ನವದೆಹಲಿ: ಚುನಾವಣೆಯ ಸಮಯದಲ್ಲಿ ಮತದಾರರಿಗೆ ʼಗ್ಯಾರಂಟಿ ಯೋಜನೆʼಯ ಭರವಸೆ ನೀಡಿದ್ದ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಈಗ ʼಗ್ಯಾರಂಟಿ ಸಿಎಂʼ ಹುದ್ದೆ ನೀಡುವಂತೆ ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ.
ಹೈಕಮಾಂಡ್ ಇಬ್ಬರನ್ನೂ ಸಮಾಧಾನ ಪಡಿಸಲು ತಂತ್ರಗಳನ್ನು ಹೆಣೆಯುತ್ತಿದ್ದರೂ ಇಬ್ಬರೂ ಮೊದಲ ಅವಧಿಗೆ ನನ್ನನ್ನೇ ಸಿಎಂ ಮಾಡಬೇಕೆಂಬ ಜಿದ್ದಿಗೆ ಬಿದ್ದಿದ್ದಾರೆ. ವಿವಿಧ ಭಾಗ್ಯಗಳನ್ನು ನೀಡಿದ್ದ ಕಾಂಗ್ರೆಸ್ ಈಗ ಯಾರಿಗೆ ʼಗ್ಯಾರಂಟಿ ಸಿಎಂʼ ಭಾಗ್ಯ ನೀಡುತ್ತದೆ ಎನ್ನುವುದೇ ಸದ್ಯದ ಕುತೂಹಲ.
Advertisement
ಇಬ್ಬರೂ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮುಂದೆ ಬಲವಾದ ಬೇಡಿಕೆ ಇಟ್ಟು ಸಿಎಂ ಪಟ್ಟ ನೀಡುವಂತೆ ಆಗ್ರಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ವಾದ ಏನಿತ್ತು ಎಂಬುದನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ಸಿಎಂ ರೇಸ್ ಫೈಟ್ – ಹೈಕಮಾಂಡ್ ನಾಯಕರಲ್ಲಿ ಯಾರು ಯಾರ ಪರ?
Advertisement
Advertisement
ಸಿದ್ದರಾಮಯ್ಯ ಹೇಳಿದ್ದೇನು?
ಡಿಕೆಶಿಯ ಈ ಸೂತ್ರವನ್ನು ನಾನು ಒಪ್ಪುವುದಿಲ್ಲ. ಮಾಡುವುದಾದರೇ ನನ್ನನ್ನೇ ಮೊದಲು ಸಿಎಂ ಮಾಡಿ. ನಾನು ಕೂಡ ಒಪ್ಪಂದಕ್ಕೆ ಸಿದ್ದನಿದ್ದು, ಈ ವಿಚಾರವನ್ನು ನಾನು ಈ ಮೊದಲೇ ತಿಳಿಸಿದ್ದೇನೆ. ಇದು ಸಾಧ್ಯವಾಗದೇ ಇದ್ದರೆ ನನ್ನನ್ನೇ 5 ವರ್ಷವೂ ಸಿಎಂ ಆಗಿ ಮುಂದುವರಿಸಿ.
Advertisement
ಎರಡು, ಮೂರು ವರ್ಷ ಎಂದು ಹೇಳಿ ಗೊಂದಲ ಸೃಷ್ಟಿಸಬೇಡಿ. ಗೊಂದಲ, ಅನಿಶ್ಚಿತತೆಯಲ್ಲಿ ಸಿಎಂ ಆಯ್ಕೆ ಮಾಡುವುದು ಸರಿಯಲ್ಲ. ಇದು ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಇದು ನನ್ನ ಕೊನೆಯ ಚುನಾವಣೆಯಾಗಿರುವುದರಿಂದ ಸಿಎಂ ರೇಸ್‍ನಿಂದ ನನ್ನನ್ನು ಹಿಂದೆ ಸರಿಯಲು ಹೇಳಬೇಡಿ. ಇದನ್ನೂ ಓದಿ: ಅಮೆರಿಕಕ್ಕೆ ಹಾರಲಿದ್ದಾರೆ ರಾಹುಲ್ – 10 ದಿನ ಪ್ರವಾಸ
ನಾನು ಯಾವುದೇ ಕಾರಣಕ್ಕೆ ಹಿಂದೆ ಸರಿಯುವುದಿಲ್ಲ. ಡಿಕೆ ಶಿವಕುಮಾರ್‌ಗೂ ಇನ್ನೂ ಅವಕಾಶ ಸಿಗಲಿದೆ. ಈ ವಿಚಾರದಲ್ಲಿ ನೀವೇ ಡಿಕೆಶಿಯನ್ನು ಒಪ್ಪಿಸಬೇಕು. ನಾನು ಡಿಕೆಶಿಯನ್ನು ಒಪ್ಪಿಸುವ ಪ್ರಶ್ನೆಯೇ ಇಲ್ಲ.
