ಮಂಡ್ಯ: ರಾಜ್ಯದಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ಹಳೇ ಮೈಸೂರು ಭಾಗದ ಜನರಿಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟಿನ (KRS Dam) ನೀರಿನ ಮಟ್ಟವು 90 ಅಡಿಗೆ ಕುಸಿದಿರುವುದು ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ.
124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಜಲಾಶಯದಲ್ಲಿ ಈಗ 90 ಅಡಿ ನೀರು ಸಂಗ್ರಹವಿದೆ. ಒಟು 16 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ ಡೆಡ್ ಸ್ಟೋರೇಜ್ (ಬಳಸಲಾಗದ ನೀರು) 7 ಟಿಎಂಸಿ ಇದ್ದು ಕೇವಲ 9 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ.

ಸವಾಲುಗಳೇನು?
ಲಭ್ಯವಿರುವ ಕೇವಲ 9 ಟಿಎಂಸಿ ನೀರನ್ನು ಹಂಚಿಕೆ ಮಾಡುವುದು ಈಗ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬೆಂಗಳೂರು, ಮೈಸೂರು ಮತ್ತು ಮಂಡ್ಯ ನಗರಗಳ ಕುಡಿಯುವ ನೀರಿನ ಪೂರೈಸುವುದರ ಜೊತೆಗೆ ಮಂಡ್ಯ ಭಾಗದ ರೈತರು ಬೆಳೆದಿರುವ ಬೆಳೆಗಳ ರಕ್ಷಣೆಗಾಗಿ ನೀರಿನ ಹರಿಸಬೇಕಾಗುತ್ತದೆ. ಇದರೊಂದಿಗೆ ತಮಿಳುನಾಡಿಗೆ ಪ್ರತಿ ತಿಂಗಳ ಕೋಟಾದ ಪ್ರಕಾರ ನೀರು ಬಿಡಬೇಕಿದೆ. ಇದನ್ನೂ ಓದಿ: ಅಡುಗೆ ಎಣ್ಣೆ ಬಳಕೆ ಮಿತಿಗೊಳಿಸಲು ಮೋದಿ ಕರೆ ಬೆನ್ನಲ್ಲೇ ಎಣ್ಣೆ ದರ ಇಳಿಕೆ – ಅಕ್ಕಿ ರೇಟ್ ಏರಿಕೆ
ಕ್ಯುಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯುಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯುಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯುಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

