– ಉನ್ನತ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಲು ಸಿದ್ಧತೆ
– 50 ಭಕ್ತರಿಗಷ್ಟೇ ಭಾಗವಹಿಸಲು ಅವಕಾಶ
ಚೆನ್ನೈ: ಸುಪ್ರೀಂ ಕೋರ್ಟ್ನ (Supreme Court) ನಿರ್ದೇಶನದಂತೆ ತಮಿಳುನಾಡಿನ ತಿರುಪ್ಪರಂಕುಂದ್ರಂನಲ್ಲಿರುವ (Thiruparankundram Hill) ದೀಪತ್ತೂನ್ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲಿದೆ. ದೀಪ ಬೆಳಗಿಸಲು ಕ್ಷಣಗಣನೆ ಬಾಕಿಯಿದ್ದು, ಉನ್ನತ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ನ್ಯಾಯಾಧೀಶರು ಮತ್ತು ಎಎಸ್ಐ ಅವರ ಸಮ್ಮುಖದಲ್ಲಿ ದೀಪ ಬೆಳಗಿಸಲು ಸಕಲ ತಯಾರಿ ಆಗಿದೆ.
ಮತ್ತೊಂದು ಕಡೆ ಬೆಟ್ಟದಲ್ಲಿ ಯಾವುದೇ ಅವಘಡ ನಡೆಯದಂತೆ ಮುನ್ನೆಚ್ಚರಿಕೆಗಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದ್ರೆ ಇಂದು ಏಕಾಏಕಿ ಮುಸ್ಲಿಮರ (Muslims) ದಂಡು ಪಕ್ಕದಲ್ಲಿನ ಸಿಕಂದರ್ ದರ್ಗಾಕ್ಕೆ ದೌಡಾಯಿಸಿ ಕುತೂಹಲ ಮೂಡಿಸಿದೆ.
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಒಂದು ಕಡೆ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಮತ್ತು ಮತ್ತೊಂದು ಕಡೆ ಹಜರತ್ ಸುಲ್ತಾನ್ ಸಿಕಂದರ್ ಬಾದ್ಷಾ ಔಲಿಯಾ ದರ್ಗಾ ಇದೆ. ಇಂದು ಕಾರ್ತಿಕ ದೀಪ ಬೆಳಗಿಸುವ ಮುನ್ನ ಸ್ಥಳೀಯರು ಮತ್ತು ನೆರೆಯ ಕೇರಳದ ಯಾತ್ರಿಕರು ಸೇರಿದಂತೆ 100 ಕ್ಕೂ ಹೆಚ್ಚು ಮುಸ್ಲಿಂ ಸಂದರ್ಶಕರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಬೆಟ್ಟಕ್ಕೆ ಬಂದಿದ್ದಾರೆ. ಬೆಳಗ್ಗೆ 6:15ರ ಸುಮಾರಿಗೆ ಬೆಟ್ಟದ ತಪ್ಪಲಿನಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ದರ್ಗಾಕ್ಕೆ ಭೇಟಿ ನೀಡಿದ್ದಾರೆ.
ಈ ದರ್ಗಾವು ಸಕ್ರಿಯ ಸೂಫಿ ದರ್ಗಾ ಮತ್ತು ಮಸೀದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಭದ್ರತೆ ಮತ್ತು ನಿರ್ಬಂಧಗಳನ್ನ ವಿಧಿಸಲಾಗಿದ್ದರೂ, ಭದ್ರತಾ ತಪಾಸಣೆ ಮತ್ತು ಅವರ ವಿವರಗಳ ಪರಿಶೀಲನೆಯ ನಂತರ ಮುಸ್ಲಿಂ ಭಕ್ತರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲಾಯಿತು.
CRPF ಸಿಬ್ಬಂದಿಗೆ ಪುಷ್ಪವೃಷ್ಟಿ
ಇನ್ನೂ ಕಾರ್ತಿಕ ದೀಪ ಕಾರ್ಯಕ್ರಮದ ಹಿನ್ನೆಲೆ ಬೆಟ್ಟದಲ್ಲಿ ಭದ್ರತೆ ನೀಡಲು ಬಂದಿರುವ ಸಿಆರ್ಪಿಎಫ್ ಸಿಬ್ಬಂದಿಯನ್ನ ಸ್ಥಳೀಯ ಹಿಂದೂಗಳು ಹೂವಿನ ಮಳೆಗೈದು ಸ್ವಾಗತಿಸಿದ್ದಾರೆ.
50 ಭಕ್ತರಿಗೆ ಭಾಗವಹಿಸಲು ಅವಕಾಶ
ಇನ್ನೂ ಈ ಐತಿಹಾಸಿಕ ಕಾರ್ತಿಕ ದೀಪ ಸಂದರ್ಭದಲ್ಲಿ ಭಾಗವಹಿಸಲು 50 ಭಕ್ತರಿಗಷ್ಟೇ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

