಾಡುತ್ತಿದ್ದಾರೆ. ಜಿಂದಾಲ್ ನಲ್ಲಿ 178 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಬಳ್ಳಾರಿ ಜಿಲ್ಲಾಡಳಿತದಿಂದ ಜಿಂದಾಲ್ ಲಾಕ್‍ಡೌನ್ ಮಾದರಿ ಅನುಸರಿಸಲು ಆದೇಶ ಮಾಡಿತ್ತು. ಜಿಂದಾಲ್ ಸುತ್ತಲಿನ ವಾಸವಾಗಿರುವ ಕಾರ್ಮಿಕರು ಟೌನ್‍ಶಿಪ್ ಹೊರತುಪಡಿಸಿ ಬೇರೆ ಗ್ರಾಮದ ಕಾರ್ಮಿಕರು ಯಾರೂ ಹೊರ ಹೋಗಬಾರದು, ಒಳ ಬರಬಾರದೆಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದ್ರೆ ಜಿಲ್ಲಾಡಳಿತದ ಆದೇಶ ಮೀರಿ ಜಿಂದಾಲ್ ಕಾರ್ಮಿಕರು ಕಾರ್ಖಾನೆಗೆ ಬರುತ್ತಿದ್ದಾರೆ.

ಲಾಕ್‍ಡೌನ್ ಪ್ರದೇಶದಿಂದ ಹೊರಗಡೆಯಿಂದ ಒಳಗಡೆ, ಒಳಗಡೆಯಿಂದ ಹೊರಗಡೆ ಹೋಗರಬಾರದೆಂಬ ನಿಯಮ ಕೇವಲ ಆದೇಶ ಸೀಮಿತವಾಯ್ತಾ ಅನ್ನುವ ಅನುಮಾನ ಕಾಡುತ್ತಿದೆ. ರಾಜಾರೋಷವಾಗಿ ಸಂಡೂರು ತಾಲೂಕಿನ ಸುಲ್ತಾನಪುರದ ಬಳಿ ಇರೋ ಇಸಿಪಿಎಲ್ ಗೇಟಿನಿಂದ ಕಾರ್ಮಿಕರು ಒಳ ಪ್ರವೇಶ ಮಾಡುತ್ತಿದ್ದಾರೆ. ಸುಮಾರು 35 ಸಾವಿರ ಜನರು ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದಾಗಿ ಜಿಂದಾಲ್ ಹೇಳಿಕೊಂಡಿತ್ತು. ಅಲ್ಲದೇ ಟೌನ್‍ಶಿಪ್ ನಲ್ಲಿ ಇರುವ 3,500 ಕಾರ್ಮಿಕರಿಂದ ಮಾತ್ರ ಕಂಪನಿ ನಡೆಸುವುದಾಗಿ ಹೇಳಿಕೊಂಡಿತ್ತು. ಇಂದು ಕಂಪನಿಯ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.