ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಸಿಬ್ಬಂದಿ ಬಾಕ್ಸ್ ಅನ್ನು ಇನ್ನೋವಾ ಕಾರಿನಲ್ಲಿ ರವಾನಿಸಿದ ಬಗ್ಗೆ ತನಿಖೆ ಅಗತ್ಯವಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭದ್ರತಾ ಸಿಬ್ಬಂದಿ ಬಳಿ ಸಾಮಾನ್ಯವಾಗಿ ಭದ್ರತೆಗೆ ಸಂಬಂಧಿಸಿದ ಬಾಕ್ಸ್ ಇರುತ್ತದೆ. ಚಿತ್ರದುರ್ಗದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಬಾಕ್ಸ್ ಅನ್ನು ಪರಿಶೀಲನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗ ಸಮಾವೇಶದ ಬಳಿಕ ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಹೀಗಾಗಿ ಚಿತ್ರದುರ್ಗದಿಂದ ಬಾಕ್ಸ್ ರವಾನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
Advertisement
Advertisement
ಈ ಸಂಬಂಧ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ಅರುಣ್ ಅವರು, ಭದ್ರತಾ ಸಿಬ್ಬಂದಿ ಸಾಗಿಸಿದ ಟ್ರಂಕ್ ನಲ್ಲಿ ಭದ್ರತೆಗೆ ಸಂಬಂಧಿಸಿದ ಸಲಕರಣೆಗಳು ಇದ್ದವು. ಆ ಕಾರು ಕೂಡ ಬೆಂಗಾವಲು ಪಡೆಯ ವಾಹನವಾಗಿತ್ತು ಎಂದು ಭದ್ರತಾ ಸಂಸ್ಥೆಗಳಿಂದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅರುಣ್ ತಿಳಿಸಿದ್ದರು.
Advertisement
ಮೈಸೂರಿನಲ್ಲಿ ದರ್ಶನ್ ಫಾರ್ಮ್ ಹೌಸ್ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಇದು ನನ್ನ ಗಮನಕ್ಕೆ ಬಂದಿಲ್ಲ ಎಂದರು.
Advertisement
ಸುಪ್ರೀಂ ಕೋರ್ಟ್ ನಿರ್ದೇಶನ ಮೇರೆಗೆ ಚುನಾವಣೆಯ ನಡೆಯುವ 48 ಗಂಟೆಗಳ ಮುನ್ನ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ಕೆಲವೊಂದು ನಿಂಬಂಧನೆ ಇದೆ. ಅದರ ಪ್ರಕಾರ ನಡೆಯಬೇಕು. ಲೋಕಸಭಾ ಚುನಾವಣಾ ಅಭ್ಯರ್ಥಿಗಳ ವಿರುದ್ಧ ಯಾವುದಾದರು ಕ್ರಿಮಿನಲ್ ಕೇಸ್ ಇದೆಯೋ ಅವರೆಲ್ಲೋ ಮಾಹಿತಿ ಬಹಿರಂಗಪಡಿಸಬೇಕು. ಈ ಸಂಬಂಧ ಮೂರು ದಿನಗಳ ಒಳಗಾಗಿ ತಲಾ ಮೂರರಂತೆ ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಮಾಹಿತಿ ನೀಡಬೇಕು ಎಂದರು.
ಚುನಾವಣಾ ಪ್ರಚಾರದ ವೇಲೆ ಕೆಲ ಅಭ್ಯರ್ಥಿಗಳು ಎದುರಾಳಿ ಅಭ್ಯರ್ಥಿಯ ಖಾಸಗಿ ಜೀವನದ ಬಗ್ಗೆ ಮಾತಾನಾಡುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ದೂರು ಬಂದಿವೆ. ಈಗಾಗಲೇ ಈ ರೀತಿ ಮಾತನಾಡಬಾರದು ಎಂದು ತಿಳಿಸಿದ್ದೇವೆ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ ಕೂಡ ಖಡಕ್ ಸೂಚನೆ ನೀಡಿದೆ. ಆದರೂ ಕೆಲವರು ವೈಯಕ್ತಿಕ ಜೀವನದ ಮಾತನಾಡುತ್ತಿದ್ದಾರೆ. ಅಂತವರಿಗೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮತದಾನ ದಿನದ 48 ಗಂಟೆಗಳ ಮುಂಚೆ ಪಕ್ಷಗಳು ತಮ್ಮ ಅಭ್ಯರ್ಥಿಗಳ ಜಾಹೀರಾತು ನೀಡಲು ಚುನಾವಣಾ ಆಯೋಗದ ಪೂರ್ವಾನುಮತಿ ಅಗತ್ಯವಿದೆ. ಚುನಾವಣಾ ಸಮೀಕ್ಷೆ ಮತ್ತು ಸಂಬಂಧಿಸಿದ ಸುದ್ದಿ ಬಗ್ಗೆ ಏಪ್ರಿಲ್ 11ರಿಂದ ಮೇ 19ರವರೆಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಅಥವಾ ಪ್ರಕಟ ಮಾಡಬಾರದು ಎಂದರು.
ಕುಂದಗೋಳ ವಿಧಾನಸಭಾ ಉಪ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಏಪ್ರಿಲ್ 29ರಂದು ನಾಮಪತ್ರ ಸಲ್ಲಿಸಬೇಕು. ಹೊಸ ಮತದಾರರಿಗೆ ನೋಂದಾಯಿಸಲು ಅವಕಾಶವಿದೆ ಎಂದು ತಿಳಿಸಿದರು.
ದಾಖಲೆಗಳೆ ಇಲ್ಲದೆ ಸಾಗಿಸುತ್ತಿದ್ದ 7.53 ಕೋಟಿ ರೂ. ಮೌಲ್ಯದ ಕುಕ್ಕರ್, ಸೀರೆ, ಲ್ಯಾಪ್ ಟಾಪ್, ಸ್ಟವ್ಸ್, ಹೊಲಿಗೆ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇದೂವರೆಗೆ 77,63,11,056 ರೂ. ಅಕ್ರಮ ಹಣವನ್ನು ವಶಕ್ಕೆ ಪಡೆದಿದೆ ಎಂದು ಮಾಹಿತಿ ನೀಡಿದರು.