ಡಿಕೆಶಿ ಹೇಳಿದ್ದೇನು?
ನಾನು ಅಧ್ಯಕ್ಷನಾಗಿ ಪಕ್ಷ ಅಧಿಕಾರಕ್ಕೆ ತಂದಿರುವ ಕಾರಣ ನನ್ನನ್ನು ಮುಖ್ಯಮಂತ್ರಿ ಮಾಡಬೇಕು. 50:50 ಸೂತ್ರವನ್ನು ನಾನು ಯಾವ ಗ್ಯಾರಂಟಿ ಮೇಲೆ ಒಪ್ಪಲಿ? ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಏನಾಗಿದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ.
ರಾಜಸ್ಥಾನದಲ್ಲಿ 50:50 ಸೂತ್ರ ಒಪ್ಪಿದ್ದ ಪೈಲಟ್‍ಗೆ ಅಧಿಕಾರ ಸಿಕ್ಕಿಲ್ಲ. ಖುದ್ದು ರಾಹುಲ್ ಗಾಂಧಿಯೇ ಭರವಸೆ ನೀಡಿದ್ದರು. ಆದರೆ ಅಲ್ಲಿ ಈಗ ಏನಾಗುತ್ತಿದೆ? ಈಗ ಸಚಿನ್ ಪೈಲಟ್‍ರನ್ನೇ ಪಕ್ಷದಿಂದ ಹೊರಹಾಕುವ ಹುನ್ನಾರ ನಡೆದಿದೆ.
ಛತ್ತೀಸ್‌ಗಢದಲ್ಲಿಯೂ ಹೆಸರಿಗಷ್ಟೇ 50:50 ಸೂತ್ರ ರೂಪಿಸಲಾಗಿತ್ತು. ಆದರೆ ಭೂಪೇಶ್ ಬಘೇಲ್ ಸಿಎಂ ಸ್ಥಾನವನ್ನು ಬಿಟ್ಟುಕೊಡಲೇ ಇಲ್ಲ. ಈಗಲೂ ಟಿಎಸ್ ಸಿಂಗ್ ದೇವ್‍ಗೆ ಅಲ್ಲಿ ಅಧಿಕಾರ ಸಿಕ್ಕಿಲ್ಲ. ಇದನ್ನು ನಾನು ನೋಡಿದ ಬಳಿಕವೂ 50:50 ಸೂತ್ರವನ್ನು ಹೇಗೆ ನಂಬುವುದು?
ಈ ಎಲ್ಲಾ ಕಾರಣಕ್ಕೆ ಮೊದಲ ಅವಧಿಗೆ ನಾನು ಸಿಎಂ ಆಗುತ್ತೇನೆ. ಉಳಿದ ಎರಡೂವರೆ ವರ್ಷದ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಲಿ. ಬೇಕಿದ್ದರೆ ಈ ವಿಚಾರದಲ್ಲಿ ನಾನು ಒಪ್ಪಂದಕ್ಕೆ ಸಹಿ ಹಾಕುತ್ತೇನೆ. 2.5 ವರ್ಷ ನಂತರದ ರಾಜೀನಾಮೆಗೆ ಈಗಲೇ ಪತ್ರ ಬರೆಸಿಕೊಳ್ಳಿ.
ಸಿದ್ದರಾಮಯ್ಯ ಹೇಳುವ 20 ಶಾಸಕರನ್ನು ಮಂತ್ರಿ ಮಾಡಲು ಸಹ ನಾನು ಸಿದ್ಧ. ಇದಕ್ಕೆ ಸಿದ್ದರಾಮಯ್ಯ ಅವರು ಒಪ್ಪಿಕೊಂಡು ಸಹಿ ಮಾಡಲಿ. ನಾನು ಮಾತಿಗೆ ತಪ್ಪುವವನಲ್ಲ. ನನ್ನ ಪಕ್ಷ ನಿಷ್ಠೆ ಪ್ರಶ್ನಿಸಲು ಅಸಾಧ್ಯ. ನನಗೆ ಡಿಸಿಎಂ ಹುದ್ದೆ ಬೇಡ. ಮೊದಲ ಅವಧಿಗೆ ನನ್ನನ್ನೇ ಮುಖ್ಯಮಂತ್ರಿಗಳನ್ನಾಗಿ ಮಾಡಿ. ಕೆಪಿಸಿಸಿ ಅಧ್ಯಕ್ಷರಾದವರಿಗೆ ಸಿಎಂ ಪಟ್ಟ ನೀಡುವ ಸಂಪ್ರದಾಯ ಇರುವುದರಿಂದ ನನ್ನ ವಾದಕ್ಕೆ ಮನ್ನಣೆ ನೀಡಿ.