– ಆಪ್ತರ ದಂಡಿನೊಂದಿಗೆ ಸಿಎಂ ದೆಹಲಿಗೆ
– ವಿಮಾನ ಹತ್ತೋ ಮುನ್ನ ಅಜ್ಜಯ್ಯನ ಆಶೀರ್ವಾದ ಪಡೆದ ಡಿಕೆಶಿ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ಹೈವೋಲ್ಟೇಜ್ ಕುರ್ಚಿ ಕದನ ಈಗ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಹೈಕಮಾಂಡ್ ತುರ್ತು ಬುಲಾವ್ ನೀಡಿರುವ ಒಂದೇ ವಿಷಯದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾವೇರಿ ನಿವಾಸದಿಂದ ನೇರವಾಗಿ ಹೆಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರೆ ಶಿವಕುಮಾರ್ ಅವರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸಿದ್ದಾರೆ.
ಹೈಕಮಾಂಡ್ ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ ಆಹ್ವಾನ ನೀಡಿದ್ದರೂ, ಸಿಎಂ ತಮ್ಮ ಜೊತೆ ಆಪ್ತ ಸಚಿವರ ಇಡೀ ದಂಡನ್ನೇ ದೆಹಲಿಗೆ ಕರೆದೊಯ್ದಿದ್ದಾರೆ. ಸಚಿವರಾದ ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಎಚ್.ಸಿ. ಮಹದೇವಪ್ಪ, ಬೈರತಿ ಸುರೇಶ್, ಕೆ.ಜೆ. ಜಾರ್ಜ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸಿಎಂ ಜೊತೆಯಲ್ಲೇ ಪ್ರಯಾಣ ಬೆಳೆಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಈಗಾಗಲೇ ದೆಹಲಿ ತಲುಪಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ತುರ್ತು ಬುಲಾವ್‌ಗೆ ಸಿಎಂ ತಂತ್ರಗಾರಿಕೆ
ಹೈಕಮಾಂಡ್ ಮುಂದೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ಸಿದ್ದರಾಮಯ್ಯ, ಒಂದು ವೇಳೆ ನಾಯಕತ್ವ ಬದಲಾವಣೆಯ ಪ್ರಸ್ತಾಪ ಬಂದರೆ ಈ ಹಿರಿಯ ಸಚಿವರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಲು ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಹೈಕಮಾಂಡ್ ಎದುರು ಸಿಎಂ ನಡೆಸುತ್ತಿರುವ ಪರೋಕ್ಷ ‘ಶಕ್ತಿ ಪ್ರದರ್ಶನ’ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ದೆಹಲಿ ವಿಮಾನ ಹತ್ತುವ ಮುನ್ನ ಗೃಹ ಸಚಿವ ಜಿ. ಪರಮೇಶ್ವರ್ ಅವರು ತಮ್ಮ ನಿವಾಸದಲ್ಲಿ ವಿಶೇಷ ಹೋಮ-ಹವನ ನಡೆಸಿರುವುದು ಭಾರೀ ಕುತೂಹಲ ಮೂಡಿಸಿದೆ.
ಒಂದೇ ದಿನ 2 ಬಾರಿ ದರ್ಶನ: ದೇವನಹಳ್ಳಿಯ ರೆಸಾರ್ಟ್‌ನಲ್ಲಿದ್ದ ಡಿಕೆಶಿ ಅಲ್ಲಿಂದ ತುರ್ತಾಗಿ ತುಮಕೂರಿನ ನೋಣವಿನಕೆರೆಗೆ ತೆರಳಿ ತಮ್ಮ ಆರಾಧ್ಯ ದೈವ ‘ಅಜ್ಜಯ್ಯ’ನ ಪಾದುಕೆಗಳ ದರ್ಶನ ಪಡೆದರು. ಒಂದೇ ದಿನದಲ್ಲಿ ಇದು ಅವರು ಪಡೆದ 2ನೇ ದರ್ಶನವಾಗಿದೆ.
ಅಜ್ಜಯ್ಯನ ಆಶೀರ್ವಾದ ಪಡೆದು ಸದಾಶಿವನಗರ ನಿವಾಸಕ್ಕೆ ಮರಳಿದ ಡಿಸಿಎಂ, ಸಂಜೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟರು. ಸಂಜೆ 7:40ರ ಸಾಮಾನ್ಯ ಏರ್ ಇಂಡಿಯಾ ವಿಮಾನದಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸಿ ರಾತ್ರಿ 10:20ಕ್ಕೆ ದೆಹಲಿ ತಲುಪಲಿದ್ದಾರೆ. ಏರ್‌ಪೋರ್ಟ್‌ಗೆ ತೆರಳುವಾಗ ಮಾಧ್ಯಮಗಳ ಪ್ರಶ್ನೆಗೆ ಏನೂ ಮಾತನಾಡದ ಡಿಕೆಶಿ, ಕೇವಲ ಕೈಮುಗಿದು ಮುಗುಳ್ನಕ್ಕು ಸಾಗಿದರು. ಅವರ ಸಹೋದರ ಡಿ.ಕೆ. ಸುರೇಶ್ ಈಗಾಗಲೇ ದೆಹಲಿ ತಲುಪಿ ಅಣ್ಣನಿಗಾಗಿ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
