ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅವರ ಸಹೋದರಿಯ ಪತಿ(ಬಾಮೈದ) ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ (Y Manjunath) ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದಿದ್ದ ಜಾರಿ ನಿರ್ದೇಶನಾಲಯದ (ED) ಸುದೀರ್ಘ ದಾಳಿ ಕೊನೆಗೂ ಅಂತ್ಯವಾಗಿದೆ.
ಸತತ 24 ಗಂಟೆಗಳ ಕಾಲ ನಡೆಸಿದ ಸುದೀರ್ಘ ಶೋಧಕಾರ್ಯದ ಬಳಿಕ ಇಡಿ ಅಧಿಕಾರಿಗಳು ಬೆಳಗಾವಿಯಿಂದ ನಿರ್ಗಮಿಸಿದ್ದಾರೆ. ಅಬಕಾರಿ ಇಲಾಖೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಇಡಿ ಅಧಿಕಾರಿಗಳು, ಬೆಳಗಾವಿ ನಗರದ ಟಿವಿ ಸೆಂಟರ್‌ನಲ್ಲಿರುವ ಮಂಜುನಾಥ್ ಅವರ ಮುಖ್ಯ ನಿವಾಸ ಸೇರಿದಂತೆ ಜಿಲ್ಲೆಯ ಒಟ್ಟು ಆರು ಕಡೆಗಳಲ್ಲಿ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ರಾಜ್ಯಾದ್ಯಂತ ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಕಡೆಗಳಲ್ಲಿ ಈ ದಾಳಿ ನಡೆದಿತ್ತು.
ಸದ್ಯ ಲಭ್ಯವಾಗಿರುವ ಎಲ್ಲಾ ಪ್ರಮುಖ ದಾಖಲೆಗಳೊಂದಿಗೆ ಇಡಿ ಅಧಿಕಾರಿಗಳ ತಂಡವು ಬೆಂಗಳೂರಿಗೆ ತೆರಳಿದ್ದು, ದಾಳಿಯ ಸಂಪೂರ್ಣ ವರದಿಯನ್ನು ಇಡಿ ನಿರ್ದೇಶಕರಿಗೆಸಲ್ಲಿಸಲಿದೆ. ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳು ಖಾಲಿ – ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ?
ಆರೋಪಗಳೇನು?
ಸರ್ಕಾರಿ ಸಂಬಳ ಪಡೆಯುತ್ತಲೇ ಕೋಟ್ಯಂತರ ರೂಪಾಯಿಗಳ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪ ಮಂಜುನಾಥ್ ಮೇಲಿದೆ. ಆದಾಯಕ್ಕಿಂತ ಅಧಿಕವಾಗಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಸಂಪಾದನೆ, ಅಬಕಾರಿ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದುಕೊಂಡೇ ಬೇರೆಯವರ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಬಾರ್ ಲೈಸೆನ್ಸ್ ಹೊಂದಿರುವ ಆರೋಪ, ದೇಶದ ಗಡಿ ದಾಟಿ ನಡೆದಿರುವ ಆರ್ಥಿಕ ವಹಿವಾಟುಗಳು, ಹವಾಲಾ ಮಾರ್ಗಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಇದನ್ನೂ ಓದಿ: ವೆನೆಜುವೆಲಾದಲ್ಲಿ 1 ನಿಮಿಷದ ಅಂತರದಲ್ಲಿ 7.2, 7.5 ತೀವ್ರತೆಯ ಭೂಕಂಪ – ಕಟ್ಟಡಗಳು ಕುಸಿತ, ಸಾವುನೋವಿನ ಶಂಕೆ
ಜೈಲು ಸೇರಿದ್ದ ಮಂಜುನಾಥ್
ವೈ. ಮಂಜುನಾಥ್ ವಿವಾದಗಳಿಗೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. 2009ರಿಂದ 2013ರವರೆಗೆ ಮೈಸೂರಿನಲ್ಲಿ ಅಬಕಾರಿ ಡಿಸಿ (DC) ಆಗಿದ್ದ ಅವಧಿಯಲ್ಲಿ ಲಂಚದ ಪ್ರಕರಣವೊಂದರಲ್ಲಿ ಲೋಕಾಯುಕ್ತ ಪೊಲೀಸರು ಇವರನ್ನು ಬಂಧಿಸಿದ್ದರು. ಆ ವೇಳೆ 15 ದಿನಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಇವರು ಬಿಡುಗಡೆಯಾಗಿ ಬಂದಾಗ, ಇವರ ಅಭಿಮಾನಿಗಳು ಜೈಲಿನಿಂದ ಬರೋಬ್ಬರಿ 2 ಕಿಲೋಮೀಟರ್ ದೂರ ಇವರನ್ನು ಹೆಗಲ ಮೇಲೆ (ತೋಳಿನಲ್ಲಿ) ಎತ್ತಿಕೊಂಡು ಮೆರವಣಿಗೆ ಮಾಡಿದ್ದರು. ಈ ಘಟನೆ ಆಗ ಇಡೀ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಹಾಗೂ ಸುದ್ದಿಗೆ ಗ್ರಾಸವಾಗಿತ್ತು.
