– 2 ಲಕ್ಷ ಮೂಲಬೆಲೆ ಹೊಂದಿದ್ದ ರಾಹುಲ್ ಅನ್‌ಸೋಲ್ಡ್‌ಗೆ ಕಾರಣವೇನು?
ಬೆಂಗಳೂರು: ಕರ್ನಾಟಕದ ʻಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ʼ ಟೂರ್ನಿಗೆ (Maharaja Trophy KSCA T20) ನಡೆದ ಹರಾಜಿನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅನ್‌ಸೋಲ್ಡ್ ಆಗಿದ್ದಾರೆ.
2 ಲಕ್ಷ ರೂ. ಮೂಲಬೆಲೆ ಹೊಂದಿದ್ದ ರಾಹುಲ್ ಅವರನ್ನ ಖರೀದಿಸಲು ಯಾವ ತಂಡವೂ ಮುಂದಾಗಿಲ್ಲ. ಐಪಿಎಲ್‌ನಲ್ಲಿ (IPL) 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದ ಅವರು ಟೂರ್ನಿಯುದ್ದಕ್ಕೂ ತಮ್ಮ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದರು. ಅದರ ಹೊರತಾಗಿಯೂ ಅವರು ಸ್ಥಳೀಯ ಟಿ20 ಲೀಗ್‌ನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ. ಇದಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಸಹಜವಾಗಿಯೇ ಅಭಿಮಾನಿಗಳಲ್ಲಿ (Fans) ಮೂಡಿದೆ.

2026ರ ಮಹಾರಾಜ ಟ್ರೋಫಿಯ (Maharaja Trophy) ಪಂದ್ಯಾವಳಿ ಜೂನ್ 20 ರಿಂದ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಕೆ.ಎಲ್ ರಾಹುಲ್ ಅವರು ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಹಾಗೂ ಏಕದಿನ ತಂಡದ ಭಾಗವಾಗಿರುವುದರಿಂದ ಅವರು ಸ್ಥಳೀಯ ಟೂರ್ನಿಗೆ ಲಭ್ಯವಿಲ್ಲ. ಹಾಗಾಗಿ ಫ್ರಾಂಚೈಸಿಗಳು ರಾಹುಲ್ ಅವರಿಗೆ ಬಿಡ್ ಮಾಡಲು ಮುಂದಾಗಿಲ್ಲ.
ಕೆ.ಎಲ್ ರಾಹುಲ್ ಅವರು ಜೂನ್ 20 ರಂದು ನಡೆಯುವ ಅಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇತ್ತ ರಾಹುಲ್ ಭಾರತದ ಟಿ20ಐ ತಂಡದಲ್ಲಿಲ್ಲದ ಕಾರಣ ಅವರು ಜುಲೈ 14 ರಂದು ಇಂಗ್ಲೆಂಡ್ ಪ್ರವಾಸದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಮಹಾರಾಜ ಟ್ರೋಫಿ ಪಂದ್ಯಾವಳಿ ಜುಲೈ 12ರ ವರೆಗೆ ನಡೆಯುತ್ತದೆ. ಹೀಗಾಗಿ ರಾಹುಲ್ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಏಕದಿನ ತಂಡದ ಭಾಗವಾಗಿರುವುದರಿಂದ ಮಹಾರಾಜ ಟ್ರೋಫಿಗೆ ಅವರು ಲಭ್ಯರಾಗುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದ್ದರಿಂದ ಯಾವುದೇ ಫ್ರಾಂಚೈಸಿಗಳು ಖರೀದಿಗೆ ಮುಂದಾಗಿಲ್ಲ ಎನ್ನಲಾಗಿದೆ.
ಇನ್ನೂ ಹರಾಜಿನಲ್ಲಿ ಕರ್ನಾಟಕದ ಅನುಭವಿ ಆಟಗಾರ ಕರುಣ್ ನಾಯರ್ ಮತ್ತು ಮನೀಶ್ ಪಾಂಡೆ ದಾಖಲೆಯ ಮೊತ್ತಕ್ಕೆ ಖರೀದಿಯಾದರು. ಮಂಗಳೂರು ಡ್ರ್ಯಾಗನ್ಸ್ ತಂಡವು ಕರುಣ್ ನಾಯರ್‌ರನ್ನು 18 ಲಕ್ಷ ರೂ.ಗೆ ಖರೀದಿಸಿದೆ. ಗುಲ್ಬರ್ಗ ಮಿಸ್ಟಿಕ್ಸ್ ತಂಡ ಮನೀಶ್ ಪಾಂಡೆ ಅವರನ್ನ 12.75 ಲಕ್ಷಕ್ಕೆ ಖರೀದಿಸಿದೆ.
ಕರ್ನಾಟಕದ ಇನ್ನಿಬ್ಬರು ಆಟಗಾರರಾದ ದೇವದತ್ ಪಡಿಕ್ಕಲ್ ಹಾಗೂ ಪ್ರಸಿದ್ಧ್ ಕೃಷ್ಣ ಅವರು ಅತ್ಯಂತ ಕಡಿಮೆ ಮೊತ್ತಕ್ಕೆ ಮಾರಾಟವಾದರು.
